ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಮ್ಮ ಸಂಸ್ಕೃತಿ, ಸಂಸ್ಕಾರ ಬಹಳ ಶ್ರೇಷ್ಠವಾದದ್ದು. ಅದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ನಿಮ್ಮಲ್ಲರ ಮೇಲಿದೆ ಎಂದು ಜಾನಪದ ಪರಿಷತ್ತ ಜಿಲ್ಲಾಧ್ಯಕ್ಷ ಬಿ.ಎನ್.ಪಾಟೀಲ ಇಬ್ರಾಹಿಂಪುರ ಹೇಳಿದರು.
ಸಿಂದಗಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಕರ್ನಾಟಕ ಜಾನಪದ ಪರಿಷತ್ತ ಜಿಲ್ಲಾ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡ ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾನಪದ ನಮಗೆ ಬಹಳ ಹಿಂದಿನ ಕಾಲದಿಂದ ಜನರ ಹೃದಯ ಭಾಷೆ. ನಮ್ಮ ಸಂಸ್ಕೃತಿ, ವಿವಾಹ, ಹಬ್ಬಗಳ ಆಚರಣೆ, ನೇಗಿಲು ಹೊಡೆಯುವಾಗ, ಬಿತ್ತುವಾಗ, ಚರಗ ಚೆಲ್ಲುವ ಸೀಮಂತದ ಸಂದರ್ಭದಲ್ಲಿ ಅನಾದಿಕಾಲದಿಂದಲೂ ಜಾನಪದ ಜನರ ಉಸಿರಾಗಿದೆ. ಆದರೆ ಇಂದಿನ ಯುವ ಪೀಳಿಗೆ ಮೊಬೈಲನ್ ಆನ್ಲೈನ್ ಗೇಮಿಂಗ್‌ನಂತಹ ಚಟಗಳಿಗೆ ದಾಸರಾಗುತ್ತಿದ್ದು ಇಂದು ಇಂತಹ ಜಾನಪದ ಉತ್ಸವದಂತಹ ಕಾರ್ಯಕ್ರಮಗಳನ್ನು ಸರಕಾರಿ ಶಾಲಾ-ಕಾಲೇಜುಗಳ ಹಂತಗಳಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಎಸ್.ಎಸ್.ಹಳೆಮನಿ ಮಾತನಾಡಿ, ಇಂದಿನ ಯುವಕರು ನಮ್ಮ ಸಂಸ್ಕೃತಿ ಮರೆತು ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿರುವುದು ವಿಷಾಧನೀಯ. ಜಾನಪದ ಇಂದು ಬೆಳೆಯಲು ಜಾನಪದ ಉತ್ಸವದಂತಹ ಕಾರ್ಯಕ್ರಮ ಕಾಲೇಜು ಹಂತದಲ್ಲಿ ನಡೆಸುತ್ತಿರುವುದರಿಂದ ನಮ್ಮ ವಿದ್ಯಾರ್ಥಿಗಳಿಗೆ ನಮ್ಮ ಪರಂಪರೆ, ಸಂಸ್ಕೃತಿಯ ಅರಿವು ಜಾಗೃತಿ ಮೂಡಿಸಲು ಸಹಕಾರಿಯಾಗಿವೆ ಎಂದು ಹೇಳಿದರು.
ವಿದ್ಯಾರ್ಥಿಗಳಿಂದ ಸಾಮೂಹಿಕವಾಗಿ ಜಾನಪದ ನೃತ್ಯ ಪ್ರದರ್ಶನಗೊಂಡವು. ಹಂತಿ ಪದ ಮತ್ತು ಬಿಸು ಕಲ್ಲು ಪದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಹಾಡಿದರು. ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್.ಪಾಟೀಲ ಇಬ್ರಾಹಿಂಪುರ ಅವರಿಗೆ ನಗರದ ಪ್ರಮುಖ ಬೀದಿಗಳಿಂದ ಎತ್ತಿನ ಬಂಡಿಯಲ್ಲಿ ಕಾಲೇಜಿನ ಬರಮಾಡಿಕೊಳ್ಳಲಾಯಿತು. ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಡೊಳ್ಳು ಬಾರಿಸಿದರು.
ಈ ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಡಾ.ಮಿರಾಜ್ ಪಾಶ ಪ್ರಾಸ್ತಾವಿಕ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ರಿಯಾಜ ಅಹಮದ್ ಜಾಗಿರ್ದಾರ್, ಡಾ.ಯಮನಪ್ಪ ಕೆಳಗೇರಿ, ಸಯ್ಯದ್ ಮುಜೀಬ್ ಸಿರಾಜ್ ಖಾದ್ರಿ, ಎಸ್.ಪಿ.ತಳವಾರ, ಲಕ್ಷ್ಮಿಕಾಂತ್ ಹೂಗಾರ, ಆರ್.ಎಸ್.ಗಾಯಕವಾಡ, ನಾಗೇಶ, ಅನಿತಾ ಗುಂದಗಿ, ವಿಕ್ರಂ ಬಿರಾದಾರ, ಯಲ್ಲಪ್ಪ ಕಟ್ಟಿಮನಿ, ಉಮೇಶ ಪೂಜೇರಿ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.

