ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಆಯುಷ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ Global Wellbeing Confluence- ಜಾಗತಿಕ ಯೋಗಕ್ಷೇಮ ಸಂಗಮ ನಾಳೆ ದಿ. 11 ಶುಕ್ರವಾರದಿಂದ ನಾಲ್ಕು ದಿನಗಳಕಾಲ ನಡೆಯಲಿದೆ.
ದಿ.11 ಶುಕ್ರವಾರ ನಡೆಯಲಿರುವ ಸಮಾವೇಶದಲ್ಲಿ ಆಯುಷ್ ವೈದ್ಯರ ವೈದ್ಯಕೀಯೇತರ ವಿಶೇಷ ಸಾಧನೆಗಾಗಿ ಕೈಗಾರಿಕೆ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಮತ್ತು ಆಲಮೇಲದ ಡಾ. ಸಮೀರ ಹಾದಿಮನಿಯವರನ್ನು ಗೌರವಿಸಲಿದೆ.
ಡಾ.ಮಹಾಂತೇಶ ಬಿರಾದಾರ ವೃತ್ತಿಯಲ್ಲಿ ವೈದ್ಯರಾಗಿದ್ದು, ಹಾಫ್ ಮ್ಯಾರಥಾನ್ ಪಟುವಾಗಿ ಮತ್ತು ಸೈಕ್ಲಿಂಗ್ ಪಟುವಾಗಿ ದೇಶದಾದ್ಯಂತ ಹಲವಾರು ಸ್ಪರ್ಧೆಗಳಲ್ಲಿ, ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಫ್ರೀಲ್ಯಾನ್ಸ್ ಜರ್ನಲಿಸ್ಟ್ ಆಗಿದ್ದು ಸದ್ಯ ಬೃಹತ್ ಕೈಗಾರಿಕಾ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆಲಮೇಲದ ಡಾ. ಸಮೀರ ಹಾದಿಮನಿ ಆಯುಷ್ ವೈದ್ಯರ ವೇತನ ಪರಿಷ್ಕರಣೆ, ನೌಕರಿ ಕಾಯಂಮಾತಿ, ನೇಮಕಾತಿ, ಖಾಸಗಿ ಆಯುಷ್ ವೈದ್ಯರ ರಕ್ಣಣೆ ಮುಂತಾದ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಕ್ಕೆ ಸಾರ್ವಜನಿಕ ಹಿತಾಸಕ್ತಿ ಪತ್ರಗಳನ್ನು ಬರೆಯುವುದರ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೆ ಸಾಹಿತ್ಯ ರಚನೆ, ಸಮಾಜ ಸೇವೆ ಮತ್ತು ವ್ಯಂಗ್ಯಚಿತ್ರಕಾರರಾಗಿಯೂ ಹೆಸರು ಮಾಡಿದ್ದಾರೆ.
ಈ ಸಮಾವೇಶದಲ್ಲಿ ಆಯುಷ್ ವೈದ್ಯಕೀಯ ವಿಜ್ಞಾನದಲ್ಲಿ ಇತ್ತೀಚಿನ ಬೆಳವಣಿಗೆ, ಚಿಕಿತ್ಸೆಗಳ ಬಗ್ಗೆ ಚರ್ಚೆ, ಸಂವಾದ, ವಿವಿಧ ಗೋಷ್ಠಿಗಳು ಜರುಗಲಿವೆ.
ಈ ಸಮಾವೇಶದಲ್ಲಿ ಸುತ್ತೂರು ಡಾ. ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಆರೋಗ್ಯ ಸಚಿವ ದಿನೇಶ ಗುಂಡೂರಾವ್, ಲೋಕಸಭಾ ಸದಸ್ಯರಾದ ಪಿ ಸಿ ಮೋಹನ್, ಈರಣ್ಣ ಕದಡಿ, ಶಾಸಕ ಡಾ. ಸಿ ಎನ್ ಅಶ್ವತನಾರಾಯಣ ಸೇರಿದಂತೆ ಆಯುಷ್ ಇಲಾಖೆಯ ಸೆಕ್ರೆಟರಿ, ಕುಲಪತಿಗಳು, ಉಪಕುಲಪತಿ, ಚೇರಮನ್, ಸಿಇಒ ಸೇರಿದಂತೆ ಆಯುಷ್ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.