ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ದಿ.ಮುತ್ತಪ್ಪ ರೈ ಅವರ ಮಗ ರಿಕ್ಕಿ ರೈ ಇವರ ಮೇಲೆ ನಡೆದಿರುವ ದಾಳಿಯ ಕುರಿತು ಸೂಕ್ತ ತನಿಖೆ ಹಾಗೂ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಹಾಗೂ ರಿಕ್ಕಿ ರೈ ಕುಟುಂಬಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಜಯ ಕರ್ನಾಟಕ ಸಂಘಟನೆ ವತಿಯಿಂದ ರಾಜ್ಯದ ಗೃಹ ಸಚಿವರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು.
ಈ ಸಮಯದಲ್ಲಿ ಜಯ ಕರ್ನಾಟಕ ಸಂಘಟನೆಯ ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ ಸಿದ್ದನಗೌಡ ದಾಶ್ಯಾಳ ಮಾತನಾಡಿ, ಎಲ್ಲ ಜನರಿಗೆ ನ್ಯಾಯ ಒದಗಿಸುವಲ್ಲಿ ಸಂಘಟನೆಯು ತನ್ನನ್ನು ತಾನು ತೊಡಗಿಸಿಕೊಂಡಿದೆ. ಇಂತಹ ಸಂಘಟನೆಯ ಸಂಸ್ಥಾಪಕರ ಮಗನ ಮೇಲೆ ಯಾರೋ ಕಿಡಿಗೇಡಿಗಳು ಗುಂಡಿನ ದಾಳಿ ಮಾಡಿದ್ದು, ಸದ್ಯ ಇವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಮೇಲೆ ಹಲ್ಲೆ ಮಾಡಿರುವ ದುಷ್ಟರನ್ನು ಶೀಘ್ರದಲ್ಲಿ ಸರಕಾರವ ಸೂಕ್ತ ತನಿಖೆ ಕೈಗೊಂಡು ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಹಾಗೂ ಈ ದಾಳಿಯಿಂದ ಬೆಚ್ಚಿಬಿದ್ದಿರುವ ಇವರ ಕುಟುಂಬಕ್ಕೆ ಸೂಕ್ತ ಪೊಲೀಸ್ ಭದ್ರತೆ ನೀಡಿ ರಿಕ್ಕಿ ರೈ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಸಿದ್ದರಾಜ ಹೊಳಿ, ಶಂಕರ ಮಾನೆ, ಖಂಡು ಭಿಸೆ, ಸಿದ್ರಾಮ ಅವಟಿ, ಸಂತೋಷ ಮನಗೂಳಿ, ಗುರು ಗೋಡೇಕಾರ, ಸಂತೋಷ ನನ್ನವರೆ, ಇಬ್ರಾಹಿಂ ಹತ್ತರಕಿಹಾಳ, ಶಕೀಲ ರಿಜ್ವಾನ ಮುಲ್ಲಾ, ಇನ್ನಿತರರು ಕಾರ್ಯಕರ್ತರು ಉಪಸ್ಥಿತರಿದ್ದರು.

