ಸಿಂದಗಿ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಹಾಗೂ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಕಾರ್ಯ ವೈಖರಿಗೆ ಸದಸ್ಯರ ಅಸಮಾಧಾನ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪುರಸಭೆಗೆ ಸಂಬಂಧಿಸಿದ ಯಾವುದೇ ಕಾರ್ಯ ಕಲಾಪಗಳಿಗೆ ನಮ್ಮ ಅಭಿಪ್ರಾಯ ಕೇಳುತ್ತಿಲ್ಲ. ಹಲವಾರು ಬಾರಿ ಪುರಸಭೆಯ ಹಣ ಪೋಲಾಗುತ್ತಿದೆ ಎಂದು ಪತ್ರಿಕೆಯಲ್ಲಿ ಹೇಳಿಕೆ ನೀಡಿದ್ದು, ಪ್ರಸ್ತುತ ತಮ್ಮ ಕುಟುಂಬ ಮತ್ತು ಸ್ವ-ಆಸ್ತಿಯ ಗಣಕಿಕೃತ ಉತಾರಿ ಮಾಡಿಕೊಳ್ಳುವಾಗ ಪುರಸಭೆ ಖಾತೆಗೆ ಜಮಾವಣೆ ಮಾಡಬೇಕಾದ ತೆರಿಗೆ ಹಣ ಪಾವತಿ ಮಾಡಿರುವುದಿಲ್ಲ. ಜೊತೆಗೆ ನಕಲಿ ಚಲನ್ ಸೃಷ್ಟಿಸಿ ಪುರಸಭೆಗೆ ತೆರಿಗೆ ಹಣವೇ ಸಂದಾಯ ಮಾಡಿರುವುದಿಲ್ಲ. ಇದಕ್ಕೇನು ಉತ್ತರ ನೀಡುತ್ತಾರೆ ನೋಡಬೇಕಾಗಿದೆ ಎಂದು ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಶಾಂತವೀರ ಮನಗೂಳಿ ಹೇಳಿದರು.
ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದ ಪುರಸಭೆ ಅಧ್ಯಕ್ಷ ಶಾಂತವೀರ ಸಿದ್ದಪ್ಪ ಬಿರಾದಾರ ಹಾಗೂ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಅವರ ಕಾರ್ಯ ವೈಖರಿಗೆ ಅಸಮಾಧಾನಗೊಂಡು ಪುರಸಭೆಯ ೧೬ಜನ ಸದಸ್ಯರು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸುವ ಸಲುವಾಗಿ ವಿಶೇಷ ಸಾಮಾನ್ಯ ಸಭೆ ಕರೆಯುವಂತೆ ಸದಸ್ಯರ ಜೊತೆಗೂಡಿ ಮನವಿ ಸಲ್ಲಿಸಲಾಗಿದೆ.
ಅವಿಶ್ವಾಸ ಪತ್ರದಲ್ಲಿ ೧೬ ಜನ ಸದಸ್ಯರು, ಪುರಸಭೆ ಹಾಲಿ ಅಧ್ಯಕ್ಷ ಶಾಂತವೀರ ಬಿರಾದಾರ ಹಾಗೂ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಸದಸ್ಯರ ಅಭಿಪ್ರಾಯಗಳಿಗೆ ಸ್ಪಂದಿಸದೇ ಹಾಗೂ ಗಣನೆಗೆ ತೆಗದುಕೊಳ್ಳದೇ ಸ್ವ-ಇಚ್ಚೆಯಂತೆ ಆಡಳಿತ ನಡೆಸುತ್ತಿದ್ದಾರೆ. ಪ್ರಸ್ತುತ ಅಧಿಕಾರದಲ್ಲಿರುವ ಅಧ್ಯಕ್ಷರ ಮೇಲೆ ಯಾವುದೇ ರೀತಿಯ ವಿಶ್ವಾಸ ಉಳಿದಿಲ್ಲ. ಆದ್ದರಿಂದ ನಾವುಗಳು ಸ್ವ-ಇಚ್ಚೆಯಿಂದ ಸಹಿ ಮಾಡುವುದರೊಂದಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಅರ್ಜಿ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಅನುದಾನ ಇಟ್ಟುಕೊಂಡು ತೆರವು ಕಾರ್ಯಾಚರಣೆ ಕೈಗೊಳ್ಳಬೇಕು. ಮತ್ತು ಅನುದಾನ ತರುವವರೆಗೂ ತೆರವು ಕಾರ್ಯಾಚರಣೆ ಮಾಡಬೇಡಿ ಎಂದು ಶಾಸಕರು ಕಿವಿಮಾತು ಹೇಳಿದರೂ ಅವರ ಮಾತಿಗೂ ಬೆಲೆ ಕೊಡದೆ, ಸದಸ್ಯರ ಗಮನಕ್ಕೂ ತರದೆ ಸ್ವ-ನಿರ್ಧಾರ ತೆಗೆದುಕೊಂಡು ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ. ಆ ನೆಪದಲ್ಲಿ ಶ್ರೀಮಂತ ವರ್ಗದವರಿಂದ ಹಣ ಪಡೆದು ಅವರ ಅಂಗಡಿಗಳನ್ನು ತೆರವುಗೊಳಿಸದೇ ಬಡವರ ಮನೆ ಮತ್ತು ಅಂಗಡಿಗಳನ್ನು ತೆರವುಗೊಳಿಸಿ ಅವರ ಹೊಟ್ಟೆಯ ಮೇಲೆ ಹೊಡೆದು ಇಡೀ ನಗರವನ್ನು ದೂಳಾಪೂರವಾಗಿ ಮಾಡಿದ್ದು ತಾವೆಲ್ಲರೂ ನೋಡಿದ್ದೀರಿ. ಹಾಗೂ ತಮ್ಮ ಕಟ್ಟಡಗಳಿರುವ ಸ್ಥಳವನ್ನು ತೆರವುಗೊಳಿಸದೇ ಅಗಲಿಕರಣ ಮಾಡಲಿಲ್ಲ ಏಕೆ ಎಂದು ಮಾಜಿ ಅಧ್ಯಕ್ಷ ಶಾಂತವೀರ ಮನಗೂಳಿ ಪ್ರಶ್ನಿಸಿದರು.
ಈ ವೇಳೆ ಪುರಸಭೆ ಸದಸ್ಯರಾದ ಉಮಾದೇವಿ ಸುಲ್ಪಿ, ಕಲಾವತಿ ಕಡಕೋಳ, ಖೈರುನಬಿ ನಾಟೀಕಾರ, ತಹಸಿನ್ ಮುಲ್ಲಾ, ಬಸಮ್ಮ ಸಜ್ಜನ, ಭಾಗವ್ವ ಡೋಣೂರ, ಭಾಷಾಸಾಬ ತಾಂಬೋಳ್ಳಿ, ಗೊಲ್ಲಾಳಪ್ಪ ಬಂಕಲಗಿ, ನಾಮ ನಿರ್ದೇಶೀತ ಸದಸ್ಯರಾದ ಸಿದ್ದು ಮಲ್ಲೇದ, ಸಾಯಬಣ್ಣ ಪುರದಾಳ, ಅಬ್ದುಲ್‌ರಹಿಮ್ ದುದನಿ, ಚನ್ನಪ್ಪ ಗೋಣಿ ಸೇರಿದಂತೆ ಅನೇಕರಿದ್ದರು.