ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ನಿತ್ಯ ಪ್ರವಚನ ಆಲಿಸುವುದರಿಂದ ಮನಸ್ಸು ಶುದ್ಧಿ ಆಗುವುದರ ಜತೆಗೆ ಮನದ ಕಲ್ಮಶ ತೊಲಗಿ ಪರಿಶುದ್ಧ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಬೀದರ ಚಿದಂಬರಾಶ್ರಮದ ಶ್ರೀ ಸಿದ್ದಾರೂಢ ಮಠದ ಡಾ.ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣ ಸಮೀಪದ ನಗನೂರ ಗ್ರಾಮದ ಶ್ರೀ ಶಾಂತ ಸ್ವರೂಪ ಸಿದ್ದಾಶ್ರಮ ಶ್ರೀ ಸಿದ್ದಾರೂಢ ಮಠದಲ್ಲಿ ಆಯೋಜಿಸಿದ್ದ ಪ್ರವಚನ ಮಹಾಮಹೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಪ್ರತಿಯೊಬ್ಬ ಮನುಷ್ಯನಲ್ಲಿರುವ ಅಜ್ಞಾನದ ಅಂಧಕಾರವನ್ನು ಕಳೆದು ಸುಜ್ಞಾನದ ಬೆಳಕನ್ನು ನೀಡುವ ಶಕ್ತಿ ಸದ್ಗುರು ಸಿದ್ದಾರೂಢರಿಗಿದೆ ಎಂದರು.
ಮನದ ಮಾಲಿನ್ಯ ಕಳೆಯಲು ಜ್ಞಾನದ ಶಕ್ತಿ ಅವಶ್ಯವಾಗಿದೆ. ಈಗಿನ ಸಮಾಜದಲ್ಲಿ ದ್ವೇಷದ ವಾತಾವರಣದಿಂದ ಮಾನವೀಯ ಮೌಲ್ಯಗಳ ಕೊರತೆ ಉಂಟಾಗುತ್ತಿದೆ. ವಿಜ್ಞಾನ ಎಷ್ಟೇ ಮುಂದುವರೆದರೂ ಕೂಡ ಅಂತರಾತ್ಮದ ಶುದ್ಧಿ ಸಾಧ್ಯವಾಗುತ್ತಿಲ್ಲ ಇದಕ್ಕೆ ಪ್ರವಚನವೇ ದಿವ್ಯ ಔಷಧಿಯಾಗಿದೆ ಎಂದವರು ಸಿದ್ದಾರೂಢ ಸ್ವಾಮಿಗಳು ತಮ್ಮ ಆಚಾರ, ವಿಚಾರ ಮತ್ತು ನಡೆ ನುಡಿಗಳಿಂದ ಭಕ್ತರಿಗೆ ಸಾಕ್ಷಾತ್ ಶಿವನ ಸ್ವರೂಪವೇ ಆಗಿದ್ದರು ಎಂದು ಹೇಳಿದರು.
ಕಲಬುರಗಿ ಸಿದ್ದಾರೂಢ ಮಠದ ಮಾತೋಶ್ರೀ ಲಕ್ಷ್ಮೀದೇವಿ ತಾಯಿಯವರು ಮಾತನಾಡಿ, ಮನುಷ್ಯನಲ್ಲಿರುವ ಕತ್ತಲನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ಮೂಡಿಸಲು ಸಿದ್ದಾರೂಢರ ಧ್ಯಾನ, ಸ್ಮರಣೆ ಹಾಗೂ ಭಕ್ತಿಯಿಂದ ಮಾತ್ರ ಸಾಧ್ಯ ಎಂದರು.
ಮುಆಲಗೂರದಲ್ಲನಗೌಡ ಜಿ ಗೂಗಲ್ ಮಾತನಾಡಿ, ಗ್ರಾಮದ ಸಿದ್ದಾರೂಢ ಮಠಕ್ಕೆ ೭೫ ಲಕ್ಷ ರೂ. ಅನುದಾನ ಒದಗಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಅವರಿಗೆ ಸಮಸ್ತ ನಗನೂರ ಹಾಗೂ ಖಾನಪೂರ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಚಳಕಾಪೂರದ ಶ್ರೀ ಶಂಕರಾನಂದ ಸ್ವಾಮಿಗಳು, ಭೀ ಗುಡಿ ಸಾಧಕಾಶ್ರಮದ ಮಾತೋಶ್ರೀ ಜ್ಞಾನೇಶ್ವರಿ ತಾಯಿಯವರು, ಮುಳಸಾವಳಗಿಯ ಶ್ರೀ ದಯಾನಂದ ಸ್ವಾಮೀಜಿ, ರಂಗಂಪೇಟೆಯ ಶ್ರೀ ಜನಾರ್ಧನ ಪಾಣಿಭಾತೆ, ಆಲಗೂರ ಶಂಕ್ರಣ್ಣ ಶಾಸ್ತ್ರಿ, ಬಸ್ತಿಹಾಳದ ಅಮೋಗೇಪ್ಪ ಶಾಸ್ತ್ರಿ, ಜಿಪಂ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಿಕ್ಯಾಳ, ಶರಣಪ್ಪ ದೇಶಪಾಂಡೆ, ಚನ್ನಬಸಪ್ಪ ದೇಸಾಯಿ, ಹಳ್ಳೆಪ್ಪ ಹವಲ್ದಾರ, ಸಾಯಬಣ್ಣ ಹವಲ್ದಾರ, ಶರಣಪ್ಪ ಬಿಸ್ಟೇಪ್ಪಗೋಳ, ಬಂದಗಿಸಾಬ್ ಗೌಂಡಿ, ಸಾಹೇಬರೆಡ್ಡಿ ಖಾನಾಪುರ, ಬಸಣ್ಣ ವಣಿಕ್ಯಾಳ, ಗುರುನಾಥ ವಿಶ್ವಕರ್ಮ, ಮಹಾದೇವಪ್ಪ ದೇಶಪಾಂಡೆ, ಶರಣಪ್ಪ ಯಳವರ, ಗುರಲಿಂಗ ತಳವಾರ, ಸಾಹೇಬಣ್ಣ ಚಿಂಚೋಳಿ, ಬುಳ್ಳಪ್ಪ ಹೆಳವರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಉಪಸ್ಥಿತರಿದ್ದರು.
ಮಲ್ಲನಗೌಡ ಜಿ ಗೂಗಲ್ ನಿರೂಪಿಸಿ, ವಂದಿಸಿದರು. ಶಾಂತಗೌಡ ಮಾಲಿ ಪಾಟೀಲ ಕರಡಕಲ್, ಉಮೇಶ ಬಿಬಿ ಇಂಗಳಗಿ ಅವರಿಂದ ಸಂಗೀತ ಸೇವೆ ಜರುಗಿತು.