ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಗರ್ಭಿಣಿಯರಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡುವುದರಿಂದ ಮಗುವಿನ ಬೆಳವಣಿಗೆ ಮತ್ತು ತಾಯಿಯ ಆರೋಗ್ಯಕ್ಕೆ ಪೂರಕವಾಗಿರುತ್ತದೆ ಎಂದು ಬಸವನ ಬಾಗೇವಾಡಿ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕವಿತಾ ದೊಡಮನಿ ಹೇಳಿದರು.
ತಾಲೂಕಿನ ಕೂಡಗಿ ಎನ್‌ಟಿಪಿಸಿ ವ್ಯಾಪ್ತಿಯ ಮಹಾಶಕ್ತಿನಗರದಲ್ಲಿ ಪ್ರಸಕ್ತ ಸಾಲಿನ ಎನ್‌ಟಿಪಿಸಿ ಸಿಎಸ್‌ಆರ್ ಯೋಜನೆಯಡಿ ಇತ್ತೀಚೆಗೆ ನಡೆದ ಗರ್ಭಿಣಿಯರಿಗೆ ಪೌಷ್ಟಿಕಾಂಶ ಆಹಾರಗಳ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ರೋಗಕ್ಕೆ ಔಷಧಿ ನೀಡುವ ಬದಲಾಗಿ ರೋಗ ಬರದಂತೆ ನೋಡಿಕೊಳ್ಳುವುದು ಜಾಣತನ. ಗರ್ಭಿಣಿಯರಿಗೆ ಪೌಷ್ಟಿಕಾಂಶ ಆಹಾರಗಳ ಕಿಟ್ ವಿತರಣೆ ಆ ಒಂದು ಪ್ರಯತ್ನವಾಗಿದೆ. ಗರ್ಭಿಣಿಯರು ಪಡೆದಂತ ಈ ಕಿಟ್‌ನಲ್ಲಿ ಹೆಸರುಕಾಳು, ಮಾತ್ ದಾಲ್, ಬೆಲ್ಲ, ಕಡಲೆಕಾಳು, ಫೋಲಿಕ್ ಆ್ಯಸಿಡ್ ಸಿರಫ್ ಮತ್ತು ಪ್ರೋಟಿನ್ ಪೌಡರ್ ಇದ್ದು ಗರ್ಭಿಣಿಯರು ತಮ್ಮ ಗರ್ಭಧಾರಣೆಯ ೫ ರಿಂದ ೮ ನೇ ತಿಂಗಳಿನಲ್ಲಿ ಇದನ್ನು ಸೇವಿಸುವುದರಿಂದ ಆರೋಗ್ಯ ಮತ್ತು ಯೋಗಕ್ಷೇಮವನ್ನು ಬೆಂಬಲಿಸಲು ಸಹಕಾರಿಯಾಗಲಿದೆ ಎಂದರು.
ಎನ್‌ಟಿಪಿಸಿ ಮಿತಾಲಿ ಮಹಿಳಾ ಮಂಡಳಿ ಅಧ್ಯಕ್ಷೆ ಅಂಜು ಝಾ ಮಾತನಾಡಿ, ಪ್ರಸ್ತುತ ೧೬೦ ಜನ ಗರ್ಭಿಣಿಯರಿಗೆ ವಿತರಿಸಲಾದ ಈ ಕಿಟ್‌ನಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಪ್ರೇರಕ ಶಕ್ತಿಯನ್ನು ನೀಡಬೇಕೆಂಬುದು ನಮ್ಮ ಆಶಯವಾಗಿದೆ ಎಂದರು.
ಮಿತಾಲಿ ಮಹಿಳಾ ಮಂಡಳಿ ಉಪಾಧ್ಯಕ್ಷೆ ಪ್ರೀತಿ ತಿವಾರಿ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಕಾಲಿಯಾ ಮೂರ್ತಿ, ಸುಶ್ರುತ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಜ್ ಬೋರ್ವಾಂಕರ್, ವೈದ್ಯಕೀಯ ಅಧಿಕಾರಿ ಮನೀಶಾ ಬೋರ್ವಾಂಕರ್ ಮತ್ತಿತರರು ಇದ್ದರು.