ನ್ಯಾಯವಾದಿ ಚೇತನ ಶಿವಶಿಂಪಿ ಅವರಿಂದ ಸರ್ಕಾರಕ್ಕೆ ದೂರು ಸಲ್ಲಿಕೆ
ಮುದ್ದೇಬಿಹಾಳ: ತಾಲೂಕಿನ ಢವಳಗಿ ಗ್ರಾಮದ ಬಸವ ಬಾಲ ಭಾರತಿ ಶಾಲೆಯ ಶಿಕ್ಷಕರ ಕಳೆದ ೧೦ ತಿಂಗಳ ವೇತನವನ್ನು ಯಾವುದೇ ಆದೇಶವಿಲ್ಲದೇ ಬಟವಡೆ ಮಾಡಿ ಇಲ್ಲಿನ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಿ.ಧರಿಕಾರ ತಮ್ಮ ಅಧಿಕಾರವನ್ನು ದುರುಪಯೋಗ ಪಡೆದುಕೊಂಡಿದ್ದು ಇವರನ್ನು ಸೇರಿದಂತೆ ವೇತನ ಬಟವಡೆಗೆ ಸಂಬಂಧಿಸಿದ ಇಲಾಖಾ ನೌಕರರನ್ನು ಕೂಡಲೆ ಅಮಾನತ್ತು ಮಾಡಿ ಎಲ್ಲರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ನ್ಯಾಯವಾದಿ ಚೇತನ ಶಿವಶಿಂಪಿ ಅವರು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ವಕುಮಾರ, ಜಿಲ್ಲಾ ಪಂಚಾಯತ ಸಿಇಓ ರಾಹುಲ ಸಿಂಧೆ ಹೀಗೆ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಉಪನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ.
ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಸದರಿ ಶಾಲೆ ವಿದ್ಯಾರ್ಥಿಗಳಿಲ್ಲದೇ ಸುಮಾರು ವರ್ಷಗಳ ಕಾಲ ಮುಚ್ಚಲ್ಪಟ್ಟಿದ್ದು ಸಂಸ್ಥೆಯವರು ತಮ್ಮ ರಕ್ತ ಸಂಬಂಧಿಗಳನ್ನು ಶಿಕ್ಷಕರನ್ನಾಗಿ ಸೇರಿಸಿಕೊಂಡು ಕಾನೂನು ಬಾಹಿರವಾಗಿ ಅನುಮೋದನೆಗೊಂಡಿದೆ. ಈ ಬಗ್ಗೆ ದೂರು ಸಲ್ಲಿಸಿದ್ದು ತನಿಖೆ ನಡೆದು ಸದರಿ ಶಾಲೆಯಲ್ಲಿ ಇರಬೇಕಾದ ಹಲವಾರು ದಾಖಲೆಗಳು ಇಲ್ಲದಿರುವ ಬಗ್ಗೆ ಸ್ಪಷ್ಟಪಡಿಸಿದ್ದರು. ಆ ಆಧಾರದ ಮೇಲೆ ಮತ್ತು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಳೆದ ೧೦ ತಿಂಗಳಿನಿಂದ ಶಿಕ್ಷಕರ ವೇತನವನ್ನು ತಡೆಹಿಡಿದಿದ್ದರು. ಇಲ್ಲಿ ದುಡಿದವರ ವೇತನ ತಡೆಹಿಡಿಯಲು ಅವಕಾಶಗಳಿಲ್ಲ ಎಂಬ ಮಾತು ಕೇಳಿ ಬಂದಿದ್ದು, ದುಡಿದವರು ನ್ಯಾಯಯುತವಾಗಿ ತಮ್ಮ ನೌಕರಿಯನ್ನು ಗಿಟ್ಟಿಸಿಕೊಳ್ಳದೇ ಸರ್ಕಾರಕ್ಕೆ ವಂಚನೆ ಮಾಡಿ ಮುಚ್ಚಲ್ಪಟ್ಟ ಶಾಲೆಗೆ ಖೊಟ್ಟಿ ಮತ್ತು ಕೇವಲ ಅಂಕಿ ಸಂಖ್ಯೆಗಳುಳ್ಳ ದಾಖಲೆಗಳನ್ನು ನೀಡಿ ಸರಕಾರದಿಂದ ವೇತನ ರೂಪದಲ್ಲಿ ಬರುವ ಹಣವನ್ನು ಲಪಟಾಯಿಸುವ ಉದ್ದೇಶದಿಂದ ಅನುಮೋದನೆ ಪಡೆದು ಕ್ರಿಮಿನಲ್ ಅಪರಾಧ ಮಾಡಿದ್ದಾರೆ.
ಈ ಬಗ್ಗೆ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿಕೊಂಡು ಸರ್ಕಾರಕ್ಕೆ ಆಗುತ್ತಿರುವ ವಂಚನೆಯನ್ನು ತಪ್ಪಿಸುವ ಜವಾಬ್ದಾರಿಯುತ ಸ್ಥಾನದಲ್ಲಿರುವ ಯು.ಬಿ.ಧರಿಕಾರ ಅವರು, ವಿಜಯಪುರದ ಉಪನಿರ್ದೇಶಕರು ೧೦ ಜನ ಅಧಿಕಾರಿಗಳ ತಂಡ ರಚಿಸಿ ೭ ದಿನಗಳ ಗಡುವು ನೀಡಿ ತನಿಖೆಗೆ ಆದೇಶಿಸಿದ್ದರೂ ತನಿಖಾ ವರದಿ ಬರುವವರೆಗೂ ತಾಳ್ಮೆವಹಿಸದೇ ಹಿಂದಿನ ೧೦ ತಿಂಗಳ ವೇತನವನ್ನು ಬಿಡುಗಡೆ ಮಾಡಿ ಸಂಪೂರ್ಣವಾಗಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದು ರುಜುವಾತಾಗಿದೆ. ಕಾರಣ ಇವರ ಮೇಲಾಧಿಕಾರಿಗಳು ಕೂಡಲೇ ವೇತನ ಬಟವಡೆಗೆ ಸಂಬಂಧಿಸಿದ ಎಲ್ಲರನ್ನೂ ಈ ಕೂಡಲೇ ಅಮಾನತ್ತು ಮಾಡಿ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.