ಸಿಂದಗಿ ನಗರಸಭೆಯಾಗಿ ಮೇಲ್ದರ್ಜೆಗೇರಿದ ಹಿನ್ನೆಲೆ ಸಂಭ್ರಮಾಚರಣೆಯಲ್ಲಿ ಶಾಸಕ ಅಶೋಕ ಮನಗೂಳಿ ಭರವಸೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸಿಂದಗಿ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿದ ಹಿನ್ನೆಲೆಯಲ್ಲಿ ಪುರಸಭೆ ಮತ್ತು ಮನಗೂಳಿ ಅವರ ಅಭಿಮಾನಿಗಳು ನಗರದಲ್ಲಿ ಶಾಸಕ ಅಶೋಕ ಮನಗೂಳಿ ಅವರ ಅದ್ದೂರಿ ಮೆರವಣಿಗೆ ಮಾಡಿದರು.
ಮೆರವಣಿಗೆಯ ಬಳಿಕ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಶಾಸಕ ಅಶೋಕ ಮನಗೂಳಿ ಮಾತನಾಡಿ, ಬರುವ ೨೦೨೮ರ ಚುನಾವಣೆಯ ಒಳಗಾಗಿ ಸಿಂದಗಿ ನಗರಕ್ಕೆ ಸರ್ಕಾರದಿಂದ ರೂ.೧೦೦ಕೋಟಿ ವಿಶೇಷ ಅನುದಾನ ತೆಗೆದುಕೊಂಡು ಬರುವ ಮೂಲಕ ಪಟ್ಟಣದ ರಸ್ತೆಗಳನ್ನು ಸಿ.ಸಿ ರಸ್ತೆಗಳನ್ನಾಗಿ ಮಾಡುತ್ತೇನೆ. ನಗರಸಭೆಯಾದ ಮೇಲೆ ಸಿಂದಗಿಯ ವಾತಾವರಣ ಬದಲಾವಣೆ ಮಾಡಬೇಕೆನ್ನುವ ಕನಸನ್ನು ಹೊತ್ತಿದ್ದೇನೆ. ಎಸಿ ಕಛೇರಿ ಮತ್ತು ಕೆಇಬಿ ಇಇ ಕಛೇರಿ ತರುವ ಪ್ರಯತ್ನದಲ್ಲಿದ್ದೇನೆ. ಸಿಂದಗಿ ಸುಂದರ ನಗರವನ್ನಾಗಿ ಮಾಡುವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ಅಲಮೇಲ ಪಟ್ಟಣ ಪಂಚಾಯತ್ ಅಧ್ಯಕ್ಷ ಸಾಧಿಕ ಸುಂಬಡ ಅವರು ಮಾತನಾಡಿದರು.
ಇದಕ್ಕೂ ಮುನ್ನ ಗುತ್ತಿಗೆದಾರ ದಯಾನಂದ ಬಿರಾದಾರ ಅವರ ಮೆನಯಲ್ಲಿ ಶಾಸಕ ಅಶೋಕ ಮನಗೂಳಿ ಅವರಿಗೆ ಸನ್ಮಾನ ಮಾಡಲಾಯಿತು. ಅಲ್ಲಿಂದ ಸಾರೋಟ್ ಮೆರವಣಿಗೆ ಡಾ.ಎಂ.ಎಂ.ಕಲಬುರ್ಗಿ ರಸ್ತೆಯ ಮಾರ್ಗವಾಗಿ ಬಸವೇಶ್ವರ ವೃತ್ತದಿಂದ ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ರಸ್ತೆಯಿಂದ ಸ್ವಾಮಿ ವಿವೇಕಾನಂದ ವೃತ್ತದವರೆಗೆ ನಡೆಯಿತು.
ಮೆರವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಧ್ವಜ, ದಿ.ಸಚಿವ ಮಾಜಿ ಎಂ.ಸಿ.ಮನಗೂಳಿ, ಶಾಸಕ ಅಶೋಕ ಮನಗೂಳಿ ಮತ್ತು ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಅವರ ಭಾವಚಿತ್ರಗಳು ಅಭಿಮಾನಿಗಳ ಕೈಯಲ್ಲಿ ರಾರಾಜಿಸಿದವು.
ಮೆರವಣಿಗೆ ನೇತೃತ್ವವನ್ನು ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ವಹಿಸಿಕೊಂಡಿದ್ದರು. ಸಾರೋಟದಲ್ಲಿ ಶಾಸಕ ಅಶೋಕ ಮನಗೂಳಿ ಅವರ ಜೊತೆಗೆ ಪುರಸಭೆ ಉಪಾಧ್ಯಕ್ಷ ಸಂದೀಪ ಚೌರ, ಆಲಮೇಲ ಪಟ್ಟಣ ಪಂಚಾಯತ್ ಸಾದಿಕ ಸುಂಬಡ ಇದ್ದರು.
ಪ್ರಮುಖ ವೃತ್ತಗಳಲ್ಲಿ ಜೆಸಿಬಿ ಮೂಲಕ ಶಾಸಕರ ಮೇಲೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದ ನೋಟ ಜನಮನ ಸೆಳೆಯಿತು. ಮೆರವಣಿಗೆಯು ಡೊಳ್ಳು ಕುಣಿತ, ಡಿಜೆ ಮೂಲಕ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ಮೆರವಣಿಗೆ ಉದ್ದಕ್ಕೂ ಅವರ ಅಭಿಮಾನಿಗಳು, ಸ್ನೇಹಿತರು, ಹಿತೈಷಿಗಳು, ಉಮೇಶ ಜೋಗೂರ ಸೇರಿದಂತೆ ಟಿಎಸ್‌ಪಿಎಸ್ ಮಂಡಳಿಯ ನಿರ್ದೇಶಕರು, ಸಿಬ್ಬಂದಿಗಳು ಸನ್ಮಾನಿಸಿ ಗೌರವಿಸಿದರು.
ಮೆರವಣಿಗೆಯಲ್ಲಿ ಪುರಸಭೆಯ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪುರಸಭೆ ಕಾರ್ಯಾಲಯದ ಸಿಬ್ಬಂದಿ, ತಾಲೂಕಿನ ಸುತ್ತಮುತ್ತಲಿನ ಅವರ ಅಭಿಮಾನಿಗಳು ಭಾಗವಹಿಸಿದ್ದರು.