ದುಡಿವ ಬಂಡವಾಳ ರೂ.೫ ಸಾವಿರ ಕೋಟಿಗೆ ಹೆಚ್ಚಳ
ವಿಜಯಪುರ: ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸನ್ ೨೦೨೨-೨೩ನೇ ಸಾಲಿನಲ್ಲಿ ಬ್ಯಾಂಕು ತನ್ನ ಎಲ್ಲ ಕಾರ್ಯಕ್ರಮಗಳನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸಿ, ಆದಾಯ ತೆರಿಗೆ ಪೂರ್ವ ರೂ.೧೯.೩೧ ಕೋಟಿ ಲಾಭಗಳಿಸಿದ್ದು, ನಿಯಮಾನುಸಾರ ರೂ.೫.೦೧ ಕೋಟಿ ತೆರಿಗೆ ಪಾವತಿಸಿ ನಂತರ ರೂ.೧೪.೩೦ ಕೋಟಿ ನಿವ್ವಳ ಲಾಭ ಗಳಿಸಿದೆ. ಇದು ಬ್ಯಾಂಕಿನ ಇತಿಹಾಸದಲ್ಲಿಯೇ ಗಳಿಸಿದ ಗರಿಷ್ಠ ವಾರ್ಷಿಕ ನಿವ್ವಳ ಲಾಭವಾಗಿದ್ದು, ದಾಖಲಾರ್ಹ ಸಾಧನೆಯಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷರೂ ಆದ ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ವಿಜಯಪುರ ತಾಲೂಕಿನ ನಾಗಠಾಣ, ಮಮದಾಪೂರ ಹಾಗೂ ಮುದ್ದೇಬಿಹಾಳ ತಾಲೂಕಿನ ಹಿರೂರ ಗ್ರಾಮದಲ್ಲಿ ತನ್ನ ನೂತನ ಶಾಖೆಗಳನ್ನು ಕಾರ್ಯಾರಂಭಗೊಳಿಸಿದ್ದು, ಈಗ ಜಿಲ್ಲೆಯಾದ್ಯಂತೆ ಒಟ್ಟು ೪೬ ಶಾಖೆಗಳನ್ನು ಹೊಂದಿದೆ. ಬ್ಯಾಂಕು ಇನ್ನೂ ೧೦ ಹೊಸ ಶಾಖೆಗಳನ್ನು ಆರಂಭಿಸಲು ಅನುಮತಿ ಕೋರಿ ಆರ್.ಬಿ.ಆಯ್.ಗೆ. ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಿದರು.
ಬಾಗಲಕೋಟೆ ಹಾಗೂ ವಿಜಯಪುರ ಸಕ್ಕರೆ ಕಾರ್ಖಾನೆಗಳಿಗೆ ಡಿಸಿಸಿ ಬ್ಯಾಂಕ್ ಮೂಲಕ ಆರ್ಥಿಕ ಸಹಕಾರ ಒದಗಿಸಲಾಗಿದೆ. ಈ ವರ್ಷದಲ್ಲಿ ೧೭೨೨೯ ಹೊಸ ರೈತ ಸದಸ್ಯರಿಗೆ ರೂ.೧೨೫.೪೦ ಕೋಟಿ ಬೆಳೆ ಸಾಲ ಹಾಗೂ ೧೯೪೮ ರೈತರಿಗೆ ರೂ.೫೬.೦೬ ಕೋಟಿ ಮಧ್ಯಮಾವಧಿ ಕೃಷಿ ಸಾಲ ವಿತರಿಸಲಾಗಿದೆ. ಕೃಷಿ ಸಾಲ ವಿಸ್ತರಣೆ, ಕೃಷಿಕರಿಗೆ ತೋಟದ ಮನೆ ನಿರ್ಮಾಣ ಸಾಲ, ರೈತ ಕಲ್ಯಾಣ ನಿಧಿ, ಸಾಲ ಮಿತಿಯಲ್ಲಿ ಹೆಚ್ಚಳ, ಕೃಷಿಯೇತರ ಪತ್ತಿನ ಸಹಕಾರ ಸಂಘಗಳಿಗೆ ಸಾಲ ಯೋಜನೆಯನ್ನು ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ನಿರ್ದೇಶಕರುಗಳಾದ ಶೇಖರ ದಳವಾಯಿ, ಸೋಮನಗೌಡ ಎನ್.ಬಿರಾದಾರ, ಕಲ್ಲನಗೌಡ ಬಿರಾದಾರ, ಹಣಮಂತರಾಯ ಆರ್.ಪಾಟೀಲ, ಗುರುಶಾಂತ ನಿಡೋಣಿ, ಸುರೇಶ ಬಿರಾದಾರ, ರಾಜೇಶ್ವರಿ ಹೆಬ್ಬಾಳ, ಉಪನಿಬಂಧಕರಾದ ಶ್ರೀಮತಿ ಎಸ್.ಕೆ.ಭಾಗ್ಯಶ್ರೀ, ಎಸ್.ಎಸ್.ಶಿಂಧೆ, ಮುಖ್ಯ ಕಾರ್ಯನಿವಾಹಕ ಅಧಿಕಾರಿ ಎಸ್.ಡಿ.ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.