ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೇವಲ ಮುಸ್ಲಿಂರ ಬಗ್ಗೆ ತೆಗಳುವುದನ್ನೇ ಕೆಲಸ ಮಾಡಿಕೊಂಡಿರುವ ವಿಜಯಪುರ ನಗರ ಶಾಸಕರು ಒಂದು ದಿನವಾದರೂ ಮದರಸಾ ಹೋಗಿ ಅಲ್ಲಿನ ವ್ಯವಸ್ಥೆಯನ್ನು ನೋಡಿದ್ದಾರೆಯೇ? ಅವರು ಒಂದು ರೀತಿ ಅನಕ್ಷರಸ್ಥರಂತೆ ವರ್ತನೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಕೀಲ್ ಬಾಗಮಾರೆ ದೂರಿದ್ದಾರೆ.
ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮದರಸಾದಲ್ಲಿ ಧಾರ್ಮಿಕ ಶಿಕ್ಷಣ, ವಿಜ್ಞಾನ ಎಲ್ಲವನ್ನೂ ಬೋಧಿಸಲಾಗುತ್ತಿದೆ, ಅಲ್ಲಿ ಹೋಗಿ ವ್ಯವಸ್ಥೆಯನ್ನು ಕಣ್ಣಾರೆ ಕಾಣಲಿ, ಅವರ ಒಬ್ಬ ಕಾರ್ಯಕರ್ತನಾದರೂ ಮದರಸಾಗಳಿಗೆ ಭೇಟಿ ನೀಡುವ ಕಾರ್ಯ ಮಾಡಿದ್ದಾರೆಯೇ? ಎಂದು ಶಕೀಲ್ ಪ್ರಶ್ನಿಸಿದ್ದಾರೆ.
ಕೇವಲ ಹಿಂದೂ-ಮುಸ್ಲಿಂ ಜಗಳ ಹಚ್ಚುವುದು ಅವರ ಕಾಯಕವಾಗಬಿಟ್ಟಿದೆ. ಹಿಂದೂ-ಮುಸ್ಲಿಂ ಸಹೋದರರಂತೆ ಬದುಕುತ್ತಿದ್ದಾರೆ, ವಿನಾಕಾರಣ ಸಹೋದರರ ನಡುವೆ ಸಾಸಕ ಯತ್ನಾಳ ವಿಷ ಹಿಂಡುವ ಕಾರ್ಯ ಮಾಡುತ್ತಿದ್ದಾರೆ. ವಿನಾಕಾರಣ ಹಿಂದೂ ಮುಗ್ಧ ಯುವಕರನ್ನು ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ, ಈ ಜಗಳ ಹಚ್ಚಿ ತಮ್ಮ ಕುರ್ಚಿ ಭದ್ರ ಮಾಡಿಕೊಳ್ಳುವುದೇ ಬಿಜೆಪಿ ನಾಯಕರ ಕೆಲಸವಾಗಿದೆ. ವೈಯುಕ್ತಿಕ ಸ್ವಾರ್ಥಕ್ಕಾಗಿ ಹಿಂದೂ ಯುವಕರ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಬಾಗಮಾರೆ ಹೇಳಿದ್ದಾರೆ.
ನಮ್ಮ ಭವ್ಯ ಭಾರತ ಸಹೋದರತೆಯ ನೆಲವೀಡು, ಹಿಂದೂ-ಮುಸ್ಲಿಂರು ಸಹೋದರರು, ಇಲ್ಲಿ ಜಗಳ ಹಚ್ಚುವ ಕೆಲಸವನ್ನು ಬಿಜೆಪಿ ನಾಯಕರು ಇಲ್ಲಿಗೆ ತಿಲಾಂಜಲಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

