ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದ ೭ ಜನರ ಮೇಲೆ ಇಲ್ಲಿನ ಪಿಎಸ್‌ಐ ಸಂಜಯ ತಿಪರೆಡ್ಡಿ ಪ್ರಕರಣ ದಾಖಲಿಸಿದ್ದಾರೆ.
ತಾಲೂಕಿನ ಅಮರಗೋಳ ಗ್ರಾಮದ ಕೃಷ್ಣಾ ನದಿಯಲ್ಲಿನ ಕಪ್ಪು ಮಣ್ಣನ್ನು ಯಾವುದೇ ಅನುಮತಿ ಅಥವಾ ರಾಯಲ್ಟಿ ಇಲ್ಲದೇ ಕಳುವಿನಿಂದ ಅಕ್ರಮವಾಗಿ ತುಂಬುತ್ತಿರುವಾಗ ಸಿಕ್ಕಿದ್ದು ತಾಲೂಕಿನ ಢವಳಗಿ ಗ್ರಾಮದ ರಮೇಶ ಬೀರಗೊಂಡ, ಅರಸನಾಳ ಗ್ರಾಮದ ಮಹೇಶ ಮೂಲಿಮನಿ ಮತ್ತು ಮಲ್ಲೇಶ ಕೇಸಾಪೂರ, ಬಾಗಲಕೋಟೆಯ ಇಳಕಲ್ಲ ತಾಲೂಕಿನ ಶಿವನಗುತ್ತಿ ಗ್ರಾಮದ ಮಹಾಂತೇಶ ಮೆಣಸಗೇರಿ, ಮರಟಗೇರಿ ಗ್ರಾಮದ ರೇಣುಕಾ ಯರಜೇರಿ ಮತ್ತು ಹಣಮಂತ ಯರಜೇರಿ, ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕಕ್ಕೇರಾ ಗ್ರಾಮದ ಮಾಳಿಂಗರಾಯ ಐದುಬಾವಿ ಇವರ ಮೇಲೆ ಪ್ರಕರಣ ದಾಖಲಾಗಿದ್ದು ೧ ಹಿಟಾಚಿ, ೩ಟಿಪ್ಪರ್ ಗಳನ್ನು ಯಶಕ್ಕೆ ಪಡೆಯಲಾಗಿದೆ.
ದೂರು ನೀಡಿದ್ದರೂ ಕ್ರಮವಿಲ್ಲ
ಅಕ್ರಮ ಮಣ್ಣು ಸಾಗಾಣಿಕೆ ತಡೆಯುವಂತೆ ಒತ್ತಾಯಿಸಿ ಇಲ್ಲಿನ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಮಾ೧೮ ರಂದು ಯುವಜನ ಸೇನೆಯ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಮತ್ತು ಹೋರಾಟಗಾರ ಸಂಗಯ್ಯ ಸಾರಂಗಮಠ ತಮ್ಮ ಬೆಂಬಲಿಗರೊಂದಿಗೆ ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಿದ್ದರು. ಅಕ್ರಮ ಮಣ್ಣು ಸಾಗಾಣಿಕೆ ತಡೆಯುವಂತೆ ಒತ್ತಾಯಿಸಿ ಮೊದಲೇ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳ ಮೇಲೆ ಕ್ರಮಕ್ಕಾಗಿ ಒತ್ತಾಯಿಸಿದ್ದರು.

