ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಮುದ್ದೇಬಿಹಾಳ ರಸ್ತೆಯಲ್ಲಿರುವ ಇವಣಗಿ ಕೂಡು ರಸ್ತೆ ಹತ್ತಿರ ಇರುವ ಟೀ ಜೋನ್ ಅಂಗಡಿ ಮುಂಭಾಗ ಬೀದಿ ವ್ಯಾಪಾರಿಗಳ ಮೇಲೆ ಆಗುತ್ತಿರುವ ದೌರ್ಜನ್ಯ ಎಸಗುವ ಪುರಸಭೆ ಆಡಳಿತ ಹಾಗೂ ಮುಖ್ಯಾಧಿಕಾರಿಗಳ ದುರಾಡಳಿತವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಒಕ್ಕೂಟ ಶಾಖೆಯ ಮುಖಂಡರು ಮಂಗಳವಾರ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದರು.
ಪ್ರತಿಭಟನೆ ಉದ್ದೇಶಿಸಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಪರಶುರಾಮ ದಿಂಡವಾರ, ಅಶೋಕ ಚಲವಾದಿ, ಗುರುರಾಜ ಗೂಡಿಮನಿ ಮಾತನಾಡಿ, ಪಟ್ಟಣದಲ್ಲಿ ಕೆಲ ಗಣ್ಯ ವರ್ತಕರು ಕಾನೂನು ಬಾಹಿರವಾಗಿ ಪಾದಚಾರಿ ರಸ್ತೆ ಮೇಲೆ ತಮ್ಮ ಅಂಗಡಿಗಳ ಮೆಟ್ಟಿಲು ಮಾಡಿಕೊಂಡಿದ್ದಾರೆ. ಪುರಸಭೆ ಮುಖ್ಯಾಧಿಕಾರಿಗಳು ಇದನ್ನು ಬಿಟ್ಟು ಬಡ ವ್ಯಾಪಾರಸ್ಥರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಪಾದಚಾರಿ ರಸ್ತೆ ಬಿಟ್ಟು ಇದರ ಹಿಂದೆ ಇಂರುವ ಅಂಗಡಿಗಳನ್ನು ತೆರವು ಗೊಳಿಸುವ ಮೂಲಕ ಬಡವರ ಹೊಟ್ಟೆ ಮೇಲೆ ಬರೆ ಎಳೆಯುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಮುಖ್ಯಾಧಿಕಾರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಂಡು ಬಡವರಿಗೆ ನ್ಯಾಯ ಒದಗಿಸಬೇಕು. ಒಂದು ವೇಳೆ ನ್ಯಾಯ ಒದಗಿಸದೇ ಹೋದರೆ ಮುಂಬರುವ ದಿನಗಳಲ್ಲಿ ತಹಸೀಲ್ದಾರ ಕಚೇರಿ ಮುಂಭಾಗ ನಮ್ಮ ಪ್ರತಿಭಟನೆ ಮುಂದುವರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.