ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕೃಷ್ಣಾ ತೀರದಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಮಾಫಿಯಾ ತಡೆಯುವಂತೆ ಒತ್ತಾಯಿಸಿ ಪಟ್ಟಣದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಒಂದು ದಿನದ ಧರಣಿ ನಡೆಸಲಾಯಿತು.
ಈ ವೇಳೆ ಯುವಜನ ಸೇನೆಯ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಮಾತನಾಡಿ, ಅಕ್ರಮವಾಗಿ ಮಣ್ಣು ಸಾಗಾಟ ನಡೆಸುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ತಹಶೀಲ್ದಾರರಿಗೆ ಹೇಳಿದರೆ ಪೊಲೀಸ್ ಇಲಾಖೆಗೆ ತಿಳಿಸುವಂತೆ ಪೊಲೀಸರಿಗೆ ತಿಳಿಸಿದರೆ ತಹಸೀಲ್ದಾರ ಬಂದು ದೂರು ನೀಡಲಿ ಅಂತಾರೆ. ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಇದೆಯೋ ಇಲ್ಲವೋ ಎಂಬ ಬಗ್ಗೆ ನಮಗೆ ಅನುಮಾನ ಮೂಡಿದೆ. ಈ ತಾಲೂಕಿನ ದಂಡಾಧಿಕಾರಿಗಳ ರಿಮೋಟ್ ಬೇರೆಯವರ ಬಳಿ ಇದೆ ಎನಿಸುತ್ತೆ. ಮಣ್ಣು ಮಾಫಿಯಾ ತಡೆಯುವಂತೆ ೧ನೇ ತಾರೀಕಿಗೆ ಮನವಿ ಪತ್ರ ನೀಡಿದರೆ ೧೮ನೇ ತಾರೀಕಿನಂದು ಇದು ನಮ್ಮ ವ್ಯಾಪ್ತಿಗೆ ಒಳಪಡುವದಿಲ್ಲ ಎಂದು ಹಿಂಬರಹ ನೀಡುತ್ತಾರೆ. ನಿನ್ನೆ ಮಣ್ಣು ಹೊಡೆಯಲು ಪರವಾನಗಿ ಕೋರಿ ನಡೆದ ಹೋರಾಟದಲ್ಲಿ ಟಿಪ್ಪರ ಮಾಲೀಕರು ಭಾಗಿಯಾಗಿದ್ದರು. ನಾವು ಮಣ್ಣು ಮಾಫಿಯಾ ಅಂತಾ ಹೇಳಿದ್ದು ರೈತರಿಗಲ್ಲ, ಸುಲಗೆಕೋರರಿಗೆ. ಇಲ್ಲಿ ಮಣ್ಣು ಅಗೆಯುತ್ತಿರುವದರಿಂದ ಹೊಳೆ ನೀರಿನ ಹರಿವು ಬದಲಾಗುವ ಸಾಧ್ಯತೆಗಳಿವೆ. ಹಾಗಾದಲ್ಲಿ ಊರಿಗೆ ಊರೇ ಮುಳುಗಿ ಹೋಗುತ್ತೆ. ಹಲವರು ನಿರ್ಗತಿಗರಾಗೋ ಸಾಧ್ಯತೆಗಳಿವೆ. ಮಣ್ಣು ಅವಶ್ಯವೇ ಇದ್ದಲ್ಲಿ ಕಾನೂನನ್ನು ಉಲ್ಲಂಘಿಸದೇ ಅಧಿಕಾರಿಗಳ ಪರವಾನಗಿ ಪಡೆದು ವೈಜ್ಞಾನಿಕವಾಗಿ ಸಾಗಿಸಿದಲ್ಲಿ ನಮ್ಮದೇನು ತಕರಾರು ಇಲ್ಲ ಎಂದರು.
ಈ ವೇಳೆ ಹೋರಾಟಗಾರ ಸಂಗಯ್ಯ ಸಾರಂಗಮಠ, ಮುಖಂಡ ಶಿವು ಕನ್ನೊಳ್ಳಿ ಮತ್ತೀತರರು ಮಾತನಾಡಿ ಅಕ್ರಮ ಮಣ್ಣು ಸಾಗಾಟ ನಡೆಸುತ್ತಿರುವ ಬಗ್ಗೆ ತಹಸೀಲ್ದಾರರಿಗೆ ದೂರಿದಾಗ ಯಾವ ಸ್ಥಳದಲ್ಲಿ ಅಕ್ರಮ ಮಣ್ಣು ಸಾಗಾಟ ನಡೆದಿದೆ ಎಂದು ಪ್ರಶ್ನಿಸಿದ್ದರು. ನಮ್ಮ ತಾಲೂಕಿನಲ್ಲಿ ಇಂತಹ ಯಾವುದೇ ಅಕ್ರಮ ನಡೆಯುತ್ತಿಲ್ಲ ಅಂತ ಹೇಳಿದರು, ನಿನ್ನೆ ಅಕ್ರಮ ಮಣ್ಣು ಸಾಗಾಟ ನಡೆಸುತ್ತಿರುವವರು ಹೋರಾಟ ನಡೆಸಿ ಮನವಿ ಸಲ್ಲಿಸಿದ್ದಾರೆ. ಎಲ್ಲಿಂದ ಬಂದರು ಇವರೆಲ್ಲ. ಇಂದು ವಿಜಯಪುರದ ವಿಜಲೆನ್ಸ್ ಟೀಮ್ ಅಕ್ರಮ ಮಣ್ಣು ಸಾಗಿಸುತ್ತಿರುವ ಸ್ಥಳದಲ್ಲಿ ದಾಳಿ ಮಾಡಿದೆ. ಇವತ್ತು ಧರಣಿ ಸಡೆಸುತ್ತಾರೆ. ಇವತ್ತೊಂದು ದಿನ ನಿಲ್ಲಿಸಿದರಾಯ್ತು ಎಂದು ಅಧಿಕಾರಿಗಳು ಅಂದುಕೊಂಡಿರಬಹುದು. ಆದರೆ ನಮ್ಮ ಹೋರಾಟ ನಿಲ್ಲಲ್ಲ. ನಿರಂತರವಾಗಿರಲಿದೆ. ಕೆಬಿಜೆಎನ್‌ಎಲ್ ಅಧಿಕಾರಿಗಳ ಜೊತೆಗೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಲೋಕಾಯುಕ್ತಕ್ಕೆ ದೂರಿ ಸೂಕ್ತ ಕ್ರಮ ಕೈಗೊಳ್ಳುವವರೆಗೆ ನಮ್ಮ ಹೋರಾಟ ನಿಲ್ಲಲ್ಲ ಎಂದರು.
ಹೋರಾಟದಲ್ಲಿ ಕಣ್ಣು, ಕಿವಿ, ಬಾಯಿಗೆ ಕಪ್ಪು ಪಟ್ಟಿ ಕಟ್ಟಿ, ಕಳ್ಳತನ ಮಾಡುವದನ್ನು ಕೇಳಬೇಡಿ, ಕಳ್ಳತನ ಮಾಡುವದನ್ನು ನೋಡಬೇಡಿ, ಕಳ್ಳತನದ ಕುರಿತು ಮಾತನಾಡಬೇಡಿ ಎಂಬ ಮೂರು ಮಂಗಗಳು ಕಣ್ಣು ಕಿವಿ ಬಾಯಿ ಮುಚ್ಚಿದ ಚಿತ್ರದ ಬ್ಯಾನರ್‌ನಲ್ಲಿ ತಾಲೂಕು ಆಡಳಿತ ಅಸಾಯಕತೆಯಿಂದ ಬಾಹ್ಯವಾಗಿ ಹೋರಾಟಗಾರರಿಗೆ ಕಳುಹಿಸಿದ ಸಂದೇಶ ಎಂದು ಬರೆದು ತಮ್ಮ ಆಕ್ರೋಷವನ್ನು ಹೊರಹಾಕಿದರು. ಚಂದ್ರು ಹಡಪದ, ಅಜಯಕುಮಾರ ಕೋಟಿಖಾನಿ, ಕಾಶಿನಾಥ ಗಂಗೂರ, ಬಾಬು ತೆಗ್ಗಿನಮನಿ, ಮಹಾಂತೇಶ ಚಲವಾದಿ, ರಾಜು ಮಸಬಿನಾಳ, ಶಿವು ವನಕಿಹಾಳ, ಅಶೋಕ ನಿಡಗುಂದಿ, ಸಂಗಪ್ಪ ಪೊಲೀಸಪಾಟೀಲ, ಅಯ್ಯಪ್ಪ ತಂಗಡಗಿ, ಶಿವು ಮುಳವಾಡ ಸೇರಿದಂತೆ ಇತರರು ಹೋರಾಟಕ್ಕೆ ಸಾಥ್ ನೀಡಿದರು.