ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸಿಇಟಿ ಪರೀಕ್ಷೆ ವೇಳೆ ಪರೀಕ್ಷಾ ಮಂಡಳಿಯ ನಿಯಮವನ್ನು ದುರುಪಯೋಗ ಮಾಡಿಕೊಂಡು ಜನಿವಾರ ತೆಗೆಯಿಸಿ ಧಾರ್ಮಿಕ ಭಾವನೆಗೆ ಚ್ಯುತಿ ತಂದ ಘಟನೆಯನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜನಿವಾರ ಸಮಾಜ ಬಾಂಧವರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ಮುಖ್ಯ ಮಂತ್ರಿಗಳಿಗೆ ಮತ್ತು ಶಿಕ್ಷಣ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ರಾಘವೇಂದ್ರ ಮಂಗಲ ಕಾರ್ಯಾಲಯದಿಂದ ಶುರುವಾದ ಪ್ರತಿಭಟನೆ ವಾಲ್ಮೀಕಿ ವೃತ್ತ, ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ, ದ್ಯಾಮವ್ವ ದೇವಿ ದೇವಸ್ಥಾನ, ಮುಖ್ಯ ಬಜಾರ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ತಹಸೀಲ್ದಾರ ಕಚೇರಿಯ ವರೆಗೆ ಸಾಗಿತು. ಅಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಸಮಾಜದ ಪ್ರಮುಖರಾದ ವಾಸುದೇವ ಶಾಸ್ತಿç, ಬಿ.ಪಿ.ಕುಲಕರ್ಣಿ, ಉದಯಸಿಂಗ ರಾಯಚೂರ, ಈರಣ್ಣ ಬಡಿಗೇರ, ವಿಜು ಬಡಿಗೇರ ಮತ್ತೀತರರು ಮಾತನಾಡಿ, ಈ ಘಟನೆ ಮಾನವ ಕುಲ ತಲೆ ತಗ್ಗಿಸುವಂಥದ್ದು. ಜನಿವಾರವನ್ನು ಗಾಯತ್ರಿ ಮಂತ್ರ ಪಠಿಸಿ ದೊಡ್ಡ ಸಮಾರಂಭ ಮಾಡಿ ಧರಿಸುತ್ತೇವೆ. ಅಂಥದ್ದನ್ನು ಕತ್ತರಿಸಿ ತೆಗೆದವರಿಗೆ ಉಗ್ರ ಶೀಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮುಖಂಡರಾದ ವಿಕ್ರಂ ಓಸ್ವಾಲ, ಸಂಗಣ್ಣ ನಾಲತವಾಡ, ಸಮಾಜದ ಪ್ರಮುಖರಾದ ಮಾಣಿಕ ದಂಡಾವತಿ, ಪ್ರಕಾಶ ಕುಲಕರ್ಣಿ, ಎಲ್.ಎಸ್.ದೇಶಪಾಂಡೆ, ಎ.ಆರ್.ದೇಶಪಾಂಡೆ, ಆನಂದ ಜಂಬಗಿ, ಅರವಿಂದ ಕುಲಕರ್ಣಿ, ಎಸ್.ಆರ್.ಕುಲಕರ್ಣಿ, ಸುಭಾಶ ಕುಲಕರ್ಣಿ, ಭರತೇಶ ಮಂಕಣಿ, ಕುಬೇರ ಮಿರಜಕರ, ಮಂಜುನಾಥ ಪೇಟಕರ ಸೇರಿದಂತೆ ಹಲವರು ಇದ್ದರು.

