ಉದಯರಶ್ಮಿ ದಿನಪತ್ರಿಕೆ
ಇಂಡಿ: ಪಟ್ಟಣದ ಸದಾಶಿವನಗರದಲ್ಲಿ ಮುಂಬರುವ ಒಂದು ವರ್ಷದಲ್ಲಿಯೇ ಸರ್ವ ಧರ್ಮಗಳ ಬಡ ಮಕ್ಕಳಿಗಾಗಿ ಉಚಿತ ಪ್ರಸಾದ ನಿಲಯ ತಲೆ ಎತ್ತಲಿದೆ ಎಂದು ಇಂಡಿ ತಾಲೂಕಿನ ಶಿರಶ್ಯಾಡ ಗ್ರಾಮದ ಮುರುಘೇಂದ್ರ ಶ್ರೀಗಳು ಭರವಸೆ ನೀಡಿದರು.
ಮಂಗಳವಾರ ಸಾಯಂಕಾಲ ೯೦೦ ವರ್ಷಗಳ ಹಿಂದಿನ ಶಿರಶ್ಯಾಡ ಗ್ರಾಮದ ಲಿಂ, ಮುರುಘೇಂದ್ರ ಶ್ರೀಗಳ ಭಾವಚಿತ್ರದ ಮೆರವಣಿಗೆ ಹಾಗೂ ಉಚಿತ ಪ್ರಸಾದ ನಿಲಯ ಕಟ್ಟಡದ ಭೂಮಿ ಪೂಜೆ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ, ತುಲಾಭಾರ ಸ್ವೀಕರಿಸಿ ಅವರು ಮಾತನಾಡಿದರು.
ಪಟ್ಟಣದ ಸದಾಶಿವನಗರದಲ್ಲಿ ೯ ವರ್ಷಗಳÀ ಹಿಂದೆ ಇಂಡಿ ಪುರಸಭೆ ೧೦೦*೧೦೦ ಅಡಿ ಅಳತೆಯ ಜಾಗ ಉಚಿತ ಪ್ರಸಾದ ನಿಲಯದ ಕಟ್ಟಡಕ್ಕಾಗಿಯೇ ಮಂಜೂರಿ ಮಾಡಿದೆ. ಇದೀಗ ಸರಕಾರ ಈ ಕಟ್ಟಡಕ್ಕೆ ೫೦ ಲಕ್ಷ ಅನುದಾನ ನೀಡಿದೆ. ಅದನ್ನು ಬಳಸಿಕೊಂಡು ಒಟ್ಟು ಸುಮಾರು ೪ ಕೋಟಿ ರೂ, ಗಳ ವೆಚ್ಚದಲ್ಲಿ ಸುಂದರವಾದ ಮತ್ತು ಎಲ್ಲಾ ವ್ಯವಸ್ಥೆಗಳೊಂದಿಗೆ ಸರ್ವಧರ್ಮಗಳ ಬಡ ೧೦೦ ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ಪ್ರಸಾದದ ವ್ಯವಸ್ಥೆ ಮಾಡಲಾಗುವದು ಎಂದು ತಿಳಿಸಿದರು.
ಈ ಕಟ್ಟಡಕ್ಕೆ ಇಂಡಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಭಕ್ತರು ತನು, ಮನ, ಧನಗಳ ಸಹಾಯ ಸಹಕಾರ ನೀಡುವದಾಗಿ ಭರವಸೆ ನೀಡಿದ್ದಾರೆ. ಈಗಾಗಲೇ ಈ ಪ್ರಸಾದ ನಿಲಯಕ್ಕೆ ಅಗತ್ಯವಿರುವ ಸಿಮೆಂಟ, ಖಡಿ, ಸ್ಟೀಲ್ ಅಲ್ಲದೇ ಹಣಕಾಸಿನ ನೆರವು ನೀಡುವದಾಗಿ ಭಕ್ತರು ಭರವಸೆ ನೀಡಿದ್ದಾರೆ. ಭಕ್ತರ ನೆರವಿನಿಂದ ಬರುವ ಒಂದು ವರ್ಷದಲ್ಲಿಯೇ ಬಡ ಮಕ್ಕಳಿಗಾಗಿ ಉಚಿತ ಪ್ರದಾದ ನಿಲಯ ತಲೆ ಎತ್ತಲಿದೆ. ಕಳೆದ ೯ ವರ್ಷಗಳಿಂದ ನಾನು ಕಂಡ ಕನಸು ಇನ್ನೊಂದು ವರ್ಷದಲ್ಲಿ ನನಸಾಗುವದು ಎಂದರು.
ಈ ಕಾರ್ಯಕ್ಕೆ ಸಹಕಾರ ನೀಡಿದ ಎಲ್ಲರನ್ನೂ ಸ್ಮರಿಸಿದರು.
ಈ ಸಂದರ್ಭದಲ್ಲಿ ಜೈನಾಪೂರದ ರೇಣುಕಾ ಶಿವಾಚಾರ್ಯರು, ಅಥಣಿಯ ಶಿವಬಸವ ಶ್ರೀಗಳು, ಅಭಿನವ ಪುಂಡಲಿAಗ ಶ್ರೀಗಳು, ರೋಡಗಿ ಶ್ರೀಗಳು, ದೇವರಹಿಪ್ಪರಗಿ ಶ್ರೀಗಳು ಮಾತನಾಡಿ, ಬಡ ಮಕ್ಕಳಿಗಾಗಿ ನಿರ್ಮಿಸುಸುತ್ತಿರುವ ಉಚಿತ ಪ್ರಸಾದ ನಿಲಯಕ್ಕೆ ಎಲ್ಲಾ ನೆರವು ನೀಡುವದಾಗಿ ಭರವಸೆ ನೀಡಿದರು. ಅಥಣಿ ಶ್ರೀಗಳು ೨.೫ ಲಕ್ಷ ದೇಣಿಗೆ ನೀಡುವದಾಗಿ ಪ್ರಕಟಿಸಿದರು. ಪಟ್ಟಣದ ಹಿರಿಯರಾದ ಜೆಟ್ಟೆಪ್ಪ ರವಳಿ, ಬಿಜೆಪಿ ಮುಖಂಡ ಕಾಸೂಗೌಡ ಬಿರಾದಾರ, ಪುರಸಭೆಯ ಅಧ್ಯಕ್ಷ ಲಿಂಬಾಜಿ ರಾಠೋಡ, ಶರಣಪ್ಪ ಮಾನೇಗಾರ, ವಿರಾಜ ಪಾಟೀಲ ಮಾತನಾಡಿ, ಉಚಿತ ಪ್ರಸಾದ ನಿಲಯದ ಕಟ್ಟಡಕ್ಕೆ ತನು, ಮನ, ಧನದ ಸಹಕಾರ ನೀಡುವದಾಗಿ ಭರವಸೆ ನೀಡಿದರು. ಜಗದೀಶ ಕ್ಷತ್ರಿ ಹಾಗೂ ಧಾನಮ್ಮ ಹಿರೇಮಠ ಅವರು ತಲಾ ಒಬ್ಬೊಬ್ಬ ವಿದ್ಯಾರ್ಥಿಯನ್ನು ದತ್ತು ತೆಗೆದುಕೊಂಡು ನಿರಂತರವಾಗಿ ಪ್ರತೀ ವರ್ಷ ಆ ವಿದ್ಯಾರ್ಥಿಗಳಿಗೆ ತಗಲುವ ಊಟದ ವ್ಯವಸ್ಥೆ ಮಾಡುವದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕೆಲವು ಗ್ರಾಮಗಳ ಭಕ್ತರು ಮುರುಘೇಂದ್ರ ಶ್ರೀಗಳಿಗೆ ತುಲಾಭಾರ ನೆರವೇರಿಸಿದರು. ಕೆಲವು ಗ್ರಾಮಗಳ ಭಕ್ತರು ರುದ್ರಾಕ್ಷಿ ತುಲಾಭಾರ ನೆರವೇರಿಸಿದರು.
ಕಸಾಪ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿ, ಶಿರಶ್ಯಾಡ ಗ್ರಾಮದ ಮುರುಘೇಂದ್ರ ಶ್ರೀಗಳ ಮಠದ ಅಡಿಯಲ್ಲಿ ೫ ಮಠಗಳು ಬರುತ್ತವೆ. ಈ ಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಗಂಗಾಧರೇಶ್ವರ ಶ್ರೀಗಳು ಮತ್ತು ಮುರುಘೇಂದ್ರ ಶ್ರೀಗಳು ಹಲವಾರ ಪವಾಡಗಳನ್ನು ಮಾಡಿ ಜನ ಮೆಚ್ಚುಗೆ ಗಳಿಸಿದ್ದರು ಎಂದರು.
ವೇದಿಕೆಯಲ್ಲಿ ಚಂದ್ರಶೇಖರ ಇಂಡಿ, ಶಂಕರಗೌಡ ಪಾಟೀಲ, ಜಗದೀಶ ಕ್ಷತ್ರಿ, ಬಸವರಾಜ ಕಣ್ಣಿ, ಶ್ರೀಮಂತ ಇಂಡಿ, ಅಜೀತ ಧನಶೆಟ್ಟಿ, ಚಂದ್ರಶೇಖರ ದೇವರ, ಜಾವೀದ ಮೋಮಿನ್, ದೇವೇಂದ್ರ ಕುಂಬಾರ, ಪ್ರಶಾಂತ ಕಾಳೆ, ನೀಲಕಂಠಗೌಡ ಪಾಟೀಲ, ಪ್ರಭು ಹೊಸಮನಿ, ಅನೀಲಗೌಡ ಬಿರಾದಾರ, ಬಾಳು ಮುಳಜಿ, ಅನೀಲಪ್ರಸಾದ ಏಳಗಿ, ಆರ್.ವಿ.ಪಾಟೀಲ, ರಾಮಸಿಂಗ್ ಕನ್ನೊಳ್ಳಿ, ಅನಂತ ಜೈನ್, ವಿರಾಜ ಪಾಟೀಲ, ವಿಶಾಲ ಸಿಂದಗಿ ಇದ್ದರು.
ಧನರಾಜ ಮುಜಗೊಂಡ ನಿರೂಪಿಸಿದರು. ವಾಯ್.ಜಿ.ಬಿರಾದಾರ ಸ್ವಾಗತಿಸಿ, ವಂದಿಸಿದರು.

