ವಿಜಯಪುರ ಜಿಲ್ಲಾಡಳಿತದಿಂದ ಭಗವಾನ ಮಹಾವೀರರ ಜಯಂತಿ ಆಚರಣೆ | ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜೈನ ಧರ್ಮದ ೨೪ನೇ ತೀರ್ಥಂಕರಾದ ಭಗವಾನ ಮಹಾವೀರ ಅವರ ಚಿಂತನೆಯ ಸತ್ಯ,ಅಹಿಂಸೆ, ಕರುಣಾಭಾವದಂತಹ ಅವರ ಬೋಧನೆಯ ತತ್ವಗಳು ಸಾರ್ವಕಾಲಿಕವಾಗಿವೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಹೇಳಿದರು.
ಗುರುವಾರ ನಗರದ ಕಂದಗಲ್ ಶ್ರೀ ಹನಮಂತರಾಯ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಭಗವಾನ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅಹಿಂಸೆಯ ಆಚರಣೆಯ ಮಾರ್ಗದಲ್ಲಿ ಜೀವನದ ಸಾಕ್ಷಾತ್ಕಾರದ ಪಥ ತೋರಿಸಿದ ಮಹಾಪುರುಷರಾಗಿದ್ದಾರೆ.
ಸಕಲ ಜೀವಿಗಳಿಗೂ ಒಳಿತು ಬಯಸಿದ ಮಹಾವೀರರು, ಆ ದಿಸೆಯಲ್ಲಿ ಜೀವನ ಮುಡುಪಾಗಿಟ್ಟಿದ್ದ ಅವರು, ಅಹಿಂಸೆ, ತ್ಯಾಗ ಹಾಗೂ ವೈರಾಗ್ಯದ ಸಾಕಾರಮೂರ್ತಿಯಾಗಿದ್ದರು. ಸಂತರು, ಸತ್ಪುರುಷರು, ದಾರ್ಶನಿಕರ ಜೀವನಾದರ್ಶಗಳು ಹಾಗೂ ಅವರು ನೀಡಿದ ಸಂದೇಶಗಳನ್ನು ಅರಿತುಕೊಂಡು ಅಳವಡಿಸಿಕೊಳ್ಳಬೇಕಿದೆ ಎಂದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಮಾತನಾಡಿ, ಭಗವಾನ ಮಹಾವೀರರ ತತ್ವ ಸಿದ್ಧಾಂತಗಳನ್ನು ಈಗಿನ ಯುವಕರು ಪಾಲನೆ ಮಾಡುವುದರ ಜೊತೆಗೆ ಅಳವಡಿಸಿಕೊಳ್ಳಬೇಕು. ಅವರು ಶಾಂತಿ ಪ್ರೀಯರು, ಅಹಿಂಸಾವಾದಿಗಳಾದ ಇವರು ತಮ್ಮ ತತ್ವ ಚಿಂತನೆಗಳ ಮೂಲಕ ಎಲ್ಲರ ಅಭ್ಯುದಯ ಬಯಸಿದವರು ಎಂದು ಅವರು ಹೇಳಿದರು.
ಅಲ್ ಅಮೀನ ವೈದ್ಯಕೀಯ ಕಾಲೇಜಿನ ಪ್ರಾದ್ಯಾಪಕ ಡಾ. ಕಿರಣ ಓಸ್ವಾಲ್ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಆಚಾರ್ಯ ಶ್ರೀ ಹೀರಚಂದ ವಿಜಯಜಿ ಮಹಾರಾಜ ಆಶೀರ್ವಚನ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಬೋವಿ ಸ್ವಾಗತಿಸಿದರು. ಮಹಾನಗರಪಾಲಿಕೆಯ ವಲಯ ಆಯುಕ್ತರಾದ ಮಹಾವೀರ ಬೋರನ್ನವರ ವಂದಿಸಿದರು.
ಬೆಳಿಗ್ಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಭಗವಾನ ಮಹಾವೀರರ ಭಾವಚಿತ್ರಕ್ಕೆ ಪುಷ್ಟ ನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೊಮಲಿಂಗ ಗೆಣ್ಣೂರ, ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರಾದ ಬಿ.ಎಸ್. ರಾಠೋಡ, ವಿವಿಧ ಸಂಘ ಸಂಸ್ಥೆಯ ಮುಖಂಡರಾದ ಮಹಾವೀರ ಪಾರೇಖ, ನಿತಿನ್ ರುಣವಾಲ, ಮದನ್ ಜೈನ್, ಅರುಣ ರುಣವಾಲ್, ವಿಜಯ ರುಣವಾಲ, ವಿಕ್ರಮ ರುಣವಾಲ, ಅಶೋಕ ರುಣವಾಲ, ವಿದ್ಯಾವತಿ ಅಂಕಲಗಿ ಹಾಗೂ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.