S* ಅರ್ಹ ಮತದಾರರ ಹೆಸರು ಕೈಬಿಡದಂತೆ ಎಚ್ಚರ ವಹಿಸಲು ಕರೆ | ಶಾಸಕ ವಿಠ್ಠಲ ಕಟಕಧೋಂಡ ಆರೋಪ B*
ಉದಯರಶ್ಮಿ ದಿನಪತ್ರಿಕೆ
ಚಡಚಣ: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ನೆಪದಲ್ಲಿ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವ ಮೂಲಕ ಬಿಜೆಪಿ ಸರ್ಕಾರ ಉದ್ದೇಶಪೂರ್ವಕವಾಗಿ ರಾಜಕೀಯ ಕುತಂತ್ರ ನಡೆಸುತ್ತಿದೆ. ಪ್ರಜಾಪ್ರಭುತ್ವದ ಮೂಲ ಹಕ್ಕಾದ ಮತದಾನದ ಹಕ್ಕನ್ನು ಯಾರೂ ಕಸಿದುಕೊಳ್ಳದಂತೆ ಕಾಂಗ್ರೆಸ್ ಕಾರ್ಯಕರ್ತರು ಜಾಗರೂಕರಾಗಿ ಕಾರ್ಯನಿರ್ವಹಿಸಬೇಕು ಎಂದು ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕಧೋಂಡ ಕರೆ ನೀಡಿದರು.
ಪಟ್ಟಣದ ಅಂಜುಮನ್ ಇಸ್ಲಾಂ ಕಮಿಟಿಯ ಶಾದಿ ಮಹಲ್‌ನಲ್ಲಿ ಸೋಮವಾರ ನಡೆದ ನಾಗಠಾಣ ಮತಕ್ಷೇತ್ರದ ಚಡಚಣ ಬ್ಲಾಕ್ ಕಾಂಗ್ರೆಸ್ ಬಿಎಲ್‌ಎ ಗಳ (ಬೂತ್ ಲೆವೆಲ್ ಏಜೆಂಟ್) ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕು ನೀಡಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿರುವ ಸಂದರ್ಭದಲ್ಲಿ ಕರ್ನಾಟಕದ ಮೇಲೆ ಬಿಜೆಪಿ ವಿಶೇಷ ಗಮನ ಹರಿಸಿದೆ. ಅರ್ಹ ಮತದಾರರ ಹೆಸರುಗಳು ಯಾವುದೇ ಕಾರಣಕ್ಕೂ ಪಟ್ಟಿಯಿಂದ ಕೈಬಿಡದಂತೆ ಬಿಎಲ್‌ಎ ಗಳು ಮನೆಮನೆಗೆ ತೆರಳಿ ಪರಿಶೀಲನೆ ನಡೆಸಬೇಕು. ರಾಜಕೀಯ ದುರುದ್ದೇಶದಿಂದ ಮುಗ್ಧ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗದಂತೆ ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು” ಎಂದು ಅವರು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ಬಿಜೆಪಿ ಸರ್ಕಾರ ತನ್ನ ರಾಜಕೀಯ ಕುತಂತ್ರವನ್ನು ಮುಂದುವರಿಸಿದೆ. ಕಾಂಗ್ರೆಸ್ ಪಕ್ಷವನ್ನು ಸಂಘಟನಾತ್ಮಕವಾಗಿ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರಾಜ್ಯಾದ್ಯಂತ ಇಂತಹ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶಗೌಡ ಪಾಟೀಲ ಮಾತನಾಡಿ, ಶಿಕ್ಷಣ ಇಲಾಖೆಯ ವತಿಯಿಂದ ನೇಮಕಗೊಂಡಿರುವ ಬಿಎಲ್‌ಓ ಗಳೊಂದಿಗೆ ಕಾಂಗ್ರೆಸ್ ಬಿಎಲ್‌ಎ ಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಮುಖಂಡ ಡಿ. ಎಲ್. ಚವ್ಹಾಣ ಮಾತನಾಡಿ, ಎಲ್ಲ ರಾಜಕೀಯ ಪಕ್ಷಗಳ ಬಿಎಲ್‌ಎಗಳು ಮತ್ತು ಸರ್ಕಾರದ ಅಧಿಕಾರಿಗಳು ಪರಸ್ಪರ ಸಹಕಾರದಿಂದ ಪಾರದರ್ಶಕ ಮತದಾರರ ಪಟ್ಟಿ ಪರಿಷ್ಕರಣೆಗೆ ಶ್ರಮಿಸಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್. ಡಿ. ಹಕ್ಕಿ ಮಾತನಾಡಿ, ಸರ್ಕಾರದ ಪರವಾಗಿ ಕಾರ್ಯನಿರ್ವಹಿಸುವ ಬಿಎಲ್‌ಒಗಳ ಕೆಲಸದಲ್ಲಿ ಯಾವುದೇ ಲೋಪದೋಷಗಳಾಗದಂತೆ ಪಕ್ಷದ ಕಾರ್ಯಕರ್ತರು ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಇಲಾಯಿ ನದಾಫ್, ಸುರೇಶ ಗೊಣಸಗಿ, ಸೋಮು ಕತ್ನಾಳಿ, ಸಂತೋಷ ಪಾಟೀಲ, ಸಾಹೇಬಗೌಡ ಬಿರಾದಾರ, ಕುತ್ಬುದ್ದಿನ್ ಪಟೇಲ್, ಮುರ್ತುಜಾ ನದಾಫ್, ದೇವಪ್ಪಗೌಡ ಪಾಟೀಲ, ದಯಾನಂದ ಪಾಟೀಲ, ದಶರಥ ಬನಸೋಡೆ, ಮಹಾದೇವ ಬನಸೋಡೆ, ಕಾಮೇಶ ಪಾಟೀಲ, ಶಿವಾಜಿ ವಾಲಿಕಾರ, ರವಿ ಬಿರಾದಾರ, ದಾನಮ್ಮ ಪಾಟೀಲ, ನಾಗೇಶ ಗಾಯಕವಾಡ, ಸಿದ್ದಲಿಂಗ ಬನಸೋಡೆ ಸೇರಿದಂತೆ ಬ್ಲಾಕ್ ಕಾಂಗ್ರೆಸ್‌ನ ಹಿರಿಯ ಮುಖಂಡರು, ಬಿಎಲ್‌ಎ ಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

