ಚಿಂತನೆ
– ಡಾ.ಸುಮಂಗಲಾ ಮೇಟಿ
ಸಹಾಯಕ ಪ್ರಾಧ್ಯಾಪಕರು
ಬಾಗಲಕೋಟೆ
ಉದಯರಶ್ಮಿ ದಿನಪತ್ರಿಕೆ
12ನೇ ಶತಮಾನದಲ್ಲಿ ಬಲವಾಗಿ ಶಿವಶರಣರು ನಡೆಸಿದ ಚಳುವಳಿಯಲ್ಲಿ ಸಮರ್ಪಣ ಮನೋಭಾವದಿಂದ ದುಡಿದ ಶಿವಶರಣರಲ್ಲಿ ವಯಸ್ಸಿನಲ್ಲಿ ಎಲ್ಲರಿಗಿಂತ ಚಿಕ್ಕವರಾದ ಇವರು ಹಿರಿಯರನ್ನು ಬೆರಗಾಗಿಸುವಂಥ ಜ್ಞಾನ ಪಡೆದವರು. ಬಸವಣ್ಣನವರ ನೇತೃತ್ವದಲ್ಲಿ ನಡೆದ ಅಭೂತಪೂರ್ವ ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಕ್ರಾಂತಿಗೆ ಒಂದು ಬಗೆಯ ತಾತ್ವಿಕ ನೆಲೆಗಟ್ಟನ್ನು ಒದಗಿಸಿದವರು ಚೆನ್ನಬಸವಣ್ಣನವರು. ಅವರ ವಚನಗಳಲ್ಲಿ ಕಂಡುಬರುವಷ್ಟು ತಾತ್ವಿಕ ವಿವೇಚನೆ ಸಮಕಾಲೀನ ವಚನಕಾರರಲ್ಲಿ ಕಂಡು ಬರುವುದಿಲ್ಲ.
ವಚನ
ಅರ್ಪಿತ ಅನರ್ಪಿತವೆಂಬ ಉಭಯಕುಳದ ಶಂಕೆವುಳ್ನಕ್ಕರ
ಅಚ್ಚ ಸಂಸಾರಿಯೆಂಬೆ ಅರ್ಪಿತ ಅನರ್ಪಿತವೆಂಬೆರಡ ಕಳೆದು ನಿಂದಾಗಿ ಅಚ್ಚಲಿಂಗವಂತನೆಂಬೆ, ಅರ್ಪಿತ ಅನರ್ಪಿತವನರ್ಪಿಸಿ ಪ್ರಸಾದ ಸ್ವೀಕರಿಸುತ್ತಿತ್ತು ವಾಙ್ಮನಾತೀತನೆಂಬೆ, ಅರ್ಪಿತವಿಲ್ಲ ಅರ್ಪಿತವಿಲ್ಲ, ಅಕಲ್ಪಿತವಯ್ಯಾ ಕೂಡಲಚೆನ್ನಸಂಗಮದೇವಾ
ವಿಶ್ಲೇಷಣೆ
ಅರ್ಪಣ ವಿಧಾನದ ಮೂಲಕ ಪದಾರ್ಥವನ್ನು ಪ್ರಸಾದವಾಗಿಸುವ, ಅಂಗಭೋಗವನ್ನು ಲಿಂಗರೂಪಿಯಾಗಿ ವಿನೂತನ ವಿಧಾನವನ್ನು ಅಳವಡಿಸಿದರು.
ಚೆನ್ನಬಸವಣ್ಣನವರ ಮುಖ್ಯ ಉದ್ದೇಶ ಲಿಂಗಾಯತ ಸಿದ್ಧಾಂತವನ್ನು ಯುಗಧರ್ಮಕ್ಕೆ ಹೊಂದಿಕೊಳ್ಳುವಂತೆ ಸಾಮಾನ್ಯ ಜನರಿಗೆ ವಿವರಿಸುವದಾಗಿತ್ತು.
ಅರ್ಪಿತ ಎಂಬ ಸಮರ್ಪಣ ಭಾವ ಮತ್ತು ಅನರ್ಪಿತ ಎಂಬ ಅಸಮರ್ಪಣ ಭಾವಗಳ ಮಹತ್ವವನ್ನು ಈ ವಚನದ ಮೂಲಕ ತಿಳಿಸಿದ್ದಾರೆ.
ಸಮರ್ಪಣ ಮತ್ತು ಅಸಮರ್ಪಣ ಎಂಬ ಎರಡು ಬಗೆಯ ಶಂಕೆ, ಅನುಮಾನಗಳಿದ್ದರೆ ಅವರನ್ನು ಅಚ್ಚ ಸಂಸಾರಿ ಎನ್ನುವೆನು.
ಅರ್ಪಿತ ಅನರ್ಪಿತ ಎಂಬ ಎರಡು ಭಾವಗಳನ್ನು ಕಳೆದು ನಿಂತವನೇ ಅಚ್ಚ ಲಿಂಗವಂತನು ಎನ್ನುವರು. ಅರ್ಪಿತ ಮತ್ತು ಅನರ್ಪಿತವನ್ನು ಅರ್ಪಿಸಿ ಪ್ರಸಾದ ಸ್ವೀಕರಿಸಲು ತಿಳಿದವನನ್ನು ವಾಙ್ಮಯಾತೀತವೆನ್ನುವೆನು. ಅರ್ಪಿತವೂ ಇಲ್ಲ, ಅನರ್ಪಿತವೂ ಇಲ್ಲ ಎಂಬುದು ಅಕಲ್ಪಿತವಯ್ಯಾ ಅಂದರೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ತನ್ನ ಆರಾಧ್ಯ ದೈವ ಕೂಡಲ ಚೆನ್ನಸಂಗಮದೇವನಲ್ಲಿ ನಿವೇದಿಸಿಕೊಳ್ಳುವರು.

