ನೀರು ಪೋಲಾಗದಂತೆ ನಿಗಾ ವಹಿಸಿ :ಡಿಸಿ ಟಿ.ಭೂಬಾಲನ್ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕುಡಿಯುವ ನೀರಿಗಾಗಿ ಆಲಮಟ್ಟಿ ಜಲಾಶಯದಿಂದ ಕಾಲುವೆ ಜಾಲಗಳ ಮೂಲಕ ಕೆರೆಗಳನ್ನು ತುಂಬಿಸಲಾಗುತಿದ್ದು, ನೀರಿನ ವ್ಯಯವಾಗದಂತೆ ನೋಡಿಕೊಂಡು ನಿಗಾ ವಹಿಸಲು ರಚಿಸಲಾದ ಸಮಿತಿ ಅಧಿಕಾರಿಗಳು ಸಮನ್ವಯತೆ ಸಾಧಿಸಿಕೊಂಡು ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದ್ದಾರೆ.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿದ್ದ ಅವರು, ದಿನೇ ದಿನೇ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು, ಕುಡಿಯುವ ನೀರಿಗೆ ಪ್ರಥಮಾದ್ಯತೆ ನೀಡಬೇಕು. ಜಿಲ್ಲೆಯಾದ್ಯಂತೆ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಉದ್ದೇಶಕ್ಕಾಗಿ ಆಲಮಟ್ಟಿ ಜಲಾಶಯದ ಸಂಗ್ರಹಣೆಯಲ್ಲಿ ಕೆರೆಗಳನ್ನು ಭರ್ತಿಗೊಳಿಸಲು ೨.೫೦ ಟಿ.ಎಂ.ಸಿ.ನೀರು ಕಾಲುವೆ ಜಾಲಗಳ ಮೂಲಕ ಕೆರೆಗಳನ್ನು ನೀರು ತುಂಬಿಸಲಾಗುತ್ತಿದ್ದು, ಜಲಾಶಯದಿಂದ ಹರಿಬಿಡಲಾದ ನೀರು ಉದ್ದೇಶಿತ ಸ್ಥಳಕ್ಕೆ ತಲುಪುವಂತೆ ನಿಗಾವಹಿಸಬೇಕು. ಈ ಸಂದರ್ಭದಲ್ಲಿ ನೀರಿನ ವ್ಯಯವಾಗದಂತೆ ನೋಡಿಕೊಳ್ಳಲು ರಚಿಸಲಾದ ಸಣ್ಣ ನೀರಾವರಿ ಇಲಾಖೆ, ಕುಡಿಯುವ ನೀರು ಸರಬರಾಜು ಇಲಾಖೆ, ಹೆಸ್ಕಾಂ, ಪೊಲೀಸ್ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯನ್ನೊಳಗೊಂಡ ವಾಚ್ & ವಾರ್ಡ ಸಮಿತಿ ತೀವ್ರ ನಿಗಾ ಇರಿಸಬೇಕು. ಅನಧಿಕೃತವಾಗಿ ಅಳವಡಿಸಲಾದ ಪಂಪಸೆಟ್‌ಗಳನ್ನು ಹೆಸ್ಕಾಂ ಇಲಾಖೆಯಿಂದ ತೆರವುಗೊಳಿಸಲು ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಅಂತಹವರ ವಿರುದ್ಧ ಕಾಯ್ದೆ-೧೯೬೪ರಂತೆ ಕ್ರಮ ವಹಿಸುವಂತೆ ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗ್ರಾಮೀಣ ಭಾಗದಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸಲು ಗ್ರಾಮ ಪಂಚಾಯತಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ತೆರೆದ ಕೊಳವೆ ಬಾವಿಗಳಿದ್ದಲ್ಲಿ ಕೂಡಲೇ ಯಾವುದೇ ಅನಾಹುತಕ್ಕೆ ಆಸ್ಪದ ಒದಗಿಸದೇ ಇಂತಹ ಕೊಳವೆ ಬಾವಿಗಳನ್ನು ಮುಚ್ಚಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದ್ದಾರೆ.