ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಕೆಲ ದಿನಗಳ ಹಿಂದೆ ನಾನು ಆಪರೇಷನ್ ಕ್ಲೀನ್ ಹೋಮ್ ಜಾರಿ ಮಾಡಿದೆ. ಸುಮಾರು ಏಳೆಂಟು ತಾಸುಗಳಲ್ಲಿ ನಾನು, ಸೊಸೆ ಮತ್ತು ಕೆಲಸದಾಕೆ ಇಡೀ ಮನೆಯ ಎಲ್ಲ ಕೋಣೆಗಳ ಜೇಡರ ಬಲೆಗಳನ್ನೆಲ್ಲ ತೆಗೆದು, ಧೂಳು ಹೊಡೆದು, ಕಿಟಕಿ ಬಾಗಿಲುಗಳನ್ನೆಲ್ಲ ಒರೆಸಿ, ಬೆಡ್ ಶೀಟ್ಗಳನ್ನು, ಕಿಟಕಿ ಮತ್ತು ಬಾಗಿಲ ಪರದೆಗಳನ್ನು ವಾಷಿಂಗ್ ಮಷೀನ್ ಗೆ ಹಾಕಿ ಮನೆಯ ಕಸ ಗುಡಿಸಿ ನೆಲ ಒರೆಸಿ ಮುಗಿಸಿದೆವು.ತುಸು ಹೆಚ್ಚು ಸಮಯ ತೆಗೆದುಕೊಳ್ಳುವುದು ಕೇವಲ ಅಡುಗೆಮನೆಯ ಸ್ಟೋರ್ ಮಾತ್ರ. ನನ್ನ ಸ್ನೇಹಿತರಿಗೆ ಆಶ್ಚರ್ಯವಾಗುವುದು ತುಸು ದೊಡ್ಡದೇ ಆದ ನಮ್ಮ ಮನೆಯನ್ನು ಅದು ಹೇಗೆ ಒಂದು ದಿನದಲ್ಲಿ ನೀವು ಇಡೀ ಮನೆ ಕ್ಲೀನ್ ಮಾಡುತ್ತೀರಿ ಅಂತ.
ನಿಜ ಅವರು ಹೇಳುವುದು, ಇಷ್ಟೆಲ್ಲಾ ಕೆಲಸಗಳನ್ನು ಒಂದೇ ದಿನದಲ್ಲಿ ಮಾಡಲು ಕಷ್ಟ ಆದರೆ ಅಸಾಧ್ಯವೇನಲ್ಲ. ಮನೆಯಲ್ಲಿ ಅನವಶ್ಯಕ ವಸ್ತುಗಳು ತುಂಬಿದ್ದರೆ ಅವುಗಳನ್ನು ಅಲ್ಲಿ ಇಲ್ಲಿ ಎತ್ತಿಟ್ಟು ಸ್ವಚ್ಛ ಮಾಡುವುದರಲ್ಲಿಯೇ ಬಹಳಷ್ಟು ಸಮಯ ವ್ಯರ್ಥವಾಗುತ್ತದೆ.

ಬಹಳಷ್ಟು ದಿನಗಳ ಕಾಲ ಉಪಯೋಗಿಸದೆ ಇರುವ ವಸ್ತುಗಳು, ಬಟ್ಟೆಗಳು, ಹರಿದ ಉಪಯೋಗಿಸಲು ಬಾರದ ವಸ್ತ್ರಗಳು, ಸೀಳಿದ, ಮುರಿದ, ಬಿರುಕು ಬಿಟ್ಟ ವಸ್ತುಗಳು,ಹಳೆಯ ಪತ್ರಗಳು ಮತ್ತು ಕಾರ್ಡುಗಳು, ಒಣಗಿಹೋಗಿರುವ ಬಳ್ಳಿಗಳು ಮತ್ತು ಸಸಿಗಳು, ರಸೀತಿಗಳು ಮತ್ತು ಹಳೆಯ ಮ್ಯಾಗಜೀನುಗಳು, ಹರಿದ ಶೂಗಳು, ಮುರಿದ ಹಾಳಾದ ಮಕ್ಕಳ ಆಟಿಕೆಗಳು ಇದ್ದರೆ ಅವುಗಳನ್ನು ಯಾವುದೇ ರೀತಿಯ ಭಾವನಾತ್ಮಕತೆ ಇಟ್ಟುಕೊಳ್ಳದೆ ಮನೆಯಿಂದ ಹೊರಹಾಕಿ. ಈ ರೀತಿಯ ಉಪಯೋಗಿಸದೇ ಬಿಸಾಡದೆ ಉಳಿದ ವಸ್ತುಗಳು ಮನೆಯಲ್ಲಿ ಋಣಾತ್ಮಕತೆಯನ್ನು ಬೀರುತ್ತವೆ. ಋಣಾತ್ಮಕತೆ ಇರುವಾಗ ಅಲ್ಲಿ ಧನಾತ್ಮಕತೆಗೆ ಜಾಗ ಇರುವುದಿಲ್ಲ. ಯಾವಾಗಲಾದರೂ ಉಪಯೋಗಕ್ಕೆ ಬರಬಹುದು ಎಂದು ಇಟ್ಟುಕೊಂಡ ಹಳೆಯ ಡಬ್ಬಿಗಳು, ಆಟದ ಸಾಮಾನುಗಳು, ಚಿಕ್ಕ ಪುಟ್ಟ ವಸ್ತುಗಳು ಬೇಕಾದ ಸಮಯಕ್ಕೆ ಕೈಗೆ ಸಿಗುವುದೇ ಇಲ್ಲ. ಆದರೆ ಬಳಸದೆ ಇಡುವ ಇಂತಹ ವಸ್ತುಗಳಿಂದಲೇ ಮನೆಯಲ್ಲಿ ಸ್ಥಳಾವಕಾಶ ಇಲ್ಲದೆ ಹೋಗುವುದು ಒಂದು ಕಾರಣವಾದರೆ, ಅವು ಬೀರುವ ಋಣಾತ್ಮಕ ಪರಿಣಾಮ ಮತ್ತೊಂದು ಕಾರಣ.
ಹೀಗೆ ಬಳಸದೆ ಇಟ್ಟ ವಸ್ತುಗಳನ್ನು ಬಿಸಾಡಿದ ನಂತರ ಮನೆಯಲ್ಲಿ ಹೆಚ್ಚು ಸ್ಥಳಾವಕಾಶ ದೊರೆತು
- ಮನೆ ವಿಶಾಲವಾಗಿ ಗೋಚರಿಸುತ್ತದೆ.
- ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಿಸುತ್ತದೆ.
- ಕ್ರೀಯಾಶೀಲತೆ ಹೆಚ್ಚುತ್ತದೆ
- ಸಂಬಂಧಗಳಲ್ಲಿ ಸುಧಾರಣೆ ಕಂಡು ಬರುತ್ತದೆ.
- ಮನಸ್ಸಿನ ನೆಮ್ಮದಿ ಹೆಚ್ಚುತ್ತದೆ
- ಗೊಂದಲ ಮತ್ತು ಕಿರಿಕಿರಿ ಇಲ್ಲದಂತಾಗುತ್ತದೆ.
ಆದರೂ ಕೆಲವೊಮ್ಮೆ ಕೆಲ ವಸ್ತುಗಳನ್ನು ಎಸೆಯಲು ಇಲ್ಲವೇ ಕೆಲಸದವರಿಗೆ ಕೊಡಲು ಮನಸ್ಸು ಬರುವುದಿಲ್ಲ, ಆದರೆ ಬಳಸಲು ಕೂಡ ಆಗುವುದಿಲ್ಲ. ಅಂತಹ ಸಮಯದಲ್ಲಿ ನಾನು ಮಾಡುವುದು
ಮುಂದಿನ ಆರು ತಿಂಗಳುಗಳ ನನಗೆ ನಾನೇ ಸಮಯಾವಕಾಶ ಕೊಟ್ಟು ಈ ಆರು ತಿಂಗಳುಗಳಲ್ಲಿ ನಾನು ಅವುಗಳನ್ನು ಒಮ್ಮೆಯಾದರೂ ಬಳಸುವೆನೇ ಎಂದು ನೋಡುವುದು. ಅಕಸ್ಮಾತ್ ಬಳಸದೆ ಹೋಗಿದ್ದಲ್ಲಿ ನಿರ್ಧಾಕ್ಷಿಣ್ಯವಾಗಿ ಅವುಗಳನ್ನು ಯಾರಿಗಾದರೂ ಕೊಟ್ಟುಬಿಡುತ್ತೇನೆ ಇಲ್ಲವೇ ಹೊರಗೆ ಎಸೆದು ಬಿಡುತ್ತೇನೆ.
ಅಷ್ಟಾಗಿಯೂ ಕೆಲವೊಮ್ಮೆ ಎಸೆಯಲು ಮನಸ್ಸು ಬಾರದೆ ಇದ್ದಾಗ ಈ ರೀತಿಯ ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು.
ಇನ್ನು ಕೊಡಲೇಬೇಕೆಂದುಕೊಂಡಾಗ ಎಲ್ಲವನ್ನೂ ಕೊಟ್ಟುಬಿಡುವುದು ಜಾಣರ ಲಕ್ಷಣವಲ್ಲ.
ಕೊಡಬೇಕಾದ ವಸ್ತುಗಳಲ್ಲಿ ದಾನ ಮಾಡಲು, ಎಸೆಯಲು ಮತ್ತು ಮಾರಲು ಎಂದು ಮೂರು ಭಾಗಗಳಲ್ಲಿ ವರ್ಗೀಕರಿಸಬೇಕು.
ತುಸು ಗಟ್ಟಿಮುಟ್ಟಾದ, ಉಪಯೋಗಿಸಲು ಬರುವ ವಸ್ತುಗಳನ್ನು ದಾನ ಮಾಡಬಹುದು.
ಹರಿದ, ಛಿದ್ರವಾದ, ಮುರಿದು ಹೋದ ವಸ್ತುಗಳನ್ನು ಎಸೆಯಬಹುಗು.
ಕೊಡುಗೆಯಾಗಿ ಬಂದ, ಆದರೆ ಈಗಾಗಲೇ ಮನೆಯಲ್ಲಿ ಇರುವ ವಸ್ತುಗಳನ್ನು ಕಡಿಮೆ ದರಕ್ಕೆ ಮಾರಬಹುದು, ಇಲ್ಲವೇ ಹಾಗೆಯೇ ಕೂಡ ಕೊಡಬಹುದು. - ಮನೆಯ ಆಂತರಿಕ ಸ್ವಚ್ಛತೆ ಮನಸ್ಸಿನ ಆಂತರಿಕ ಸ್ವಚ್ಛತೆಯನ್ನು ಪ್ರತಿಫಲಿಸುತ್ತದೆ.
- ಅತಿಯಾದ ಶಬ್ದಗಳನ್ನು ಮನ ತಿರಸ್ಕರಿಸುತ್ತದೆ.. ಕಿವಿಗೆ ಹಿತವಾದ ಸಂಗೀತ ಮುದ ನೀಡುತ್ತದೆ.
- ಢಾಳಾಗಿ ಬೆಳಕು ಬೀರುವ ಬಲ್ಬ್ ಗಳು ಬೇಡವೆನಿಸುತ್ತವೆ.. ತಿಳಿಯಾದ ಮಂದ ಬೆಳಕು ಸಾಕು
- ಗಾಢ ಬಣ್ಣದ ಬಟ್ಟೆಗಳು ಬೇಡ.. ತಿಳಿ ಬಣ್ಣದ ಬಟ್ಟೆಗಳು ಸಾಕು ಎನಿಸುತ್ತದೆ.
- ಮಂದ ಸುವಾಸನೆ ಬೀರುವ ಸುಗಂಧ ದ್ರವ್ಯಗಳೇ ಸಾಕೆನಿಸುತ್ತವೆ.
- ನೋವಿನ ಮತ್ತು ದುಃಖದ ಘಟನೆಗಳು ಅಷ್ಟಾಗಿ ಕಾಡುವುದಿಲ್ಲ.
- ಸ್ವಚ್ಛ ಮನೆ ಸ್ವಚ್ಛ ಮನಸ್ಥಿತಿಯ ಜೊತೆಗೆ ಮನೆಯಲ್ಲಿ ಧನಾತ್ಮಕತೆ ತುಂಬಿಕೊಂಡು ಅಳಿದುಳಿದ ಕೆಲಸಗಳನ್ನು ಮುಗಿಸುತ್ತೇವೆ.
ಆದ್ದರಿಂದ ಸ್ನೇಹಿತರೆ, ನಿಗದಿತ ಅಂತರದ ಸಮಯದಲ್ಲಿ ಮನೆಯ ಸಂಪೂರ್ಣ ಸ್ವಚ್ಛತೆಗೆ ಆದ್ಯತೆ ನೀಡಿ. ಮನೆಯ ಕಬೋರ್ಡಿನಲ್ಲಿರುವ ಡ್ರಾವರುಗಳನ್ನು ಮೊದಲು ಸ್ವಚ್ಛಗೊಳಿಸಬೇಕು. ಬೇಡವಾದ ಹಳೆಯ ರಸೀದಿಗಳನ್ನು, ವಸ್ತುಗಳನ್ನು ತೆಗೆಯಬೇಕು.
ಇನ್ನೊಂದು ಬಾರಿ ಬಳಸಲು ಸಾಧ್ಯ ನೋಡೋಣ ಎಂಬಂತಹ ವಸ್ತುಗಳನ್ನು ಒಂದೆಡೆ ಇಡಬೇಕು
ಪುನರ್ಬಳಕೆ ಸಾಧ್ಯವಾಗುವಂತಹ ವಸ್ತುಗಳನ್ನು ಪ್ರತ್ಯೇಕವಾಗಿ ಇರಿಸಿ ಮರುಬಳಕೆ ಮಾಡಬೇಕು ಇಲ್ಲವೇ ಕೆಲಸದವರಿಗೆ ಕೊಡಬಹುದು.
ಚೆನ್ನಾಗಿರುವ ವಸ್ತುಗಳಾಗಿದ್ದರೆ ಅವಶ್ಯಕತೆ ಇರುವವರಿಗೆ ಕೊಡುಗೆ ಇಲ್ಲವೇ ದಾನವಾಗಿ ಕೊಟ್ಟುಬಿಡಬೇಕು.
ಈ ರೀತಿ ನಮ್ಮ ಭೌತಿಕ ಮನೆಯನ್ನು ಸ್ವಚ್ಛ ಮಾಡುತ್ತಾ ಹೋದಂತೆ ನಮ್ಮ ಆಂತರಿಕ ಮನವು ಕೂಡ ಶುದ್ಧವಾಗುತ್ತದೆ.
ಮನೆಯು ವಿಶಾಲವಾಗಿ, ಸುಂದರವಾಗಿ ಕಂಡರೆ ಮನಸ್ಸು ಮತ್ತು ಹೃದಯ ಪ್ರಶಾಂತವಾಗಿ ತೋರುತ್ತದೆ. - ಲೌಕಿಕ ವಸ್ತುಗಳೊಂದಿಗಿನ ಭಾವನಾತ್ಮಕ ಬೇರ್ಪಡುವಿಕೆ ಸಾಧ್ಯವಾಗುತ್ತದೆ.ಇದುವೇ ಮುಂದೆ ಲೌಕಿಕ ವಿಷಯಗಳಿಂದಲೂ ಕೂಡ ಅಂತರ ಕಾಯ್ದುಕೊಳ್ಳಲು ನಮಗೆ ಸಹಾಯ ಮಾಡುತ್ತದೆ.
ಮನೆಯಲ್ಲಿನ ಕಸವನ್ನು ಹುಲ್ಲಿನ ಪೊರಕೆಯಿಂದ ಸ್ವಚ್ಛಗೊಳಿಸಿದರೆ, ಮನದ ಅಂಧಕಾರವನ್ನು ಜ್ಞಾನದ ಬೆಳಕಿನ ಪೊರಕೆಯಿಂದ ಗುಡಿಸಿ ಹಾಕಿ ಬಾಳಿ ಬೆಳಗೋಣ.


