ವಿಜಯಪುರ ಜಿಪಂ ಸಿಇಓ ರಿಷಿ ಆನಂದ ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಮುದಾಯ ಕಾಮಗಾರಿಗಳನ್ನು ಆರಂಭಿಸಿ, ಹೆಚ್ಚಿನ ಜನರಿಗೆ ಉದ್ಯೋಗ ಒದಗಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾದಿಕಾರಿ ರಿಷಿ ಆನಂದ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಿಕೋಟಾ ತಾಲೂಕಿನ ತಾಜಪುರ.ಹೆಚ್ ಗ್ರಾಮ ಪಂಚಾಯತಿಗೆ ಹಾಗೂ ತಿಕೋಟಾ ತಾಲೂಕು ಪಂಚಾಯತಿ ಕಾರ್ಯಾಲಯಕ್ಕೆದಿಢೀರ್ ಭೇಟಿ ನೀಡಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಮುದಾಯ ಆಧಾರಿತ ಕಾಮಗಾರಿಗಳನ್ನು ಹೆಚ್ಚಾಗಿ ಆರಂಭಿಸಿ ಬೇಸಿಗೆ ಅವಧಿಯಲ್ಲಿ ಕಡ್ಡಾಯವಾಗಿ ಕೂಲಿಕಾರರಿಗೆ ನಿರಂತರ ಕೆಲಸ ಒದಗಿಸಬೇಕು, ಪ್ರಸ್ತುತ ಚಾಲನೆಯಲ್ಲಿರುವ “ದುಡಿಯೋಣ ಬಾ” ಅಭಿಯಾನದ ಮೂಲಕ ಯೋಜನೆಯ ಕುರಿತು ಹೆಚ್ಚು ಪ್ರಚುರಗೊಳಿಸಿ, ಪ್ರಸ್ತುತ ಸಾಲಿನಲ್ಲಿ ನರೇಗಾ ಕೂಲಿ ದರ ರೂ.೩೭೦/- ಇದ್ದು, ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಕೆಲಸದ ಪ್ರಮಾಣದಲ್ಲಿ ಶೇ.೫೦.೦೦ರಷ್ಟು ರಿಯಾಯಿತಿ ಇದೆ. ಈ ಎಲ್ಲ ಅಂಶಗಳ ಕುರಿತು ಜಾಗೃತಿ ಮೂಡಿಸುವಂತೆ ಅವರು ಸೂಚನೆ ನೀಡಿದರು.
ಅಭಿಯಾನದಡಿ ಕೆಲಸಕ್ಕೆ ಬೇಡಿಕೆ ಸಲ್ಲಿಸಿದ ಪ್ರತಿಯೊಬ್ಬ ಕೂಲಿಕಾರರಿಗೂ ಉದ್ಯೋಗ ನೀಡಬೇಕು. ಮುಖ್ಯವಾಗಿ ಮಹಿಳೆಯರಿಗೆ ಹಾಗೂ ವಿಶೇಷ ಚೇತನರಿಗೆ ಆದ್ಯತೆ ನೀಡಬೇಕು. ವಿಶೇಷವಾಗಿ ವೈಯಕ್ತಿಕ ಕಾಮಗಾರಿಗಳಾದ ಬೋರ್ ವೆಲ್ ಮರುಪೂರಣ ಘಟಕ, ಕೃಷಿ ಹೊಂಡ, ಬದು ನಿರ್ಮಾಣ, ದನ/ಆಡು/ಕುರಿ ಶೆಡ್, ಇಂಗು ಗುಂಡಿಗಳಂತಹ ಕಾಮಗಾರಿಗಳನ್ನು ಆರಂಭಿಸಿ ಕೂಲಿಕಾರರಿಗೆ ಉದ್ಯೋಗ ಒದಗಿಸಬೇಕು. ಸಮುದಾಯ ಕಾಮಗಾರಿಗಳಾದ ಕೆರೆ/ನಾಲಾ ಹೂಳು ತೆಗೆಯುವುದು, ಸರ್ಕಾರಿ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಘಟಕ, ರಸ್ತೆ ಬದಿ ನೆಡುತೋಪು, ಕಾಮಗಾರಿಗಳನ್ನೂ ಸಹ ಅನುಷ್ಟಾನಗೊಳಿಸುವಂತೆ ಅವರು ಸೂಚನೆ ನೀಡಿದರು.
ತಾಜಪುರ.ಹೆಚ್ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಪಂಚಾಯತಿ ಕಟ್ಟಡವನ್ನು ವೀಕ್ಷಣೆ ಮಾಡಿ, ಕಾರ್ಯಾಲಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಸೂಚಿಸಿದರು.
ಸ್ವಚ್ಛ ಭಾರತ ಮಿಷಿನ ಯೋಜನೆಯಡಿ ಶೌಚಾಲಯ ನಿರ್ಮಿಸಲು ಬಾಕಿ ಇರುವ ಎಲ್ಲ ಕುಟುಂಬಗಳ ಮುಖ್ಯಸ್ಥರ ಮನವೊಲಿಸಿ ತುರ್ತಾಗಿ ಶೇ. ೧೦೦ರಷ್ಟು ಪ್ರಗತಿ ಸಾಧಿಸಬೇಕು, ಜೊತೆಗೆ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಸಮೀಕ್ಷಾ ಪ್ರಗತಿಯನ್ನು ತುರ್ತಾಗಿ ಶೇ.೧೦೦ರಷ್ಟು ಪ್ರಗತಿ ಸಾಧಿಸಬೇಕು, ಯಾವದೇ ಕಾರಣಕ್ಕೂ ಅರ್ಹ ಫಲಾನುಭವಿಗಳು ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರ ವಹಿಸಬೇಕು. ಕಡ್ಡಾಯವಾಗಿ ಅರ್ಹ ಫಲಾನುಭವಿಗಳ ಆಧಾರ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಪ್ರತಿಗಳನ್ನು ತಂತ್ರಾಂಶದಲ್ಲಿ ಅಳವಡಿಸಬೇಕು ಎಂದರು. ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕುಡಿಯುವ ನೀರಿನ ಸಮರ್ಪಕ ನಿರ್ವಹಣೆ ಮಾಡಬೇಕು. ಜನ-ಜಾನುವಾರುಗಳಿಗೆ ಸಾಕಷ್ಟು ನೀರನ್ನು ಪೂರೈಕೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವಂತರಾಯಗೌಡ ಬಿರಾದಾರ, ಸಹಾಯಕ ಲೆಕ್ಕಾಧಿಕಾರಿಗಳಾದ ಅನ್ವರಹುಸೇನ ನಧಾಪ, ತಾಲೂಕು ಯೋಜನಾಧಿಕಾರಿಗಳಾದ ಆಯೇಶಾ ಸಾಲೋಟಗಿ, ತಾಜಪುರ.ಹೆಚ್ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಉಮೇಶ ಕನಮಡಿ, ಕಾರ್ಯದರ್ಶಿಗಳಾದ ಚಂದ್ರಶೇಖರ ಬಿದರಿ, ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಯ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
ತಿಕೋಟಾ ತಾಲೂಕು ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ
ಬಳಿಕ ತಿಕೋಟಾ ತಾ.ಪಂ. ಕಾರ್ಯಾಲಯಕ್ಕೆ ಭೇಟಿ ನೀಡಿದ ಸಿಇಓರವರು ತಾಲೂಕು ಪಂಚಾಯತಿಯ ಎಲ್ಲ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಇ-ಹಾಜರಾತಿಯನ್ನು ಪರಿಶೀಲನೆ ನಡೆಸಿದರು. ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಇ-ಹಾಜರಾತಿ ಮೂಲಕ ಹಾಜರಾತಿ ಸಲ್ಲಿಸಬೇಕು. ಸದರಿ ಹಾಜರಾತಿ ಆಧಾರದ ಮೇಲೆ ವೇತನ ಪಾವತಿಸಲಾಗುವುದು ಎಂದರು. ನಂತರ ತಾಲೂಕು ಪಂಚಾಯತಿಯ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಸಮಸ್ಯೆಗಳನ್ನು ಆಲಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಹಲವು ಯೋಜನೆಗಳು ಜಾರಿಯಲ್ಲಿದ್ದು, ಸದರಿ ಯೋಜನೆಗಳನ್ನು ಗ್ರಾಮೀಣ ಜನರಿಗೆ ಸಕಾಲದಲ್ಲಿ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಹಾತ್ಮ ಗಾಂಧಿ ನರೇಗಾ ಯೋಜನೆ, ಸ್ವಚ್ಛ ಭಾರತ ಮಿಷನ್(ಗ್ರಾಮೀಣ), ಗ್ರಾಮೀಣ ವಸತಿ ಯೋಜನೆ, ತೆರಿಗೆ ಸಂಗ್ರಹಣೆ, ಸಕಾಲ ಅರ್ಜಿಗಳ ವಿಲೇವಾರಿ, ಗ್ರಂಥಾಲಯಗಳ ಅಭಿವೃದ್ಧಿ, ಅಂಗನವಾಡಿಗಳ ಅಭಿವೃದ್ಧಿ, ಮೂಲಭೂತ ಸೌಕರ್ಯಗಳ ಪೂರೈಕೆ ಹೀಗೆ ಹತ್ತು ಹಲವಾರು ಯೋಜನೆಗಳ ಪ್ರಗತಿ ಸಾಧಿಸಲು ನಿರಂತರ ಶ್ರಮವಹಿಸಬೇಕು.
ತಿಕೋಟಾ ತಾಲೂಕು ಪಂಚಾಯತಿಯಲ್ಲಿ ತಾಲೂಕಿನ ಎಲ್ಲ ಪಂಚಾಯತಿ ಅಭೀವೃದ್ಧಿ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಸಮೀಕ್ಷಾ ಪ್ರಗತಿಯನ್ನು ತುರ್ತಾಗಿ ಶೇ.೧೦೦ರಷ್ಟು ಪ್ರಗತಿ ಸಾಧಿಸಬೇಕು, ಯಾವದೇ ಕಾರಣಕ್ಕೂ ಅರ್ಹ ಫಲಾನುಭವಿಗಳು ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರ ವಹಿಸಬೇಕು. ಕಡ್ಡಾಯವಾಗಿ ಅರ್ಹ ಫಲಾನುಭವಿಗಳ ಆಧಾರ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಪ್ರತಿಗಳನ್ನು ತಂತ್ರಾಂಶದಲ್ಲಿ ಅಳವಡಿಸಬೇಕು ವಸತಿ ಯೋಜನೆಯ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬರುವ ಶನಿವಾರದೊಳಗಾಗಿ ಅರ್ಹ ಫಲಾನುಭವಿಗಳ ಆಯ್ಕೆ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು. ಸದರಿ ಕಾರ್ಯವನ್ನು ಆದ್ಯತೆಯಾಗಿ ಪರಿಗಣಿಸಿ ಪ್ರಗತಿ ಸಾಧಿಸಲು ಎಲ್ಲ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪ್ರಸ್ತುತ ಆರಂಭಿಸಲಾಗಿರುವ “ಸ್ವಚ್ಛ ಅಂಗನವಾಡಿ-ಬಾಲ ಸ್ನೇಹಿ ಅಂಗನವಾಡಿ” ಅಭಿಯಾನವನ್ನು ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಬೇಕು. ಪ್ರತಿವಾರ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂರು ಅಂಗನವಾಡಿಗಳನ್ನು ಸಂಪೂರ್ಣ ಸ್ವಚ್ಛಗೊಳಿಸಬೇಕು. ಹಾಗೂ ಗ್ರಂಥಾಲಯಗಳ ಆವರಣಗಳನ್ನೂ ಸಹ ನಿರತಂರವಾಗಿ ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು. ಪ್ರತಿ ನಿತ್ಯ ತಾಲೂಕು ಮಟ್ಟದ ಅಧಿಕಾರಿಗಳು ಕ್ಷೇತ್ರ ಭೇಟಿ ನೀಡಿ “ಸ್ವಚ್ಛ ಅಂಗನವಾಡಿ-ಬಾಲ ಸ್ನೇಹಿ ಅಂಗನವಾಡಿ” ಅಭಿಯಾನದ ಕುರಿತು ಪರಿಶೀಲನೆ ಮಾಡಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.