ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಅದೆಷ್ಟೋ ಜೀವ ಸಂಕುಲಗಳಿಗೆ ಆಶ್ರಯ ನೀಡಿರುವ ಭೂಮಿಗೆ ತೊಂದರೆಯಾಗದಂತೆ ನೋಡಿಕೊಳ್ಳುವದು ನಮ್ಮೆಲ್ಲರ ಜವಾಬ್ದಾರಿ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರೂ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರದ ಮೇಲೆ ಮನುಷ್ಯನ ಪ್ರಹಾರ ಹೆಚ್ಚುತ್ತಿರುವದರಿಂದ ಸಧ್ಯದ ದಿನಗಳಲ್ಲಿ ಪರಿಸರವನ್ನು ರಕ್ಷಿಸುವ ತೀವ್ರ ಅಗತ್ಯತೆ ಇದೆ. ಸಾರ್ವಜನಿಕರ ಸಹಭಾಗಿತ್ವ ಮತ್ತು ದೈನಂದಿನ ಜೀವನದಲ್ಲಿ ಸಕಾರಾತ್ಮಕ ಕ್ರಮಗಳ ಅಳವಡಿಕೆಯಿಂದ ಮಾತ್ರ ಪರಿಸರವನ್ನು ಸ್ವಚ್ಛವಾಗಿಡಲು ಸಾಧ್ಯ. ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ಭೂಮಿಯನ್ನು ರಕ್ಷಿಸಲು ಸಾಧ್ಯ. ಹಾಗಾಗಿ ಇವತ್ತಿನಿಂದಲೇ ಭೂಮಿಗೆ ಮಾರಕವಾದ ವಸ್ತುಗಳ ಬಳಕೆಯನ್ನು ಪ್ರತಿಯೊಬ್ಬರೂ ಕೈಬಿಡೋಣ, ಪರಿಸರವನ್ನು ಸ್ವಚ್ಛವಾಗಿರಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಮಾತನಾಡಿ ಭೂಮಿ ವಿನಾಶದ ಹಂತಕ್ಕೆ ತಲುಪುತ್ತಿದೆ. ಇದರಿಂದ ತಪ್ಪಿಸಲು ವಿಶ್ವ ಭೂಮಿ ದಿನವನ್ನು ಆಚರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಮನುಷ್ಯ ಮಾತ್ರ ಭೂಮಿಗೆ ಮಾರಕವಾದ ವಸ್ತುಗಳ ಬಳಕೆಯನ್ನು ಕಡಿಮೆ ಮಾಡುತ್ತಿಲ್ಲ. ಹೀಗೆ ಮುಂದುವರೆದರೆ ಮುಂದೊಂದು ದಿನ ಘೋರ ಸವಾಲನ್ನು ಎದುರಿಸುವ ಸಂದರ್ಭ ಬಂದೊದಗುವದರಲ್ಲಿ ಸಂಶಯವಿಲ್ಲ. ಕಾರಣ ನಾವೆಲ್ಲರೂ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದರು.
ನ್ಯಾಯವಾದಿ ಎಸ್.ಎಸ್.ಬಿರಾದಾರ ವಿಶೇಶ ಉಪನ್ಯಾಸ ನೀಡಿದರು. ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳೂ ಹಾಗೂ ಸಿವಿಲ್ ನ್ಯಾಯಾಧೀಶರಾದ ಸಂಪತ್ತಕುಮಾರ ಬಳೂಲಗಿಡದ, ಅಪರ ಸರ್ಕಾರಿ ವಕೀಲ ಎಚ್.ಎಲ್.ಸರೂರ, ಕಿ.ಶ್ರೇ ಸಹಾಯಕ ಸರ್ಕಾರಿ ಅಭಿಯೋಜಕ ಬಸವರಾಜ ಆಹೇರಿ, ನ್ಯಾ.ಸಂಘದ ಪ್ರ.ಕಾರ್ಯದರ್ಶಿ ಪಿ.ಬಿ.ಗೌಡರ, ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ, ಹಿರಿಯ ನ್ಯಾಯವಾದಿಗಳಾದ ಜೆ.ಎ.ಚಿನಿವಾರ, ಬಿ.ಆರ್.ನಾಡಗೌಡರ, ನ್ಯಾಯವಾದಿಗಳಾದ ಎಚ್.ಟಿ.ಪೂಜಾರಿ, ಚೇತನ ಶಿವಶಿಂಪಿ, ಎಂ.ಎಲ್.ರಿಸಾಲದಾರ, ಶೋಭಾ ಪಾಟೀಲ, ಸೇವಾ ಸಮಿತಿಯ ಆಡಳಿತ ಸಹಾಯಕ ಅರವಿಂದ ಕುಂಬಾರ, ದಲಾಯತ ಮಹಾಂತೇಶ ಹಚರೆಡ್ಡಿ, ಇಸಾಕ ಒಂಟಿ ಸೇರಿದಂತೆ ಮತ್ತೀತರರು ಇದ್ದರು. ಹಿರಿಯ ನ್ಯಾಯವಾದಿ ಎನ್.ಆರ್.ಮೊಕಾಶಿ ಕಾರ್ಯಕ್ರಮ ನಿರ್ವಹಿಸಿದರು.