ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕೃಷ್ಣಾ ನದಿಯ ಹೂಳು ತುಂಬಿದ ಮಣ್ಣನ್ನು ರೈತನ ಸವಳು-ಜವಳು ಭೂಮಿಗೆ ಮಣ್ಣು ಸಾಗಿಸಲು ಅನುಮತಿ ನೀಡುವಂತೆ ಕೋರಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ತಾಲೂಕು ಘಟಕದ ವತಿಯಿಂದ ಸೋಮವಾರ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆಯ ಮೂಲಕ ತಹಸೀಲ್ದಾರ ಕಚೇರಿಯವರೆಗೆ ಆಗಮಿಸಿದರು. ಅಲ್ಲಿ ಬಹಿರಂಗ ಸಭೆ ನಡೆಸಿ ಸಂಘದ ರಾಜ್ಯದ ಪ್ರ.ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ಜಿಲ್ಲಾ ಪ್ರ.ಕಾರ್ಯದರ್ಶಿ ಗುರುಸಂಗಪ್ಪ ಹಂಡರಗಲ್ಲ, ತಾಲೂಕು ಅಧ್ಯಕ್ಷ ಅಯ್ಯಪ್ಪ ಬಿದರಕುಂದಿ, ಪ್ರ ಕಾರ್ಯದರ್ಶಿ ವಾಯ್.ಎಲ್.ಬಿರಾದಾರ, ಹಾಸ್ಯ ಕಲಾವಿದ ಶ್ರೀಶೈಲ ಹೂಗಾರ ಮತ್ತೀತರರು ಮಾತನಾಡಿ, ನದಿಯಲ್ಲಿನ ಮಣ್ಣು ಸಾಕಷ್ಟು ಫಲವತ್ತಾಗಿರುತ್ತದೆ. ಅದನ್ನು ನಮ್ಮ ಹೊಲಗಳಿಗೆ ಹಾಕಿದಾಗ ಒಳ್ಳೆಯ ಬೆಳೆ ಬರುತ್ತೆ. ಹಾಗಾಗಿ ಮಣ್ಣು ಸಾಗಿಸಲು ಅನುಮತಿ ನೀಡಬೇಕು ಮತ್ತು ತಾಲೂಕಿನ ಬಾಲಾಜಿ ಶುಗರ್ಸನವರು ರೈತರಿಗೆ ೨ ತಿಂಗಳಾದರೂ ರೈತರಿಗೆ ಬಿಲ್ ಪಾವತಿಸಿರುವದಿಲ್ಲ. ಕೂಡಲೇ ಪಾವತಿಸುವಂತೆ ಕ್ರಮ ವಹಿಸಬೇಕು ಎಂದರು.
ಎಚ್.ಬಿ.ವಾಲಿಕಾರ, ಶರಣಬಸಯ್ಯ ಹಿರೇಮಠ, ಎಸ್.ಎನ್.ಮುದೂರ, ಎಸ್.ಎಸ್.ಮಡಿವಾಳರ, ಡಿ.ಕೆ.ಕವಡಿಮಟ್ಟಿ, ಎಸ್.ವಿ.ಹಿರೇಮಠ, ಎಂ.ಎಂ.ಪಾಟೀಲ, ಎ.ಎಸ್.ಮೂಲಿಮನಿ, ಹಣಮಂತ ಗುರಿಕಾರ, ಪ್ರಶಾಂತ ಢವಳಗಿ ಮತ್ತೀತರರು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.
ಪಟಾಕಿ ಸಿಡಿಸಿದ ರೈತರು
ಪ್ರತಿಭಟನಾ ಮೆರವಣಿಗೆ ಅಂಬೇಡ್ಕರ್ ವೃತ್ತದ ಬಳಿ ಆಗಮಿಸುತ್ತಿದ್ದಂತೆ ಕೆಲ ರೈತರು ಪಟಾಕಿ ಸಿಡಿಸಿದ್ದು ಹಲವರಲ್ಲಿ ಮುಜುಗರ ಉಂಟು ಮಾಡಿತು. ಸಂಭ್ರಮದ ವೇಳೆ ಪಟಾಕಿ ಸಿಡಿಸುವದು ಸಾಮಾನ್ಯ. ಆದರೆ ಈ ಮೆರವಣಿಗೆ ಯಾತಕ್ಕಾಗಿ ನಡೆಯುತ್ತಿದೆ ಎಂಬ ಮಾಹಿತಿ ಇಲ್ಲದೆಯೇ ಪಟಾಕಿ ಸಿಡಿಸಿದ ರೈತರು ಭಾಗಿಯಾದ್ದರಾ? ಎಂಬ ಚರ್ಚೆಗಳು ನಡೆದವು.