ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಬಸವನಬಾಗೇವಾಡಿ, ನಿಡಗುಂದಿ, ಕೊಲ್ಹಾರ ಮೂರು ತಾಲೂಕಿನ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಿಗೆ, ಕಾರ್ಯದರ್ಶಿಗಳಿಗೆ, ಸಿಬ್ಬಂದಿಗಳಿಗೆ ಸೋಮವಾರ ಇ-ತಂತ್ರಾಂಶ ಕುರಿತು ತರಬೇತಿ ಕಾರ್ಯಾಗಾರ ಜರುಗಿತು.
ಜಿಲ್ಲಾಧಿಕಾರಿಗಳ ಕಾರ್ಯಾಲಯದ ಜಿಲ್ಲಾ ಇ-ಆಫೀಸ್ ಸಮಾಲೋಚಕ, ಸಂಪನ್ಮೂಲ ವ್ಯಕ್ತಿ ಪ್ರಕಾಶ ಕನ್ನೂರ ಅವರು, ಗ್ರಾಮ ಪಂಚಾಯಿತಿ ಆಡಳಿತದಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇ-ತಂತ್ರಾಂಶ ಬಹುಪಯೋಗವಾಗುತ್ತದೆ. ಇ-ಆಫೀಶ್ ತಂತ್ರಾಂಶ ಬಳಕೆಯ ಕುರಿತು ಡೆಮೋ ಮಾಡುವ ಮೂಲಕ ಎಲ್ಲ ಸಿಬ್ಬಂದಿಗಳಿಗೆ ಮಾಹಿತಿಯನ್ನು ನೀಡಿದರು.
ನಂತರ ಬಸವನಬಾಗೇವಾಡಿಯ ಇಓ ಪ್ರಕಾಶ ದೇಸಾಯಿ, ಕೊಲ್ಹಾರ ಇಓ ಸುನೀಲ ಮದ್ದಿನ ಅವರು, ನರೇಗಾ ಯೋಜನೆಯಲ್ಲಿ ಮಾನವ ದಿನಗಳ ಸೃಜನೆ, ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸುವಿಕೆ, ದುಡಿಯೋಣ ಬಾ ಅಭಿಯಾನ, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ ೨೫ ಬದು ನಿರ್ಮಾಣ ಹಾಗೂ ೧೦ ಕೃಷಿ ಹೊಂಡ ಕಾಮಗಾರಿ ಆರಂಭಿಸಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ ೨೦೦ ಲೇಬರ್ ಎಂಗೇಜ್ ಅನ್ನು ಮಾಡಬೇಕೆಂದು ಪಿಡಿಓಗಳಿಗೆ ಸೂಚಿಸಿದರು.
೨೦೨೪-೨೫ ನೇ ಸಾಲಿನ ವಸತಿ ರಹಿತ ಮತ್ತು ನಿವೇಶ ರಹಿತ ಕುಟುಂಬಗಳಿಗೆ ವಸತಿ ಸರ್ವೆ ಕಾರ್ಯ ಆರಂಭವಾಗಿದೆ. ಈ ಸರ್ವೆ ಕಾರ್ಯವನ್ನು ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ಹಮ್ಮಿಕೊಂಡು ಗ್ರಾಮೀಣ ಪ್ರದೇಶದ ಜನರಿಗೆ ವಸತಿ ಯೋಜನೆಯ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನಿ ಮಾಡಬೇಕು. ೨೦೨೪-೨೫ ನೇ ಸಾಲಿನ ಪ್ರಧಾನ ಮಂತ್ರಿ ಅವಾಸ ಯೋಜನೆ ಗುರಿ ನಿಗದಿ ಪಡಿಸಬೇಕು. ಈ ಯೋಜನೆಯಡಿ ಅರ್ಹ ಫಲಾನುಭವಿಗಳ ಅನುಮೋದನೆ ಪಡೆದುಕೊಳ್ಳಲು ಸೂಚಿಸಿದರು.
ಸ್ವಚ್ಛ ಭಾರತ ಯೋಜನೆಯ ವೈಯಕ್ತಿಕ ಶೌಚಾಲಯಗಳ ಜಿಯೋಟ್ಯಾಗ್ ಮಾಡಲು ಮತ್ತು ಕೆ೨ ಅಡಿಯಲ್ಲಿ ಪ್ರೋತ್ಸಾಹ ಧನವನ್ನು ಪಾವತಿಸಲು ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಲಾಯಿತು.
ತರಬೇತಿ ಕಾರ್ಯಾಗಾರದಲ್ಲಿ ತಾಲೂಕು ಪಂಚಾಯಿತಿಯ ಎಲ್ಲ ಯೋಜನೆಯ ವಿಷಯ ನಿರ್ವಾಹಕರು, ತಾಲೂಕು ಪಂಚಾಯಿತಿ ಎಲ್ಲ ಸಿಬ್ಬಂದಿಗಳು, ಬಸವನಬಾಗೇವಾಡಿ, ನಿಡಗುಂದಿ, ಕೊಲ್ಹಾರ ತಾಲೂಕನ ಎಲ್ಲ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಗಣಕಯಂತ್ರ ನಿರ್ವಾಹಕರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಭಾಗವಹಿಸಿದ್ದರು.