ವಿಜಯಪುರ ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ್ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ‘ಜಿಲ್ಲೆಯಲ್ಲಿ ಅಂಗನವಾಡಿಗಳನ್ನು ಅಭಿವೃದ್ಧಿ”ಗೊಳಿಸುವ ನಿಟ್ಟಿನಲ್ಲಿ “ಸ್ವಚ್ಛ ಅಂಗನವಾಡಿ-ಬಾಲ ಸ್ನೇಹಿ ಅಂಗನವಾಡಿ” ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ್ ಅವರು ತಿಳಿಸಿದ್ದಾರೆ.
ಅಂಗನವಾಡಿ ಕೇಂದ್ರಗಳ ಸುತ್ತಲೂ ಕೊಳಚೆ ನೀರು ಸಂಗ್ರಹಗೊಳ್ಳುವುದು, ಚರಂಡಿಗಳು, ಕೇಂದ್ರದ ಮಕ್ಕಳಿಗೆ ಮತ್ತು ಕೇಂದ್ರಕ್ಕೆ ಬರುವ ಗರ್ಭಿಣಿ ಮತ್ತು ತಾಯಂದಿರಿಗೆ ದುರ್ವಾಸನೆ, ವೃದ್ಧರು, ಮಕ್ಕಳು ಅಂತಹ ರಸ್ತೆಗಳಲ್ಲಿ ಒಡಾಡಲು ಕಷ್ಟ, ಕೇಂದ್ರದ ಮಕ್ಕಳಿಗೆ ಆಟವಾಡಲು ಚರಂಡಿಗಳ ಹತ್ತಿರ ಹೋದರೆ ಅಪಾಯ, ಅಲ್ಲದೇ ಚರಂಡಿ ನೀರಿನಿಂದ ಸೊಳ್ಳೆಗಳ ಉತ್ಪತ್ತಿ, ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೀಗೆ ಅನೇಕ ಸಮಸ್ಯೆಗಳಿಗೆ ಒಂದೇ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಜಿಲ್ಲೆಯಲ್ಲಿ ಪ್ರತಿ ಅಂಗನವಾಡಿಗಳನ್ನು ಮಾದರಿ ಹಾಗೂ ಆಕರ್ಷಕ ಅಂಗನವಾಡಿ ಕೇಂದ್ರಗಳನ್ನಾಗಿ ಮಾಡಲು ವಿಶೇಷ ಅಭಿಯಾನವೊಂದನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದುವೇ “ಸ್ವಚ್ಛ ಅಂಗನವಾಡಿ-ಬಾಲ ಸ್ನೇಹಿ ಅಂಗನವಾಡಿ” ಅಭಿಯಾನ. ಪ್ರಸ್ತುತ ಆರಂಭಿಸಲಾಗಿರುವ ಈ ಅಭಿಯಾನದಡಿ ಪ್ರತಿವಾರ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂರು ಅಂಗನವಾಡಿ ಕೇಂದ್ರಗಳನ್ನು ಸಂಪೂರ್ಣ ಸ್ವಚ್ಛಗೊಳಿಸಬೇಕು. ಭೂಮಿಯ ಮೇಲೆ ಬದುಕಲು ಪ್ರಕೃತಿಯು ಆಮ್ಲಜನಕ ನೀಡುವ ಮೂಲಕ ಮನುಷ್ಯನ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಮತ್ತು ನಮ್ಮ ಜೀವನವನ್ನು ಸುಸ್ಥಿರಗೊಳಿಸುತ್ತದೆ. ಪರಿಸರವಿಲ್ಲದೆ ಭೂಮಿಯ ಮೇಲೆ ಬದುಕುವುದು ಅಸಾಧ್ಯ ಆದಾಗ್ಯೂ ನಾವು ಈ ಪರಿಸರವನ್ನು ಕಾಪಾಡದಿದ್ದರೆ ಒಂದಲ್ಲಾ ಒಂದು ದಿನ ಅಂತಹ ಸಂದರ್ಭ ಬರಬಹುದಲ್ಲವೇ. ಪರಿಸರದ ಬಗ್ಗೆ ಕಾಳಜಿ ವಹಿಸುವುದು ಮತ್ತು ಅಗತ್ಯಕ್ಕೆ ತಕ್ಕಂತೆ ಸರಳವಾದ ಜೀವನವನ್ನು ಜೀವಿಸುವುದೂ ಕೂಡ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಸ್ವಚ್ಛತೆಯೂ ಕೂಡ ಅಷ್ಟೇ ಮುಖ್ಯ. ಅಂಗನವಾಡಿ ಕೇಂದ್ರಗಳಿಗೆ ಬರುವ ಮಕ್ಕಳು ಸಣ್ಣ ವಯಸ್ಸಿನವರಾಗಿರುವುದರಿಂದ ಅವರ ಆರೋಗ್ಯ ತುಂಬಾ ಸೂಕ್ಷ್ಮವಾಗಿರುತ್ತದೆ. ಮಕ್ಕಳು ಪ್ರತಿದಿನ ಅಂಗನವಾಡಿಗಳಲ್ಲಿ ಹೆಚ್ಚಿನ ಸಮಯ ಕಳೆಯುವುದರಿಂದ ಅವರಿಗೆ ಸ್ವಚ್ಛವಾದ ವಾತಾವರಣ ಅತ್ಯಂತ ಮುಖ್ಯವಾದದ್ದು, ಆದ್ದರಿಂದ “ಸ್ವಚ್ಛ ಅಂಗನವಾಡಿ-ಬಾಲ ಸ್ನೇಹಿ ಅಂಗನವಾಡಿ” ಅಭಿಯಾನದ ಮೂಲಕ ಎಲ್ಲ ಅಂಗನವಾಡಿ ಕೇಂದ್ರಗಳ ಒಳಾಂಗಣ ಮತ್ತು ಹೊರಾಂಗಣ ಆವರಣಗಳನ್ನು ಸ್ವಚ್ಛಗೊಳಿಸುವುದಾಗಿದೆ.
ಈ ಸ್ವಚ್ಛತಾ ಕಾರ್ಯದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಯವರು ಕಡ್ಡಾಯವಾಗಿ ಭಾಗವಹಿಸಬೇಕು. ಪ್ರತಿ ನಿತ್ಯ ತಾಲೂಕು ಮಟ್ಟದ ಅಧಿಕಾರಿಗಳು ಕ್ಷೇತ್ರ ಭೇಟಿ ನೀಡಿ ಅಭಿಯಾನ ನಡೆಯುತ್ತಿರುವ ಕುರಿತು ಪರಿಶೀಲನೆ ನಡೆಸಿ ಜಿಲ್ಲಾ ಪಂಚಾಯತಿಗೆ ವರದಿ ಸಲ್ಲಿಸಬೇಕು.
ಸ್ವಚ್ಛ ಗ್ರಾಮ-ಸ್ವಚ್ಛ ಅಂಗನವಾಡಿಗಳ ನಿರ್ಮಾಣ, ಅಂಗನವಾಡಿ ಮಕ್ಕಳ ಜೀವನಮಟ್ಟ ಸುಧಾರಿಸುವುದು, ಅಂಗನವಾಡಿ ಕೇಂದ್ರಗಳ ಸುತ್ತಲೂ ನಿರಂತರವಾಗಿ ಸ್ವಚ್ಛತೆಯನ್ನು ಕಾಪಾಡುವುದು.ಅಂಗನವಾಡಿ ಕೇಂದ್ರಗಳ ಮಕ್ಕಳ ಆರೋಗ್ಯ ಕುರಿತು ಕಾಳಜಿ ವಹಿಸುವುದು,ಕೇಂದ್ರದ ಮಕ್ಕಳಿಗೆ ಉಂಟಾಗುವ ಸಾಂಕ್ರಾಮಿಕ ಖಾಯಿಲೆಗಳನ್ನು ತಡೆಗಟ್ಟುವುದು, ಗ್ರಾಮೀಣ ಮಟ್ಟದ ಮಕ್ಕಳ ಶೈಕ್ಷಣಿಕ ಜೀವನದ ಅಡಿಪಾಯವು ಅತ್ಯಂತ ಸದೃಢವಾಗುವಂತೆ ಕ್ರಮ ವಹಿಸುವುದು ಅಭಿಯಾನದ ಉದ್ದೇಶವಾಗಿದೆ.
ಮಕ್ಕಳ ‘ಆನಂದ’ವೇ ನಮಗೆ ಮುಖ್ಯ: ಅಂಗನವಾಡಿ ಕೇಂದ್ರಗಳು ಮಕ್ಕಳ ಶ್ರೇಯೋಭಿವೃದ್ಧಿಯ ದಿವ್ಯ ತಾಣಗಳು, ಈ ಅಂಗನವಾಡಿ ಕೇಂದ್ರಗಳು ಪ್ರಗತಿಗೊಂಡರೆ ಮಕ್ಕಳಿಗೆ ಅತ್ಯಂತ ಅನುಕೂಲವಾಗುತ್ತದೆ. ಈ ಕಾರಣಕ್ಕಾಗಿಯೇ ಗ್ರಾಮೀಣ ಮಟ್ಟದ ಮಕ್ಕಳ ಶೈಕ್ಷಣಿಕ ಜೀವನದ ಅಡಿಪಾಯವು ಅತ್ಯಂತ ಸದೃಢವಾಗುವುದರ ಜೊತೆಗೆ ಮಕ್ಕಳ ಹಾಜರಾತಿಯ ನಿರಂತರತೆಯನ್ನು ಕಾಯ್ದುಕೊಂಡು ಮಕ್ಕಳ ಸ್ನೇಹಿ ಕೇಂದ್ರಗಳನ್ನಾಗಿಸುವುದಾಗಿದೆ. ಮಕ್ಕಳಿಗೆ ಆಟೋಟಗಳಲ್ಲಿ ಪ್ರೋತ್ಸಾಹ ದೊರೆತು ದೈಹಿಕ ಹಾಗೂ ಮಾನಸಿಕ ಸದೃಢತೆ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ಕೆ ಅಣಿಯಾಗಲಾಗಿದೆ. ಸದರಿ ಕೇಂದ್ರದ ಮಕ್ಕಳಿಗೆ ಸರಿಯಾಗಿ ಶಾಲಾ ಪೂರ್ವ ಶಿಕ್ಷಣ ನೀಡಬೇಕು. ಕೇಂದ್ರದಲ್ಲಿ ಪ್ರತಿನಿತ್ಯ ಸ್ವಚ್ಛತೆ ಕಾಪಾಡಿಕೊಳ್ಳುವುದರ ಜೊತೆಗೆ ಮಕ್ಕಳಿಗೆ ಶಿಸ್ತು ಪಾಲನೆ ಹಾಗೂ ಕಲಿಕೆಗೆ ಆದ್ಯತೆ ನೀಡಬೇಕು. ಪ್ರತಿ ತಿಂಗಳು ಕಡ್ಡಾಯವಾಗಿ ಮಕ್ಕಳು, ಬಾಣಂತಿಯರಿಗೆ ಪೂರಕ ಪೌಷ್ಠಿಕ ಆಹಾರದ ಸಮರ್ಪಕ ವಿತರಣೆ ಮಾಡಬೇಕು. ಪ್ರತಿ ಮಾಹೆ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಬೇಕು.
ಜೊತೆಗೆ ಗ್ರಾಮ ಪಂಚಾಯತಿಗಳಲ್ಲಿ ಲಭ್ಯವಿರುವ ಅನುದಾನ ಬಳಸಿ, ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳಿಗೆ ಆಕರ್ಷಣೀಯ ಚಿತ್ರ(ಬಾಲಾ ಪೇಂಟಿAಗ್)ಗಳನ್ನು ಬಿಡಿಸುವುದು, ಮಕ್ಕಳಿಗೆ ಬೆಂಚ್ ಗಳು, ವಿನೂತನ ಆಟಿಕೆ ಸಾಮಗ್ರಿಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ಪೂರೈಸುವುದು. ಸಣ್ಣ ಪುಟ್ಟ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವುದು, ವಿದ್ಯುತ್ ವ್ಯವಸ್ಥೆ, ಸದರಿ ಕೇಂದ್ರಗಳಲ್ಲಿ ಸ್ಥಳಾವಕಾಶ ಇದ್ದಲ್ಲಿ ಬಯೋ ಫೆನ್ಸಿಂಗ್ ಮಾಡಲು ಕ್ರಮ ಕೈಗೊಳ್ಳುವುದು, ಅಡುಗೆ ಕೋಣೆ ಮತ್ತು ದಾಸ್ತಾನು ಕೋಣೆಗಳನ್ನು ವ್ಯವಸ್ಥಿತವಾಗಿಡುವುದು. ಕೇಂದ್ರದ ಕಿಟಕಿಗಳಿಗೆ ಸೊಳ್ಳೆ ಪರದೆ ಅಳವಡಿಸುವುದು, ಆವರಣದಲ್ಲಿ ಪೌಷ್ಟಿಕ ತೋಟವನ್ನು ನಿರ್ಮಿಸಬೇಕು. ಬಹುಮುಖ್ಯವಾಗಿ ಅಲ್ಲಿ ಮಕ್ಕಳ ಸ್ನೇಹಿ ಶೌಚಾಲಯಗಳನ್ನು ನಿರ್ಮಾಣ ಮಾಡುವುದು ಹೀಗೆ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಏಕಕಾಲದಲ್ಲಿ ಕೈಗೊಳ್ಳಲು ಕ್ರಮ ವಹಿಸಲಾಗುತ್ತಿದೆ.
ಸದರಿ ಅಭಿಯಾನ ಪೂರ್ಣಗೊಂಡ ನಂತರವೂ ಸಹ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಪ್ರತಿ ಮಾಹೆ ಮೊದಲನೆ ಶನಿವಾರದಂದು ಸ್ವಚ್ಛ ಶನಿವಾರ” ಆಚರಿಸುವುದರ ಮೂಲಕ ಸ್ವಚ್ಛಗೊಳಿಸಬೇಕು.
೩೪ ಅಂಗನವಾಡಿ ಕೇಂದ್ರಗಳಿಗೆ ಹೈಟೆಕ್ ಸ್ಪರ್ಶ:ಜಿಲ್ಲಾ ಪಂಚಾಯತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ೩೪ ಅಂಗನವಾಡಿಗಳನ್ನು ಮಾದರಿ ಹಾಗೂ ಆಕರ್ಷಕ ಅಂಗನವಾಡಿ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿ ಸಲಾಗುತ್ತಿದೆ. ಈಗಾಗಲೇ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಎಲ್ಲಾ ೩೪ ಅಂಗನವಾಡಿ ಕೇಂದ್ರಗಳಿಗೆ ಕಡ್ಡಾಯವಾಗಿ ಬಾಲ ಸ್ನೇಹಿ ಪೇಂಟಿಂಗ್, ಬಯೋಫೆನ್ಸಿಂಗ್, ಪೌಷ್ಟಿಕ ಕೈತೋಟ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ.
೨,೭೫೫ ಅಂಗನವಾಡಿ ಕೇಂದ್ರಗಳಿದ್ದು, ಅದರಲ್ಲಿ ೧,೪೨೫ ಸ್ವಂತ ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ೨೦೨೨-೨೩ನೇ ಸಾಲಿನಲ್ಲಿ ಒಟ್ಟು ೧೦೦ ಅಂಗನವಾಡಿ ಕೇಂದ್ರಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅದರಲ್ಲಿ ೬೬ ಅಂಗನವಾಡಿ ಕೇಂದ್ರಗಳು ಈಗಾಗಲೇ ಪೂರ್ಣಗೊಂಡಿದ್ದು, ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.