ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ (ಅ)ಪರಿಚಿತ ಓದುಗರ ಐದನೆಯ ಭೇಟಿ ಕಾರ್ಯಕ್ರಮ ರವಿವಾರ ಜರುಗಿತು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಬಂದಿದ್ದ ಪ್ರೊ ಸಿದ್ದು ಸಾವಳಸಂಗ ಅವರು ಮಾತನಾಡುತ್ತಾ, ‘ಇಂದಿನ ಯುವಕರು ಬದುಕನ್ನು ಹಾಗೂ ಸಾಹಿತ್ಯವನ್ನು ಕಟ್ಟುವ ಗುರುತರ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಸಾಹಿತ್ಯ ಆಸಕ್ತಿ ಕಡಿಮೆಯಾಗುತ್ತಿರುವ ಇಂದಿನ ದಿನದಲ್ಲಿ ಕನ್ನಡ ಸಾಹಿತ್ಯದ ಗ್ರಂಥಗಳನ್ನು ಓದುವವರ ಸಂಖ್ಯೆಯನ್ನು ವೃದ್ಧಿಸಬೇಕಾಗಿದೆ’ ಎಂದು ಅವರು ಹೇಳಿದರು.
ವಿಜಯಪುರದ ಬಾರಾಕಮಾನಿನಲ್ಲಿ ನಡೆದ (ಅ)ಪರಿಚಿತ ಓದುಗರ ಐದನೆಯ ಭೇಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಂಜಾನೆ ೧೦.೦೦ ಗಂಟೆಗೆ ಆಗಮಿಸಿದ ಸಾಹಿತ್ಯಸಕ್ತರು ಬಾರಾಕಮಾನ ಉದ್ಯಾನವನದಲ್ಲಿ ಅಲ್ಲಲ್ಲಿ ಕುಳಿತು ತಾವು ತಂದಿರುವ ಪುಸ್ತಕಗಳನ್ನು ಓದಿದರು. ಮಧ್ಯಾಹ್ನ ೧೨ ಗಂಟೆಗೆ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು. ಏಪ್ರಿಲ್ ೨೩ ರಂದು ‘ವಿಶ್ವ ಪುಸ್ತಕ ದಿನ’ದ ಪ್ರಯುಕ್ತ ‘ಉತ್ತಮ ಓದುಗ ಸ್ಪರ್ಧೆ’ ಆಯೋಜನೆ ಮಾಡಲಾಗಿತ್ತು. ಬಂದಿರುವಂತ ಸಾಹಿತ್ಯ ಆಸಕ್ತರು ತಾವು ಓದಿದ ಪುಸ್ತಕಗಳ ಕುರಿತು ಪರಿಚಯ ಹಾಗೂ ವಿಮರ್ಶೆ ಮಾಡಿದರು. ಆರು ಜನ ಈ ಚಟುವಟಿಕೆಯಲ್ಲಿ ತುಂಬ ಆಸಕ್ತಿಯಿಂದ ಭಾಗವಹಿಸಿದ್ದರು. ಭಾಗವಹಿಸಿದ ವ್ಯಕ್ತಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಎಂದು ಪ್ರಮಾಣ ಪತ್ರದೊಂದಿಗೆ ಪುಸ್ತಕವನ್ನು ಕೊಡುಗೆಯಾಗಿ ನೀಡಲಾಯಿತು. ಲೋಹಿತ್ ಹವೇಲಿ, ( ಕೃಷಿ ಮಹಾವಿದ್ಯಾಲಯ ವಿಜಯಪುರ ) ಇವರು ಪುಸ್ತಕ ಕೊಡುಗೆಯನ್ನು ನೀಡಿದರು. ಅಲ್ಲದೆ ಬೇರೆ ಕೆಲವು ಜನ ತಾವು ಬರೆದಿರುವ ಸ್ವರಚಿತ ಕವನವನ್ನು ವಾಚನ ಮಾಡಿದರು.
ಈ ಕಾರ್ಯಕ್ರಮದ ಸಂಚಾಲಕರಾದ ಕುಮಾರ್ ಗಂಗಣ್ಣವರ್ ಎಲ್ಲರಿಗೂ ಸ್ವಾಗತ ಕೋರಿದರು. ಮಹೇಶ ಸಾತಗೊಂಡ ವಂದನಾರ್ಪಣೆ ನಿರ್ವಹಿಸಿದರು. ಕಾರ್ಯಕ್ರಮದ ಪೂರ್ವ ತಯಾರಿಯನ್ನು ಶಶಿಧರ ಶಿಂಧೆ ಮಾಡಿದ್ದರು.

