ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಬರುವ ೧೨೮ ಗ್ರಾಮಗಳಲ್ಲಿ, ೩೧ ತಾಂಡಾಗಳಲ್ಲಿ ಯಾವ ಸಮಸ್ಯೆಗಳಿವೆ ಎಂಬುವದನ್ನು ಅರಿತು ಅಗತ್ಯತೆ ಇರುವ ಕಾಮಗಾರಿಗಳನ್ನು ಮತಕ್ಷೇತ್ರದಲ್ಲಿ ಆದ್ಯತೆ ಮೇರೆಗೆ ಮೊದಲು ಕೈಗೊಳ್ಳುವ ಮೂಲಕ ಮತಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡುವ ಮೂಲಕ ಮತಕ್ಷೇತ್ರದ ಮತದಾರರ ಋಣ ತೀರಿಸುವುದಾಗಿ ದೇವರಹಿಪ್ಪರಗಿ ಶಾಸಕ ಭೀಮನಗೌಡ(ರಾಜುಗೌಡ) ಪಾಟೀಲ ಹೇಳಿದರು.
ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ೫೦೫೪ ಸಿಆರ್ಐಎಫ್ ೨೦೨೩-೨೪ ಸಾಲಿನ ಕೇಂದ್ರ ರಸ್ತೆ ನಿಧಿ ಯೋಜನೆಯಡಿಯಲ್ಲಿ ಅಂದಾಜು ರೂ.೬ ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ವಿಜಯಪುರ-ಉಕ್ಕಲಿ-ದಿಂಡವಾರ-ಸಾಸನೂರ ರಸ್ತೆ(ಆಯ್ದ ಭಾಗಗಳಲ್ಲಿ) ಸುಧಾರಣೆ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಆಡಳಿತ ಸರ್ಕಾರದ ಟೀಕೆ ಮಾಡಲು ನಾನು ಹೋಗಲ್ಲ. ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆಯಾಗುತ್ತಿದೆ ಎಂಬುವದು ಜಗಜಾಹೀರರಾಗಿದೆ. ಇಂತಹ ಸನ್ನಿವೇಶದಲ್ಲಿಯೂ ನಾನು ವಿವಿಧ ಇಲಾಖೆಗಳನ್ನು ಸಂಪರ್ಕಿಸಿ ಮತಕ್ಷೇತ್ರದಲ್ಲಿರುವ ಗ್ರಾಮಗಳಿಗೆ ಬೇಕಾದ ಅಭಿವೃದ್ಧಿ ಕಾಮಗಾರಿಗೆ ಬೇಕಾದ ಅನುದಾನ ತರುವ ಮೂಲಕ ಮತಕ್ಷೇತ್ರದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೇನೆ. ಮತಕ್ಷೇತ್ರದಲ್ಲಿ ಸಂಚರಿಸಿ ಜನರಿಗೆ ಬೇಕಾದ ಕಾರ್ಯಗಳನ್ನು ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ ಎಂದ ಅವರು, ಈಗ ಕೈಗೊಂಡಿರುವ ಏಳು ಕಿ.ಮೀ. ರಸ್ತೆ ಸುಧಾರಣೆಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು.
ತಾಲೂಕಿನ ದಿಂಡವಾರದಿಂದ ನಾಲತವಾಡದವರೆಗೂ ಈಗಾಗಲೇ ೧ ಸಾವಿರ ಕೋಟಿ ಅನುದಾನದಲ್ಲಿ ರಾಜ್ಯ ಹೆದ್ದಾರಿ ಕಾಮಗಾರಿ ಮುಂಬರುವ ದಿನಗಳಲ್ಲಿ ಆರಂಭವಾಗಲಿದೆ. ನಮ್ಮ ಮತಕ್ಷೇತ್ರದಲ್ಲಿ ದಿಂಡವಾರದಿಂದ ಸಾಸನೂರದವರೆಗೂ ಈ ರಾಜ್ಯ ಹೆದ್ದಾರಿ ಹಾಯ್ದುಹೋಗಲಿದೆ. ಈ ರಸ್ತೆ ನಿರ್ಮಾಣದಿಂದಾಗಿ ಈ ಭಾಗದ ಜನರ ಸಂಚಾರಕ್ಕೆ ತುಂಬಾ ಅನುಕೂಲವಾಗುತ್ತದೆ. ರಾಜ್ಯ ಹೆದ್ದಾರಿ ನಿರ್ಮಾಣದ ವೇಳೆ ರೈತರ ಜಮೀನು, ಗಿಡ-ಮರ, ಏನಾದರೂ ಹೋಗುತ್ತಿದ್ದರೆ ಅದಕ್ಕೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.ಲಿಂಗಸೂರು-ಶಿರಾಳಡೋಣ ರಾಷ್ಟ್ರೀಯ ಹೆದ್ದಾರಿಗೂ ಮೂಹರ್ತ ಕೂಡಿಬರುವ ಲಕ್ಷಣಗಳು ಸಹ ಕಾಣುತ್ತಿವೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಇದಕ್ಕೆ ಇಷ್ಟರಲ್ಲೇ ಇದಕ್ಕೆ ಅನುಮೋದನೆ ನೀಡುವ ನಿರೀಕ್ಷೆಯಿದೆ ಎಂದರು.
ನಾನು ಮೂಲ ಬೂದಿಹಾಳ ಗ್ರಾಮದವನಾಗಿರುವದರಿಂದ ಈ ಗ್ರಾಮದಲ್ಲಿ ಈಗಾಗಲೇ ಮೂರು ದೇವಸ್ಥಾನಗಳಿಗೆ, ಶಾಲಾ ದುರಸ್ತಿಗೆ, ಸಿಸಿ ರಸ್ತೆ ಸೇರಿದಂತೆ ವಿವಿಧ ಕಾಮಗಾರಿ ಸೇರಿದಂತೆ ರೂ.೧ ಕೋಟಿ ಈಗಾಗಲೇ ಬಿಡುಗಡೆ ಮಾಡಿಸಿ ಕಾಮಗಾರಿ ಕೈಗೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಡಾ.ಅಂಬೇಡ್ಕರ ಭವನ, ಯಾಳವಾರಕ್ಕೆ ಹೋಗುವ ರಸ್ತೆ ಸೇರಿದಂತೆ ಗ್ರಾಮಸ್ಥರ ಉಳಿದ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದರು.
ಆನಂದ ತಾಳಿಕೋಟಿ ಮಾತನಾಡಿ, ಈಗಾಗಲೇ ಬೂದಿಹಾಳ ಗ್ರಾಮಸ್ಥರ ಮನವಿಯಂತೆ ಶಾಸಕರು ಸಾಕಷ್ಟು ಅಭಿವೃದ್ಧಿ ಗ್ರಾಮದಲ್ಲಿ ಕೈಗೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಮಹಾಲಕ್ಷ್ಮೀ ದೇವಿ ದೇವಸ್ಥಾನದ ಕಲ್ಯಾಣ ಮಂಟಪ ನಿರ್ಮಾಣ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಮುಖಂಡರಾದ ಸಚೀನಗೌಡ ಪಾಟೀಲ, ಗುರನಗೌಡ ಪಾಟೀಲ, ವಿಜಯಾನಂದ ಪಾಟೀಲ, ಸದಪ್ಪಗೌಡ ರೂಡಗಿ, ನಿಂಗಯ್ಯ ಹಿರೇಮಠ, ಸಿದ್ದನಗೌಡ ಬಿರಾದಾರ, ರುದ್ರಗೌಡ ಹಂಚಲಿ, ಗುರನಗೌಡ ತಾವರಖೇಡ, ಈರಯ್ಯ ಹಿರೇಮಠ, ಪ್ರಲ್ಹಾದ ತಳವಾರ, ಭೀಮನಗೌಡ ಬಿರಾದಾರ, ಅಕ್ಷಯ ಗಬ್ಬೂರ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎಇ ಪ್ರಶಾಂತ ಚಟ್ಟರಕ್ಕಿ, ಗುತ್ತಿಗೆದಾರ ಎಸ್.ಐ.ಡೋಣೂರಮಠ ಇತರರು ಇದ್ದರು.
ಬಸವರಾಜ ಬಾಗೇವಾಡಿ ಸ್ವಾಗತಿಸಿ, ನಿರೂಪಿಸಿದರು.