ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಭಾರತೀಯ ವಕೀಲರ ಪರಿಷತ್ತಿನ ಸಹ ಅಧ್ಯಕ್ಷ ಮತ್ತು ರಾಜ್ಯದ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಸದಾಶಿವರೆಡ್ಡಿ ಅವರ ಮೇಲೆ ಅಪರಿಚಿತರು ದಾಳಿ ಮಾಡಿ ಭೀಕರ ಹಲ್ಲೆ ಮಾಡಿರುವದನ್ನು ಇಲ್ಲಿನ ವಕೀಲರ ಸಂಘವು ಬಲವಾಗಿ ಖಂಡಿಸಿತು.
ಪಟ್ಟಣದ ನ್ಯಾಯಾಲಯದ ಕಲಾಪಗಳಲ್ಲಿ ಎಲ್ಲ ನ್ಯಾಯವಾದಿಗಳು ಕೈಗೆ ಕೆಂಪು ಪಟ್ಟಿ ಕಟ್ಟಿ ಮೌನ ಪ್ರತಿಭಟನೆ ಮಾಡಿದರು.
ಈ ಕುರಿತು ವಕೀಲರ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಪತ್ರಿಕೆಯೊಂದಿಗೆ ಮಾತನಾಡಿ, ಈ ಘಟನೆ ಅಮಾನವೀಯ. ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಯಲ್ಲಿದ್ದರೂ ಇಂತಹ ಘಟನೆಗಳು ನಡೆಯುತ್ತಿರೋದು ವಕೀಲರ ಸಮುದಾಯಕ್ಕೆ ಆತಂಕವನ್ನುಂಟು ಮಾಡಿದೆ. ಈ ಘಟನೆಯಲ್ಲಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮವಾಗಬೇಕು ಎಂದರು.
ಸಂಘದ ವತಿಯಿಂದ ಕೈಗೆ ಕೆಂಪು ಪಟ್ಟಿ ಧರಿಸಿಯೇ ತಹಸೀಲ್ದಾರ ಕಚೇರಿಯವರೆಗೆ ಕಾಲ್ನಡಿಗೆಯ ಮೂಲಕ ಸಾಗಿ ತಹಸೀಲ್ದಾರ ಬಲರಾಮ ಕಟ್ಟಿಮನಿ ಅವರ ಮೂಲಕ ಮುಖ್ಯ ಮಂತ್ರಿಗಳಿಗೆ ಮತ್ತು ಗೃಹ ಮಂತ್ರಿಗಳಿಗೆ ಘಟನೆಯ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಸಂಘದ ಪ್ರ.ಕಾರ್ಯದರ್ಶಿ ಪಿ.ಬಿ.ಗೌಡರ, ಸದಸ್ಯರಾದ ಎಸ್.ಬಿ.ಬಾಚಿಹಾಳ, ಸುರೇಶ ಅಮರಣ್ಣವರ, ಚೇತನ ಶಿವಶಿಂಪಿ, ಎಚ್.ಎಚ್.ಬಡಿಗೇರ, ಹಸೀನಾ ಅನಂತಪುರ, ರೇಣುಕಾ ಪಾಟೀಲ, ರಶ್ಮಿ ಕುಲಕರ್ಣಿ, ವಿ.ಸಿ.ಉರಾನ, ಆರ್.ಎಂ.ಢವಳಗಿ, ಆರ್.ಎಸ್.ಬಿರಾದಾರ, ಎಸ್.ಎಲ್.ಕಳ್ಳಿಗುಡ್ಡ, ಕಾರಕೂನ ಗಫೂರ ಅವಟಿ ಸೇರಿದಂತೆ ಮತ್ತೀತರರು ಇದ್ದರು.

