ಉದಯರಶ್ಮಿ ದಿನಪತ್ರಿಕೆ
ಇಂಡಿ: ಕನ್ನಡ ನವೋದಯ ಮೂರು ಕೇಂದ್ರಗಳ ಜೊತೆಗೆ ಹಲಸಂಗಿ ಗೆಳೆಯರ ಬಳಗವು ನಾಲ್ಕನೇಯ ಕೇಂದ್ರವಾಗಿದೆ, ಈ ಭಾಗದ ಹಲಸಂಗಿ ಗೆಳೆಯರು ಜಾನಪದ ಲೋಕಕ್ಕೆ ನೀಡಿದ ಕೊಡುಗೆ ಸ್ಮರಣಿಯ ಎಂದು ಹಿರಿಯ ಜಾನಪದ ಸಾಹಿತಿ ಶಂಕರ ಬೈಚಬಾಳ ಹೇಳಿದರು,
ಅವರು ಬುಧವಾರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಜಾನಪದ ಉತ್ಸವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನೀಡಿದರು.
ಇಂಡಿ ಭಾಗದ ಈ ನೆಲವು ಜಾನಪದದ ಶಕ್ತಿ ಕೇಂದ್ರವೂ ಆಗಿದೆ, ನೂರು ವರ್ಷಗಳ ಹಿಂದೆಯೇ ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಇಲ್ಲಿ ನಡೆದಿದೆ, ಮಧುರಚೆನ್ನ, ಸಿಂಪಿ ಲಿಂಗಣ್ಣ, ಪಿ.ಧೂಲಾಸಾಹೇಬ ಮೊದಾಲಾದ ಗೆಳೆಯರು ಧಾರವಾಡ ಗೆಳೆಯರ ಬಳಗದಂತೆಯೇ ಜಾನಪದ ಸಾಹಿತ್ಯದಲ್ಲಿ ಕಾರ್ಯಮಾಡಿದ್ದರು ಅಂತಹ ಹಿರಿಯರನ್ನು ಸ್ಮರಿಸುವ ಕೆಲಸ ನಿರಂತರ ನಡೆಯಬೇಕು ಎಂದು ಆಶಿಸಿದರು.
ಅಕ್ಕಮಹಾದೇವಿ ಮಹಿಳಾ ವಿವಿಯ ಸಿಂಡಿಕೇಟ್ ಸದಸ್ಯ ಪ್ರೊ.ಎಸ್.ಜೆ. ಮಾಡ್ಯಾಳ ಮಾತನಾಡಿ ʼಜಾಣಪದ ಉಳಿಯಲು ಗ್ರಾಮೀಣ ಭಾಗದವರ ಕೊಡುಗೆ ದೊಡ್ಡದು, ಅದನ್ನು ಮುಂದುವರೆಸಿಕೊಂಡು ಹೋಗಲು ನಾವೆಲ್ಲರೂ ಕಟಿಬದ್ಧರಾಗೋಣ ಎಂದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ರಮೇಶ ಆರ್ .ಎಚ್ ಮಾತನಾಡಿ, ʼನಮ್ಮ ಕಾಲೇಜಿನಲ್ಲಿ ಜಾಣಪದ ಉತ್ಸವವನ್ನು ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆದ ಮಹತ್ವದ ಕಾರ್ಯಕ್ರಮ ಎಂದು ಶ್ಲಾಘಿಸಿದರು.
ವಿದ್ಯಾರ್ಥಿಗಳಿಗಾಗಿ ವಿವಿಧ ಜಾನಪದ ಸ್ಪರ್ಧೆಗಳು ಜರುಗಿದವು, ಜಾನಪದ ಗಾಯನ, ಒಡುಪು ಹೇಳುವ ಸ್ಪರ್ಧೆ, ಜಾನಪದ ಆಟಗಳಾದ ಲಗೋರಿ, ಹಳ್ಳಿ ಅಡುಗೆ ಸ್ಪರ್ಧೆ ಮೊದಲಾದವುಗಳು ಎರಡು ದಿನಗಳ ಕಾಲ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಸಂಭ್ರಮಿಸಿದರು.
ಪ್ರೊ.ಸಂಗಮೇಶ ಹಿರೇಮಠ ಸ್ವಾಗತಿಸಿದರು. ಪ್ರೊ.ರವಿಕುಮಾರ ಅರಳಿ ವಂದಿಸಿದರು. ಕು.ಕಾಜೊಲ್ ನಿತಿನ್ ಪ್ರಾರ್ಥಿಸಿದರು. ಡಾ. ರಮೇಶ ಕತ್ತಿ ನಿರೂಪಿಸಿದರು.