ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪುರಸಭೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ನಿಗದಿತ ಅವಧಿಯಲ್ಲಿ ಗುತ್ತಿಗೆದಾರರು ಪೂರ್ಣಗೊಳಿಸುವಂತೆ ಅಧಿಕಾರಿಗಳು ಕ್ರಮವಹಿಸಬೇಕೆಂದು ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಹೇಳಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶನಿವಾರ ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಭೆಯಲ್ಲಿ ಸದಸ್ಯರು ಅಭಿಪ್ರಾಯ ಮಂಡಿಸಿದ ಮೇರೆಗೆ ಈಗಾಗಲೇ ಕರೆದ ಟೆಂಡರ್ಗಳಿಗೆ ಅನುಮೋದನೆ ನೀಡದೇ ಮುಂದಿನ ವಾರ ಗುತ್ತಿಗೆದಾರರ ಸಭೆ ಕರೆದು ಹಿಂದಿನ ಕಾಮಗಾರಿಗಳ ಬಗ್ಗೆ ಚರ್ಚಿಸಿ ಹೊಸ ಟೆಂಡರ್ಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವದು. ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ವಾರ್ಡ್ಗಳಲ್ಲಿ ಕಾಮಗಾರಿಗಳು ಸಮರ್ಪಕವಾಗಿ ನಡೆಯುವಂತೆ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಸೂಚಿಸಿದರು.
ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಅವರು ಸನ್ ೨೦೨೫-೨೬ ನೇ ಸಾಲಿನ ೧೫ನೇ ಹಣಕಾಸು ರೂ.೨೦೮.೦೦ ಲಕ್ಷಕ್ಕೆ ತಯಾರಿಸಿದ ಕ್ರಿಯಾಯೋಜನೆಯ ವಿವರ ತಿಳಿಸಿದ ಅವರು ಕುಡಿಯುವ ನೀರು, ಮಳೆ ನೀರು ಕೊಯ್ಲು,ಜಲಮೂಲಗಳ ಪುನಶ್ಚೇತನ ಮತ್ತು ನೀರಿನ ಮರು ಬಳಕೆ ಒಳಗೊಂಡಂತೆ ಶೇ.೩೦ ರಷ್ಟು ರೂ.೬೨.೪ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆ ಶೇ.೩೦ ರೂ.೬೨.೪ ಲಕ್ಷ, ಎಲ್ಲ ೨೩ ವಾರ್ಡ್ಗಳಲ್ಲಿ ರಸ್ತೆ, ಸೇತುವೆ ಮತ್ತು ಪಾದಚಾರಿ ಮಾರ್ಗಗಳು ಶೇ, ೪೦ ರೂ. ೧೧೩.೮೦ ಲಕ್ಷ ಅಂದಾಜು ಮೊತ್ತದ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದರು.
ಸದಸ್ಯ ನೀಲಪ್ಪ ನಾಯಕ ಮಾತನಾಡಿ, ನಗರೋತ್ಥಾನ ಯೋಜನೆಯಡಿ ಎಲ್ಲ ವಾರ್ಡ್ಗಳಲ್ಲಿ ಕೈಗೊಂಡಿರುವ ಕಾಮಗಾರಿಗಳ ಅಭಿಪ್ರಾಯ ಪಡೆದು ಮುಂದಿನ ಕಾಮಗಾರಿಗಳನ್ನು ಕೈಗೊಳ್ಳಬೇಕು. ಪುರಸಭೆಗೆ ಸಂಬಂಧಿಸಿದ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಿ ನಿಗದಿತ ಸಮಯದಲ್ಲಿ ಆಗುವಂತೆ ಕ್ರಮ ಕೈಗೊಳ್ಳಬೇಕು. ಬಾಡಿಗೆ ನೀಡದೇ ಇರುವವರ ಮೇಲೆ ಸೂಕ್ತ ಕ್ರಮ ವಹಿಸಬೇಕು. ಈ ವಿಷಯ ಚರ್ಚಿಸಲು ವಿಶೇಷ ಸಭೆ ಜರುಗಿಸಬೇಕೆಂದು ಆಗ್ರಹಿಸಿದರು.
ಸದಸ್ಯ ದೇವೇಂದ್ರ ಚವ್ಹಾಣ ಅವರು, ವಾರ್ಡ್ಗಳಲ್ಲಿ ಕಳಪೆ ಕಾಮಗಾರಿಯಾಗಿದ್ದರೆ ಅಂತಹ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಬಾರದು ಎಂದರು.
ಸದಸ್ಯ ವಿಜಯ ನಾಯಕ ಅವರು, ಹಿಂದಿನ ಕಾಮಗಾರಿ ಗುಣಮಟ್ಟದಿಂದ ಪೂರ್ಣಗೊಂಡಿರುವದನ್ನು ಖಾತರಿ ಪಡಿಸಿಕೊಂಡ ನಂತರ ಅಂತಹ ಗುತ್ತಿಗೆದಾರರಿಗೆ ಟೆಂಡರ್ ಕೊಡಬೇಕೆಂದು ಹೇಳಿದಾಗ ಉಳಿದ ಸದಸ್ಯರು ಇದಕ್ಕೆ ದನಿಗೂಡಿಸಿದರು.
ಸದಸ್ಯೆ ಶೋಭಾಂಗಿಣಿ ಗಾಯಕವಾಡ ಅವರು,೧೭ನೇ ವಾರ್ಡಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಬೇಕೆಂದು ಸಭೆಯ ಗಮನಕ್ಕೆ ತಂದರು. ಸದಸ್ಯ ವಿಜಯ ನಾಯಕ ಅವರು ಜಾಲಿಹಾಳ ತಾಂಡಾದಲ್ಲಿ ಶುದ್ಧ ಕುಡಿಯುವ ಘಟಕದಲ್ಲಿ ಸರಿಯಾಗಿ ನೀರು ಬರುತ್ತಿಲ್ಲ ಎಂದಾಗ ಪುರಸಭೆ ಮುಖ್ಯಾಽಕಾರಿ ಎಚ್.ಎಸ್.ಚಿತ್ತರಗಿ ಅವರು, ಪುರಸಭೆ ವ್ಯಾಪ್ತಿಯಲ್ಲಿ ಬರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಈಗಾಗಲೇ ಒಂದು ಸಲ ದುರಸ್ತಿ ಮಾಡಿಸಲಾಗಿದೆ. ಒಂದು ವೇಳೆ ಶುದ್ಧ ನೀರಿನ ಘಟಕಗಳು ದುರಸ್ತಿಗೆ ಬಂದಿದ್ದರೆ ದುರಸ್ತಿ ಮಾಡಿಸಿ ಜನರಿಗೆ ಶುದ್ಧ ನೀರು ಸಿಗುವಂತೆ ಮಾಡಲಾಗುವದು ಎಂದರು.
ಸದಸ್ಯರಾದ ಪ್ರವೀಣ ಪೂಜಾರಿ, ರಾಜು ಲಮಾಣಿ, ರವಿ ನಾಯ್ಕೋಡಿ ಇತರರು ಪಟ್ಟಣದ ಪ್ರವೇಶ ಮುನ್ನ ಪುರಸಭೆಯಿಂದ ಸ್ವಾಗತ ಕಮಾನುಗಳನ್ನು ಪ್ರಮುಖ ರಸ್ತೆಗಳಲ್ಲಿ ನಿರ್ಮಾಣ ಮಾಡಬೇಕು. ಪುರಸಭೆ ಕಚೇರಿಗೆ ಬರುವ ವಿಜಯಪುರ ಪ್ರಮುಖ ರಸ್ತೆಗೆ ಹೊಂದಿಕೊಂಡಿರುವ ರಸ್ತೆಯಲ್ಲಿ ಪುರಸಭೆ ಸ್ವಾಗತ ಕಮಾನು ಅಳವಡಿಸಿದರೆ ಸಾರ್ವಜನಿಕರಿಗೆ ಪುರಸಭೆಗೆ ಬರುವ ರಸ್ತೆ ಗೊತ್ತಾಗುತ್ತದೆ ಎಂದು ಸಭೆಯ ಗಮನಕ್ಕೆ ತಂದರು.
ವ್ಯವಸ್ಥಾಪಕ ಸುರೇಶ ಬಾಗೇವಾಡಿ ಅವರು, ವಿಕಲಚೇತನರಿಗೆ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಕರೆಯಲಾಗಿದೆ. ೧೩ ಜನರಿಗೆ ಹೊಲಿಗೆ ಯಂತ್ರ ಕೊಡಬೇಕಿದೆ. ೧೧ ಅರ್ಜಿ ಬಂದಿವೆ. ವ್ಹೀಲ್ ಚೇರ್ ೭ ಜನರಿಗೆ ವಿತರಣೆಗೆ ಅನುದಾನ ಇದೆ. ಇದಕ್ಕೆ ೩ ಅರ್ಜಿ ಬಂದಿವೆ. ವೃತ್ತಿ ನಿರತ ವಕೀಲರಿಗೆ ಪುಸ್ತಕ ಖರೀದಿಗೆ ಸಹಾಯಧನ ಯೋಜನೆಯಡಿಯಲ್ಲಿ ೩ ಅರ್ಜಿ ಬಂದಿವೆ. ಶ್ರವಣಸಾಧನ ಮೂವರು ಜನರಿಗೆ ನೀಡಲು ಅನುದಾನವಿದೆ. ಇದಕ್ಕೆ ಒಂದು ಅರ್ಜಿ ಬಂದಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಕೆಲ ಸದಸ್ಯರು ಕೆಲ ವಾರ್ಡ್ಗಳಲ್ಲಿ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಇವು ಪೂರ್ಣವಾಗುವಂತೆ ಗಮನ ಹರಿಸಬೇಕೆಂದರು.
ಬಸವೇಶ್ವರ ವೃತ್ತಕ್ಕೆ ಶ್ರದ್ಧಾಂಜಲಿ ಬ್ಯಾನರ್ ಅಳವಡಿಸುವದು ಶೋಭೆ ತರುವುದಿಲ್ಲ. ಶ್ರದ್ಧಾಂಜಲಿ ಬ್ಯಾನರ್ ಕಟ್ಟಲು ನಿಗದಿ ಪಡಿಸಿದ ಜಾಗೆಯಲ್ಲಿ ಈ ಬ್ಯಾನರ್ ಕಟ್ಟುವಂತೆ ಅಧಿಕಾರಿಗಳು ಕ್ರಮವಹಿಸಬೇಕೆಂದು ಸಭೆಯ ಗಮನಕ್ಕೆ ತಂದರು.
ಪ್ರವಾಸಿ ಮಂದಿರದ ಮುಂಭಾಗದ ಪ್ರಮುಖ ರಸ್ತೆಗೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣಕ್ಕೆ, ಅಂಗವಿಕಲ ಒಕ್ಕೂಟದ ಸಮುದಾಯ ಭವನಕ್ಕೆ ಜಾಗೆ ಗುರುತಿಸಲು ಸಭೆ ನಿರ್ಣಯಿಸಲಾಯಿತು. ಸನ್ ೨೦೨೫-೨೬ ನೇ ಸಾಲಿಗೆ ೧೫ ನೇ ಹಣಕಾಸು ಅನುದಾನ, ಎಸ್ಎಫ್ಸಿ ಮುಕ್ತನಿಧಿ ಯೋಜನೆ, ಎಸ್.ಸಿ.ಎಸ್.ಪಿ. ಟಿ.ಎಸ್.ಪಿ ವಿವಿಧ ಅಭಿವೃದ್ಧಿ ಯೋಜನೆಗಳಡಿಯಲ್ಲಿ ಸರ್ಕಾರದಿಂದ ಹಂಚಿಕೆಯಾಗಿರುವ ಅನುದಾನಕ್ಕೆ ಕ್ರಿಯಾಯೋಜನೆಗೆ ಸಭೆ ಅನುಮೋದನೆ ನೀಡಿತು.
ಸಭೆಯಲ್ಲಿ ಸದಸ್ಯರಾದ ರಜಾಕಬಿ ಬಮ್ಮನಹಳ್ಳಿ, ನಜೀರಅಹ್ಮದ ಗಣಿ, ಅಬ್ದುಲರಹಿಮಾನ ಚೌಧರಿ, ರವಿ ನಾಯ್ಕೋಡಿ, ಗೀತಾ ಬಾಗೇವಾಡಿ, ಅನ್ನಪೂರ್ಣ ಕಲ್ಯಾಣಿ, ಪರಜಾನ ಚೌಧರಿ, ಲಕ್ಷ್ಮೀಬಾಯಿ ಬೆಲ್ಲದ, ಪುರಸಭೆ ಅಭಿಯಂತರಾದ ಮಹಾದೇವ ಜಬಂಗಿ, ಸಂತೋಷ ಗಿಡ್ಡಸಣ್ಣನವರ, ವಿಜಯಕುಮಾರ ವಂದಾಲ, ಗೀತಾಂಜಲಿ ದಾಸರ, ರೇಣುಕಾ ಭಂಡಾರಿ ಇತರರು ಇದ್ದರು.ಸಭೆಗೆ ಸಂಸದ ರಮೇಶ ಜಿಗಜಿಣಗಿ, ಸಚಿವ ಶಿವಾನಂದ ಪಾಟೀಲ, ಉಪಾಧ್ಯಕ್ಷ ಅಶೋಕ ಹಾರಿವಾಳ, ಸದಸ್ಯರಾದ ಅಶೋಕ ಸಂಪನ್ನವರ, ನಾಗವ್ವ ಗುಂಡಿ, ಪ್ರವೀಣ ಪವಾರ,ರವಿ ಪಟ್ಟಣಶೆಟ್ಟಿ, ರೇಖಾ ಬೆಕಿನಾಳ, ನಿಂಗಪ್ಪ ಗುಂಡಳ್ಳಿ, ರೇಖಾ ಸೊನ್ನದ ಗೈರು ಇದ್ದರು.

