ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಜೀವನದಲ್ಲಿ ಶಿಕ್ಷಣ ಪಡೆಯುವದು ಮುಖ್ಯವಾಗಿದೆ. ಶಿಕ್ಷಣವಂತರಾದರೆ ಜೀವನವನ್ನು ಸುಗಮವಾಗಿ ಸಾಗಿಸಬಹುದು. ಈ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕೆಂದು ಗೊರವಗುಂಡಗಿ ಪುಣ್ಯಕೋಟಿ ಆಶ್ರಮದ ವರಲಿಂಗೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಇಂಗಳೇಶ್ವರ ಗ್ರಾಮದ ಉಕ್ಕಲಿ ರಸ್ತೆಯಲ್ಲಿರುವ ಎಲ್‌ಟಿ-೨ ತಾಂಡಾದ ಹತ್ತಿರವಿರುವ ಟೋಕರೆ ಕೋಳಿ ಸಮಾಜ ಸಂಸ್ಥೆಯ ಟೋಕರೆ ಕೇಳಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ೩೫ ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಶಾಲಾ ಸಾಂಸ್ಕ್ರತಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯು ಅನೇಕ ಸಂತರ-ಮಹಾತ್ಮರಿಗೆ ಜನ್ಮತಾಣವಾಗಿದೆ. ಈಚೆಗೆ ಜಿಲ್ಲೆಯು ಶೈಕ್ಷಣಿಕವಾಗಿ ಅಭಿವೃದ್ಧಿಯಾಗುತ್ತಿದೆ. ಬೇರೆ ಜಿಲ್ಲೆಯವರು ವಿಜಯಪುರ ಜಿಲ್ಲೆಗೆ ವ್ಯಾಸಂಗಕ್ಕೆ ಬರುತ್ತಿರುವದು ಕಾಣಬಹುದಾಗಿದೆ. ಈ ಭಾಗದಲ್ಲಿರುವ ಟೋಕರೆ ಕೋಳಿ ಸಮಾಜ ಸೇವಾ ಸಂಸ್ಥೆಯು ಸಹ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲೆಯನ್ನು ನಡೆಸುತ್ತಿರುವದು ಶ್ಲಾಘನೀಯ. ಈಗಾಗಲೇ ಈ ಸಂಸ್ಥೆಯು ಅನುದಾನಕ್ಕೆ ಒಳಪಡಬೇಕಾಗಿತ್ತು. ಮುಂದಿನ ದಿನಗಳಲ್ಲಿ ಸರ್ಕಾರದ ಅನುದಾನಕ್ಕೆ ಒಳಪಟ್ಟು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗಲೆಂದರು.
ಮುಂಬರುವ ದಿನಗಳಲ್ಲಿ ಈ ಸಂಸ್ಥೆಯು ನೂತನ ಶಾಲಾ ಕಟ್ಟಡ, ವಸತಿ ನಿಲಯ ಕಟ್ಟಡ ನಿರ್ಮಾಣ ಮಾಡುವಂತಾಗಲಿ. ಈ ಕಟ್ಟಡಗಳಿಗೆ ನಮ್ಮ ಮಠದಿಂದ ರೂ.೫ ಲಕ್ಷ ಧನಸಹಾಯ ಮಾಡುವ ಭರವಸೆ ನೀಡಿದ ಅವರು, ಈ ಸಂಸ್ಥೆಯಲ್ಲಿ ಕಲಿಯುವ ಮಕ್ಕಳು ನಾಡನ್ನು ಬೆಳೆಯುವ ಮಕ್ಕಳಾಗಿ ಹೊರಹೊಮ್ಮುವಂತಾಗಲೆಂದರು.
ಸಾನಿಧ್ಯ ವಹಿಸಿದ್ದ ಸಿಂದಗಿಯ ಶಾಂತಗಂಗಾಧರ ಸ್ವಾಮೀಜಿ ಮಾತನಾಡಿದ ಅವರು, ಇಂದು ಶಿಕ್ಷಣ ಸಂಸ್ಥೆಯನ್ನು ಬೆಳೆಸುವದು ತುಂಬಾ ಕಷ್ಟದಾಯಕ ಸಂಗತಿ. ಈ ಸಂಸ್ಥೆಯ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವದು ಸಂತಸದಾಯಕ ಸಂಗತಿ. ಇಲ್ಲಿ ಕಲಿಯುವ ಮಕ್ಕಳು ನಾಡಿನ ಸೇವೆ ಸಲ್ಲಿಸುವಂತಾಗಲೆಂದರು.
ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನ ಸಂಸ್ಥೆಯ ನಿರ್ದೇಶಕ ಡಾ.ಎಸ್.ಕೆ.ಮೇಲಕಾರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶಿಕ್ಷಣ ಹೆಚ್ಚು ಸಿಗುವಂತಾಗಬೇಕು. ಈ ಸಂಸ್ಥೆಯು ಈ ದಿಶೆಯಲ್ಲಿ ಕಾರ್ಯನ್ಮೋಖವಾಗಿರುವುದು ಶ್ಲಾಘನೀಯ. ಇದೊಂದು ಆದರ್ಶಮಯ ಶಿಕ್ಷಣ ಸಂಸ್ಥೆಯಾಗಿ ರೂಪಗೊಳ್ಳಬೇಕು. ಬುಡಕಟ್ಟು ಸಮುದಾಯಗಳ ಅಭಿವೃದ್ಧಿ ಹೊಂದಬೇಕಾದರೆ ಅವರಿಗೆ ಉತ್ತಮ ಶಿಕ್ಷಣದ ಅಗತ್ಯವಿದೆ. ಈ ಸಂಸ್ಥೆಗೆ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಾಬುರಾವ ಚಿಂಚನಸೂರ ಅವರು ನಿಗಮದಿಂದ ಸಹಾಯ-ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಿಂದಗಿಯ ಪ್ರಶಾಂತ ಸುಣಗಾರ, ಎಂ.ಡಿ.ಹರಿಕಾಂತರ, ನೀಲಕಂಠ ಬಲೇಗಾರ, ಭೀಮಣ್ಣ ಕೋಳಿ,ಡಾ.ಭೀಮಾಶಂಕರ ಮುತಗೋಡ, ಬಸಪ್ಪ ರಾಠೋಡ, ಜಿ.ಜಿ.ದೇವೂರ,ಬಂಡೆಪ್ಪ ನಾಟೀಕಾರ,ಎನ್.ಬಿ.ಕೋಳಿ, ಸಿಆರ್‌ಪಿ ಎಂ.ಎಂ.ದಳವಾಯಿ ಇತರರು ಇದ್ದರು. ಅಧ್ಯಕ್ಷತೆಯನ್ನು ಶ್ರೀಮಂತ ಕೋಳಿ ವಹಿಸಿದ್ದರು. ಡಾ.ಭೀಮಾಶಂಕರ ಮುತಗೋಡ ಸ್ವಾಗತಿಸಿದರು. ಶಿಕ್ಷಕ ಎಂ.ಬಿ.ತೇಲಿ(ಅಥಣಿ) ನಿರೂಪಿಸಿ,ವಂದಿಸಿದರು.
ನಂತರ ವಿದಾರ್ಥಿಗಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು.