ಫೇವಾರ್ಡ್ ವಿಜಯಪುರದಿಂದ ವಿಶ್ವ ಎನ್ಜಿಓ, ಮಹಿಳಾ ದಿನಾಚರಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸರ್ಕಾರ ಸುಸ್ಥಿರ ಭವಿಷ್ಯ ಹಾಗೂ ಅಭಿವೃದ್ಧಿ ಸಾಧಿಸುವಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಮಹತ್ತರವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ ಅಭಿಮತ ವ್ಯಕ್ತಪಡಿಸಿದರು.
ಕರ್ನಾಟಕ ನಗರ ಮತ್ತು ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ, ವಿಜಯಪುರ ಜಿಲ್ಲಾ ಘಟಕದಿಂದ ಸೋಮವಾರ ನಗರದ ಗಾಂಧಿಭವನದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಸ್ವಯಂ ಸೇವಾ ಸಂಸ್ಥೆಗಳ ದಿನಾಚರಣೆ ಹಾಗೂ ವಿಶ್ವ ಮಹಿಳಾ ದಿನಾಚರಣೆ ಸಮಾರಂಭವನ್ನು ಜಿ.ಪಂ ಸಿಎಓ ರಾಮಣ್ಣ ಅಥಣಿ ಅವರು ಉದ್ಘಾಟಿಸಿ ಮಾತನಾಡಿದರು.
ಸ್ವಯಂ ಸೇವಾ ಸಂಸ್ಥೆಗಳು ಸರ್ಕಾರದ ವಿವಿಧ ಜನಪರ, ಮಹಿಳಾ ಸಬಲೀಕರಣ ಯೋಜನೆಗಳನ್ನು ಸಮುದಾಯದ ತಳಮಟ್ಟಕ್ಕೆ ತಲುಪಿಸುವಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿ ಎನ್ಜಿಓ ಅಧಿಕಾರಿಗಳಿಗೆ, ಸಿಬ್ಬಂದಿಗೆ ಅತ್ಯುತ್ತಮ ಕಾರ್ಯನಿರ್ವಹಿಸುವಲ್ಲಿ ಅತ್ಯಮೂಲ್ಯ ಸಲಹೆಗಳನ್ನು ನೀಡಿದರು. ನಬಾರ್ಡ್ ಎಜಿಎಂ ವಿಕಾಸ ರಾಠೋಡ ಮಾತನಾಡಿ, ಜಿಲ್ಲೆಯ ಸರ್ವಾಗೀಂಣ ಅಭಿವೃದ್ಧಿ ಎಲ್ಲರೂ ಕೈಜೋಡಿಸಬೇಕು. ಜನಪರ ಕಾರ್ಯಕ್ರಮಗಳ ಕುರಿತು ಸರಿಯಾದ ಪ್ರಸ್ತಾವನೆಗಳು ಬಂದಲ್ಲಿ ಅದ್ಯತೆ ನೀಡಲಾಗುವುದು ಎಂದರು.
ಐಆರ್ಡಿ ಸ್ವಯಂ ಸೇವಾ ಸಂಸ್ಥೆಯ ಸಿಇಓ ಹಾಗೂ ಫೇವಾರ್ಡ್-ಕೆ ರಾಜ್ಯ ಸಮಿತಿ ಸದಸ್ಯ ಡಾ.ಬಾಬು ಸಜ್ಜನ ಮಾತನಾಡಿ, ಸಾರ್ವಜನಿಕ ಹಾಗೂ ಸಮುದಾಯ ಸೇವಾಕಾರ್ಯಗಳ ಜೊತೆ ಸ್ವಯಂ ಸೇವಾ ಸಂಸ್ಥೆಗಳ ಅಭ್ಯುದಯಕ್ಕಾಗಿ ನಾವೆಲ್ಲರೂ ಒಗ್ಗೂಡುವುದು ಅತ್ಯವಶ್ಯಕ. ಮಹಿಳಾ ಸಬಲೀಕರಣದಿಂದ ಕುಟುಂಬಕಷ್ಟೇ ಅಲ್ಲದೇ ಇಡಿ ಸಮಾಜದ ಏಲ್ಗೆಗೆ ಬಲ ತುಂಬಿದಂತಾಗುತ್ತದೆ ಎಂದು ಎನ್ಜಿಓಗಳ ಸ್ಥಿತಿಗತಿ ವಿವರಿಸಿದರು. ಕಾರ್ಯಕ್ರಮದಲ್ಲಿ ಪೆವಾರ್ಡ್ ಮಹಿಳಾ ಸದಸ್ಯ ಸಂಸ್ಥೆಗಳ ಸಾಧಕ 12 ಮಹಿಳೆಯರನ್ನು ಸನ್ಮಾನಿಸಲಾಯಿತು. ಪ್ರತಿ ಸಂಸ್ಥೆಗಳಿಂದ 5 ನಿಮಿಷ ಪಿಪಿಟಿ ಮೂಲಕ ಮಾಹಿತಿ ಮಂಡಿಸಲಾಯಿತು.
ಸಮಾರಂಭದಲ್ಲಿ ಫೇವಾರ್ಡ್-ಕೆ ವಿಜಯಪುರ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಕೆ.ಎನ್.ಮೇಟಿ ಅತಿಥಿಗಳಾಗಿ ಆಗಮಿಸಿದ್ದರು. ಫೇವಾರ್ಡ್-ಕೆ ವಿಜಯಪುರ ಜಿಲ್ಲಾಧ್ಯಕ್ಷೆ ಸರೋಜಾ ಕೌಲಂಪೂರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಹದೇವ್ ದೇವರ ಸ್ವಾಗತಿಸಿ ನಿರೂಪಿಸಿದರು. ಫೇವಾರ್ಡ್-ಕೆ ಜಿಲ್ಲಾ ಘಟಕದ ವಿವಿಧ ಪದಾಧಿಕಾರಿಗಳು, ಜಿಲ್ಲೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿವರ್ಗ ಹಾಗೂ ಸ್ವಯಂಸೇವಕರು ಭಾಗಿಯಾಗಿದ್ದರು.