ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಹುನಗುಂದ-ತಾಳಿಕೋಟೆ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿ, ತಂಗಡಗಿಯ ಸಿದ್ರಾಮೇಶ್ವರ ವೃತ್ತದಲ್ಲಿ ಯುವಜನ ಸೇನೆಯ ಅಧ್ಯಕ್ಷ ಶಿವಾನಂದ ವಾಲಿ ತಮ್ಮ ಬೆಂಬಲಿಗರೊಂದಿಗೆ ಧರಣಿ ಸತ್ಯಾಗ್ರಹ ಆರಂಭಿಸಿದ್ದರು.
ಈ ವೇಳೆ ಉದಯರಶ್ಮಿಯೊಂದಿಗೆ ವಾಲಿ ಮಾತನಾಡಿ, ತಂಗಡಗಿ ಗ್ರಾಮದಲ್ಲಿನ ಮನೆಗಳನ್ನು ತೆರವುಗೊಳಿಸಿ, ರಸ್ತೆ ಅಗಲೀಕರಣ ಮಾಡದೇ ಕಾಮಗಾರಿ ಪೂರ್ಣಗೊಳಿಸಲಾಗಿದೆ. ರಸ್ತೆಯ ಎರಡು ಬದಿ ಚರಂಡಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದು ಇವು ಮಳೆ ನೀರು ತುಂಬಿ ಚರಂಡಿಯ ಕೊಳಚೆ ನೀರು ಊರೊಳಗೆ ಹರಿಯುತ್ತದೆ. ಇದರಿಂದ ಗಲೀಜು ವಾತಾವರಣ ನಿರ್ಮಾಣವಾಗಿ ರೋಗಗಳು ಹರಡುತ್ತಿವೆ. ಈ ಸಮಸ್ಯೆ ಇದ್ದರೂ ಟೂಲ್ ಮಾತ್ರ ಸಂಗ್ರಹಿಸಲಾಗುತ್ತಿದೆ. ರಸ್ತೆ ಕಾಮಗಾರಿ ಪೂರ್ತಿಯಾಗದೇ ಟೂಲ್ ಸಂಗ್ರಹಿಸುವದು ಕಾನೂನು ಬಾಹಿರವಾಗಿದೆ. ಈಗ ಸಮಸ್ಯೆಯನ್ನು ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇಂದು ಧರಣಿ ಆರಂಭಿಸಿದ್ದೇವೆ. ಕೂಡಲೇ ಸಂಬAಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ದಿನೇ ದಿನೇ ಹೋರಾಟವನ್ನು ಉಗ್ರವಾಗಿಸುತ್ತೇವೆ ಎಂದಿದ್ದರು.
ಬಳಿಕ ಪ್ರತಿಭಟನಾ ಸ್ಥಳಕ್ಕೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಕಾರ್ಯಪಾಲಕ ಇಂಜಿನೀಯರ್ ಪ್ರವೀಣ ಹುಲಜಿ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಪ್ರತಿಭಟನಾಕಾರರು ಸಮಸ್ಯೆ ಬಗೆಹರೆಸುವ ಬಗ್ಗೆ ಲಿಖಿತ ಪತ್ರ ನೀಡುವವರೆಗೂ ಧರಣಿ ಕೈಬಿಡುವದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಅಧಿಕಾರಿ ತಮ್ಮ ಲಿಖಿತ ಹೇಳಿಕೆಯನ್ನು ನೀಡಿದ ಬಳಿಕ ಹೋರಾಟಗಾರರು ಧರಣಿಯನ್ನು ಅಂತ್ಯಗೊಳಿಸಿದರು.
ಹೋರಾಟಕ್ಕೆ ಸಂಗಯ್ಯ ಸಾರಂಗಮಠ, ಗಂಗು ಗಡ್ಡಿ, ಮಹಾಂತೇಶ ವಡಗೇರಿ, ರಫೀಕ ತೆಗ್ಗಿನಮನಿ, ಸಂಗಣ್ಣ ಪ್ಯಾಟಿ, ಚರಲಿಂಗಪ್ಪ ರಮಾಪೂರ, ನಾಗರಾಜ ಅಗಸಿಮುಂದಿನ, ಗುರುರಾಜ ಕುಲಕರ್ಣಿ, ಪ್ರಕಾಶ ಹಂದ್ರಾಳ, ಮಂಜು ಪೂಜಾರಿ, ಮರಸಂಗಯ್ಯ ಪತ್ರಿಮಠ, ಚಂದ್ರು ಹಡಪದ, ಚನ್ನಬಸಯ್ಯ ಹಿರೇಮಠ, ಹುಲ್ಲಪ್ಪ ವಡ್ಡರ, ಶಿವಾನಂದ ದೇವರಮನಿ, ಪರಶುರಾಮ ವಡ್ಡರ, ಸಿದ್ದಣ್ಣ ಹೊಳಿ, ಸಂಗಪ್ಪ ಹೊಳಿ, ಮಂಜುನಾಥ ದೇವರಮನಿ, ವಿರೇಶ ಆಲಕೊಪ್ಪರ, ಚನ್ನವೀರಪ್ಪ ಮಮ್ಮದಕೋಟೆ ಸೇರಿದಂತೆ ಮತ್ತೀತರರು ಸಾಥ್ ನೀಡಿದ್ದರು. ಪಿಎಸ್‌ಐ ಸಂಜಯ ತಿಪರೆಡ್ಡಿ, ತಹಸೀಲ್ದಾರ ಕಚೇರಿಯ ಸರ್ಕಲ್ ಪವನ ತಳವಾರ ಹೋರಾಟಗಾರರ ಮನವೊಲಿಸುವಲ್ಲಿ ಶ್ರಮಿಸಿದರು.
ಲಿಖಿತ ಪತ್ರದಲ್ಲೇನಿದೆ?
ತಂಗಡಗಿ ಗ್ರಾಮದಲ್ಲಿ ಬಾಕಿ ೯೦ ರಿಂದ ೧೦೦ ಮೀಟರ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಧರಣಿ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಪೋಲೀಸ್ ಸಬ್ ಇನ್ಸ್ಪೆಕ್ಟರ್, ಮುದ್ದೇಬಿಹಾಳ, ಕೆ.ಆರ್.ಡಿ.ಸಿ.ಎಲ್ ಅಧಿಕಾರಿಗಳು, ಸ್ಥಳದಲ್ಲಿ ಹಾಜರಿದ್ದು, ಹಾಗೂ ತಹಶೀಲ್ದಾರರು ಮುದ್ದೇಬಿಹಾಳ ರವರೊಂದಿಗೆ ದೂರವಾಣಿ ಮುಖಾಂತರ ಚರ್ಚಿಸಿ, ಸದರಿ ವಿಷಯದ ಕುರಿತು ಮನವರಿಕೆ ಮಾಡಿಕೊಡಲಾಗಿರುತ್ತದೆ. ತಂಗಡಗಿ ಗ್ರಾಮ ವ್ಯಾಪ್ತಿಯ ಸರ್ವೆ ನಂ. ೧೨೪/೧ ರ ೨ ಎಕರೆ ಜಮೀನನ್ನು ಶೀಘ್ರವಾಗಿ ಸರ್ವೆ ಮಾಡಿಸಿ ಹದ್ದುಬಸ್ತು ಮಾಡಿ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರಿಸಿ ಮತ್ತು ಬಡಾವಣೆ ನಕ್ಷೆಯನ್ನು (ಲೇಔಟ್) ಅನುಮೋದಿಸಿ ಈ ಕಚೇರಿಗೆ ಸಲ್ಲಿಸಿದ್ದಲ್ಲಿ ಬಡಾವಣೆಯನ್ನು (ಲೇಔಟ್) ನಿಯಮಾವಳಿಗಳಂತೆ ಅಭಿವೃದ್ಧಿಪಡಿಸಿ, ಬಾದಿತ ಕಟ್ಟಡಗಳ ಮಾಲೀಕರಿಗೆ ನಿಯಮಾನುಸಾರ ನಿವೇಶನಗಳನ್ನು ವಿತರಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಮತ್ತು ಕಟ್ಟಡ ನಿರ್ಮಿಸಿಕೊಡುವ ವಿಚಾರವಾಗಿ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರದ ನಿಯಮಾವಳಿಗಳು ಹಾಗೂ ಸುತ್ತೋಲೆಯಂತೆ ತಮಗೆ ತಿಳಿಸಲಾಗುವುದು. ತದನಂತರ ತಂಗಡಗಿ ಗ್ರಾಮದಲ್ಲಿ ಬಾಕಿ ಉಳಿದಿರುವ ೯೦ ರಿಂದ ೧೦೦ ಮೀಟರ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಟೋಲ್ ಸಂಗ್ರಹದ ಬಗ್ಗೆ ಲಿಖಿತ ವಿವರಣೆ ಇಲ್ಲ
ರಸ್ತೆ ಪೂರ್ಣಗೊಳ್ಳುವವರೆಗೂ ಟೋಲ್ ಸಂಗ್ರಹವನ್ನು ನಿಲ್ಲಿಸುವಂತೆ ಹೋರಾಟಗಾರರ ವಾದವಾಗಿತ್ತು. ಧರಣಿಯ ವೇಳೆ ರಸ್ತೆ ಪೂರ್ಣಗೊಳ್ಳುವವರೆಗೂ ಟೂಲ್ ಸಂಗ್ರಹ ನಿಲ್ಲಿಸುವ ಬಗ್ಗೆ ಅಥವಾ ಸಧ್ಯ ಪಡೆಯುತ್ತಿರುವ ಟೂಲ್ ನಲ್ಲಿ ಕೆಲ ಹಣವನ್ನು ಕಡಿತಗೊಳಿಸುವ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡದಿರುವದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಯಿತು.