ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಿಇಟಿ ಪರೀಕ್ಷೆ ವೇಳೆ ರಾಜ್ಯದ ಶಿವಮೊಗ್ಗ, ಬೀದರ್ ಸೇರಿದಂತೆ ವಿವಿಧೆಡೆ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದನ್ನು ನೋಡಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ ಎಂದು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಕಿಡಿಕಾರಿದ್ದಾರೆ.
ಮುಸ್ಲಿಂ ಓಲೈಕೆಗಾಗಿ ಒಂದು ಧರ್ಮದ ತುಷ್ಟಿಕರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಹಿಂದೂ ಆಚರಣೆಗಳು, ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ತರುವ ಕೆಲಸದಲ್ಲಿ ತೊಡಗಿದೆ. ಹಿಂದೂ ಸಮುದಾಯವನ್ನು ಒಡೆಯುವ ದೃಷ್ಟಿಯಿಂದ ಜಾತಿ ಗಣತಿ ಮಾಡಿರುವ ಈ ಕಾಂಗ್ರೆಸ್ ಸರ್ಕಾರ, ಇದೀಗ ವಿದ್ಯಾರ್ಥಿಗಳ ಜನಿವಾರ ತೆಗೆಸುವ ಮೂಲಕ ಹಿಂದೂ ಧಾರ್ಮಿಕ ಭಾವನೆಗೆ ದಕ್ಕೆ ತಂದಿದ್ದಾರೆ. ಜನಿವಾರ ಧರಿಸುವ ಬ್ರಾಹ್ಮಣ, ಕ್ಷತ್ರೀಯ ಸಮಾಜದ ರಜಪೂತ, ಕಲಾಲ, ಮರಾಠಾ, ವಿಶ್ವಕರ್ಮ ಸೇರಿದಂತೆ ಮತ್ತಿತರೆ ಸಮಾಜಗಳಿಗೆ ಅವಮಾನ ಮಾಡಿರುವದನ್ನು ಉಗ್ರವಾಗಿ ಖಂಡಿಸಿದ್ದಾರೆ.
ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಯುವ ಮೂಲಕ ಹಿಂದೂ ಭಾವನೆಗಳಿಗೆ ಘಾಸಿ ಗೊಳಿಸಿದವರ ವಿರುದ್ಧ ಸರ್ಕಾರ ತಕ್ಷಣ ಕಾನೂನು ಕ್ರಮ ಜರುಗಿಸಿ, ಸೇವೆಯಿಂದ ವಜಾ ಮಾಡಬೇಕು. ಪರೀಕ್ಷೆಯಿಂದ ವಂಚಿತಗೊಂಡ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು. ಪರೀಕ್ಷಾ ನಿಯಮಾವಳಿಯಲ್ಲಿ ಇಲ್ಲದ , ಮಹಿಳೆಯರ ಮಾಂಗಲ್ಯ ತೆಗೆಸುವ ಕೆಲಸ, ಜನಿವಾರ, ಉಡುದಾರ, ಶಿವದಾರ, ತೆಗೆಯಲು ಹೇಳುವುದು, ಕಿವಿಯೋಲೆ ತೆಗೆಯುವಂತಹ ಅತಾರ್ಕಿಕ ನಿಯಮ ನಿಬಂಧನೆಗಳನ್ನು ಈ ಸರ್ಕಾರ ಮಾಡಿದ್ದು, ಸಮಸ್ತ ಹಿಂದುಗಳ ಭಾವನೆಗೆ ಧಕ್ಕೆ ತಂದಿದೆ. ಈ ಕೂಡಲೇ , ಸರ್ಕಾರ ಎಚ್ಚೆತ್ತುಕೊಂಡು, ಪರೀಕ್ಷಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಹಿಂದು ಧರ್ಮವಿರೋಧಿ ಸರ್ಕಾರದ ವಿರುದ್ದ ಬೀದಿಗಿಳಿಯಬೇಕಾಗುತ್ತದೆ.
ನಕಲು ಮಾಡುವುದು, ಪರೀಕ್ಷಾ ಅಕ್ರಮವನ್ನು ತಂತ್ರಜ್ಞಾನದಿಂದ ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕೇ ವಿನಃ ಧಾರ್ಮಿಕ ನಂಬಿಕೆಗಳಿಗೆ ಘಾಸಿ ತರುವಂತ ಮೂರ್ಖ ಅಧಿಕಾರಿಗಳಾಗಲಿ, ಪರೀಕ್ಷಾ ಮಂಡಳಿಯಾಗಲಿ ಕೈಗೊಳ್ಳಬಾರದು. ಜನಿವಾರ, ಶಿವದಾರ, ಉಡುದಾರ, ಮಾಂಗಲ್ಯ ದಿಂದ ನಕಲು ಮಾಡುವುದಾಗಲಿ, ಪರೀಕ್ಷಾ ಅಕ್ರಮ ಮಾಡಲು ಸಾಧ್ಯವಿಲ್ಲ ಎಂಬ ಕನಿಷ್ಠ ಪರಿಜ್ಞಾನ ಅಧಿಕಾರಿಗಳಿಗೆ ಇರಬೇಕು. ಪರೀಕ್ಷೆ ಬರೆಯುವ ಮಕ್ಕಳ ಮನೋಸ್ಥೈರ್ಯವನ್ನು ಹೆಚ್ಚಿಸಬೇಕೆ ಹೊರತು, ಕುಗ್ಗಿಸಬಾರದು. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಉತ್ತಮ ಕಾಲೇಜಿನಲ್ಲಿ ತಮಗಿಷ್ಟವಾದ ಪದವಿಯನ್ನು ಪಡೆಯಲು ಅಹರ್ನಿಶಿ ಓದುವ ಮಕ್ಕಳ ಭಾವನೆಯನ್ನು, ಕಷ್ಟ, ಕಾರ್ಪಣ್ಯಗಳನ್ನು ಪರೀಕ್ಷಾ ಮಂಡಳಿ ಗುರುತಿಸಿ ವಿದ್ಯಾರ್ಥಿ ಸ್ನೇಹಿಯಾಗಿ ನಿಯಮ ನಿಬಂಧನೆಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.

