ವಿಜಯಪುರ ಜಿ.ಪಂ. ಸಿಇಓ ರಿಷಿ ಆನಂದ್ ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ, ಸ್ವಚ್ಛತೆ ಹಾಗೂ ಅಂಗನವಾಡಿ ಕೇಂದ್ರಗಳ ಅಭಿವೃದ್ದಿಗೆ ಆದ್ಯತೆ ನೀಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರ ಇಂಡಿ ತಾಲೂಕ ಪಂಚಾಯತಿ ಇಂಡಿ ಸಭಾ ಭವನದಲ್ಲಿ ಇಂಡಿ ಮತ್ತು ಚಡಚಣ ತಾಲೂಕಿನ ಎಲ್ಲ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳೊಂದಿಗೆ ಗ್ರಾಮಗಳ ಸ್ವಚ್ಚತೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಗ್ರಾಮಗಳ ಮನೆ ಮನೆಗಳಿಗೆ ಭೇಟಿ ಮಾಡಿ ಕುಡಿಯುವ ನೀರು ಸಮಸ್ಯೆ ಕುರಿತು ವೀಕ್ಷಣೆ ಮಾಡಬೇಕು. ಕುಡಿಯುವ ನೀರಿನ ಸಮಸ್ಯೆಗಳಿದ್ದಲ್ಲಿ ಕೂಡಲೇ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ನೀರು ಪೂರೈಕೆ ಪೂರ್ವದಲ್ಲಿ ನೀರಿನ ಗುಣಮಟ್ಟ ಪರೀಕ್ಷೆ ಮಾಡಿ ತದನಂತರ ಕುಡಿಯುವ ನೀರನ್ನು ಪೂರೈಸಬೇಕು, ಸಮಸ್ಯೆಗಳಿದ್ದಲ್ಲಿ ಕೂಡಲೇ ಮೇಲಾಧಿಕಾರಿಗಳಿಗೆ ವರದಿ ಮಾಡತಕ್ಕದ್ದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಂದ ತಕ್ಷಣ ಪರಿಹಾರ ಒದಗಿಸಲಾಗುವುದು. ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಸಂಬAಧಿಸಿದAತೆ ಯಾವುದೇ ಸಮಸ್ಯೆಗಳುಂಟಾಗದAತೆ ಕ್ರಮವಹಿಸಬೇಕು. ಸಮಸ್ಯೆಗಳು ಉದ್ಭವಿಸುವ ಪೂರ್ವದಲ್ಲಿಯೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಶೇ.೯೦ ರಷ್ಟು ಶಾಲೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ನೀರಿನ ವ್ಯವಸ್ಥೆ ಇದೆ ಇನ್ನು ಶೇ.೧೦ ರಷ್ಟು ನೀರಿನ ವ್ಯವಸ್ಥೆ ಮಾಡಬೇಕಾಗಿದೆ. ಪಂಚಾಯಿತಿ ವ್ಯಾಪ್ತಿಗಳಲ್ಲಿ ಶಾಲೆಗಳು, ಅಂಗನವಾಡಿಗಳು, ಗ್ರಂಥಾಲಯಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಹತ್ವದ್ದಾಗಿದೆ. ಹಾಗಾಗಿ ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರರು ಸಮನ್ವಯ ಸಾಧಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಅಂಗನವಾಡಿ ಕೇಂದ್ರಗಳ ಸುತ್ತ – ಮುತ್ತಲಿನ ಪರಿಸರ ಸ್ವಚ್ಚತೆಯಿಂದ ಕಾಪಾಡಿಕೊಳ್ಳಬೇಕು. ಮಕ್ಕಳ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿ, ಪೋಲಿಯೋ ವೈರಸ್ ರೋಗದ ಉದಾಹರಣೆ ನೀಡುತ್ತಾ ರೋಗ – ರುಜಿನುಗಳು ಬರದ ಹಾಗೆ ಅಂಗನವಾಡಿಗಳ ಸುತ್ತ ಮುತ್ತ ಸ್ವಚ್ಚತೆ ಕಾಯ್ದುಕೊಂಡಲ್ಲಿ ಎಲ್ಲ ಮಕ್ಕಳು ಆರೋಗ್ಯವಂತರಾಗಿರುತ್ತಾರೆ. ಪ್ರಸ್ತುತ ಆರಂಭಿಸಲಾಗಿರುವ “ಸ್ವಚ್ಛ ಅಂಗನವಾಡಿ-ಬಾಲ ಸ್ನೇಹಿ ಅಂಗನವಾಡಿ ”ಅಭಿಯಾನವನ್ನು ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಬೇಕು. ಪ್ರತಿವಾರ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂರು ಅಂಗನವಾಡಿಗಳ ಒಳಾಂಗಣ ಮತ್ತು ಹೊರಾಂಗಣ ಆವರಣಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಈ ಅಭಿಯಾನದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಯವರು ಕಡ್ಡಾಯವಾಗಿ ಭಾಗವಹಿಸಬೇಕು. ಪ್ರತಿ ನಿತ್ಯ ತಾಲೂಕು ಮಟ್ಟದ ಅಧಿಕಾರಿಗಳು ಕ್ಷೇತ್ರ ಭೇಟಿ ನೀಡಿ “ಸ್ವಚ್ಛ ಅಂಗನವಾಡಿ-ಬಾಲ ಸ್ನೇಹಿ ಅಂಗನವಾಡಿ” ಅಭಿಯಾನದ ಕುರಿತು ಪರಿಶೀಲನೆ ಮಾಡಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.
ಗ್ರಾಮ ಪಂಚಾಯತಿಗಳಲ್ಲಿ ಲಭ್ಯವಿರುವ ಅನುದಾನದಲ್ಲಿ ಅಂಗನವಾಡಿ ಮತ್ತು ಗ್ರಂಥಾಲಯಗಳಿಗೆ ಅವಶ್ಯಕತೆಯಿರುವ ಕಲಿಕಾ ಸಾಮಗ್ರಿಗಳು, ವಿನೂತನ ಆಟಿಕೆ ಸಾಮಾನುಗಳು, ಉತ್ತಮ ಪುಸ್ತಕಗಳು, ಮೇಜುಗಳನ್ನು ಕಡ್ಡಾಯವಾಗಿ ಪೊರೈಕೆ ಮಾಡಿ ಮಾದರಿ ಅಂಗನವಾಡಿಗಳನ್ನಾಗಿ ಮಾರ್ಪಡಿಸಲು ಸೂಚಿಸಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಆದ್ಯತೆ ಕಾಮಗಾರಿಗಳಾದ ಮಳೆನೀರು ಕೊಯ್ಲು ಘಟಕ, ಬೋರ್ ವೆಲ್ ಮರುಪೂರಣ ಘಟಕ, ಶಾಲಾ ಶೌಚಾಲಯ, ಬಿಸಿಯೂಟದ ಅಡುಗೆ ಕೋಣೆ, ಶಾಲಾ ಕಾಂಪೌಂಡ್, ಶಾಲಾ ಆಟದ ಮೈದಾನ, ಸ್ಮಶಾನ ಅಭಿವೃದ್ಧಿ ಮತ್ತು ಎನ್.ಆರ್.ಎಲ್.ಎಮ್ ಸಂಜೀವಿನಿ ಶೆಡ್ ಕಾಮಗಾರಿಗಳನ್ನು ಪ್ರಾರಂಭಿಸಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು ಹಾಗೂ ಶಾಲೆಗಳ ಶೌಚಾಲಯ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಿ ನಿರಂತರವಾಗಿ ಸ್ವಚ್ಚತೆ ಕಾಪಾಡಲು ಕ್ರಮವಹಿಸಬೇಕು ಎಂದರು.
ಪ್ರತಿ ಗ್ರಾಮದಲ್ಲೊಂದು ಆಟದ ಮೈದಾನ ನಿರ್ಮಾಣ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ಕುರಿತು ಹೆಚ್ಚಿನ ಗಮನ ಹರಿಸಬೇಕು ಹಾಗೂ ಅತೀ ತ್ವರಿತವಾಗಿ ಕಾಮಗಾರಿಗಳನ್ನು ಪ್ರಾರಂಭಿಸಬೇಕು ಎಂದು ಸೂಚಿಸಿದರು. ಗ್ರಾಮ ಪಂಚಾಯತಿ ತೆರಿಗೆ ಸಂಗ್ರಹಣೆ ಪ್ರಗತಿಯನ್ನೂ ಸಹ ಆದ್ಯತೆಯ ಮೇರೆಗೆ ಸಾಧಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಇಂಡಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ನಂದೀಪ ರಾಠೋಡ, ಚಡಚಣ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂಜಯ ಖಡಗೇಕರ, ಸಹಾಯಕ ನಿರ್ದೇಶಕರು (ಗ್ರಾ.ಉ) ಮಹಾಂತೇಶ ಹೋಗೋಡಿ, ಸಹಾಯಕ ನಿರ್ದೇಶಕರು (ಪಂ.ರಾ) ಪ್ರಕಾಶ ರಾಠೋಡ, ಇಂಡಿ ಮತ್ತು ಚಡಚಣ ತಾಲೂಕುಗಳ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ತಾಲೂಕ ಪಂಚಾಯತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು.