ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶೃಂಗೇರಿ ಶಾರದಾ ಪೀಠದ ೩೭ನೇ ಜಗದ್ಗುರು ವಿಧುಶೇಖರ ಭಾರತೀ ಮಹಾಸ್ವಾಮೀಜಿ ಅವರು ವಿಜಯ ಯಾತ್ರೆಯನ್ನು ಕೈಗೊಂಡಿದ್ದು, ಆ ಹಿನ್ನಲೆಯಲ್ಲಿ ಸಿಂದಗಿ ನಗರಕ್ಕೆ ಮಾ.೨೦ ಮತ್ತು ೨೧ ರಂದು ಆಗಮಿಸಲಿದ್ದಾರೆ ಎಂದು ಸ್ಥಳೀಯ ಭೀಮಾಶಂಕರ ಮಠದ ಶ್ರೀ ಸದ್ಗುರು ದತ್ತಪ್ಪಯ್ಯ ಸ್ವಾಮಿಗಳು ತಿಳಿಸಿದ್ದಾರೆ.
ಸಿಂದಗಿ ಪಟ್ಟಣದ ಶ್ರೀ ಭೀಮಾಶಂಕರ ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಶ್ರೀಮಠದಲ್ಲಿ ಪೂಜ್ಯರ ಅಮೃತ ಹಸ್ತದಿಂದ ಸುವರ್ಣ ಭಾರತೀ ಭವನದ ಶಿಲಾನ್ಯಾಸ ನೆರವೇರಲಿದೆ. ಮಾ.೨೦ರಂದು ಸಂಜೆ ೫ಗಂಟೆಗೆ ಜಗದ್ಗುರುಗಳ ಪುರಪ್ರವೇಶ ವಿಜಯಪುರ ಬೈಪಾಸ್ ರಸ್ತೆಯಿಂದ ಶ್ರೀ ಸಂಗಮೇಶ್ವರ ದೇವಸ್ಥಾನದವರೆಗೆ ಬೈಕ್ರ‍್ಯಾಲಿ ಮೂಲಕ ಜಗದ್ಗುರುಗಳಿಗೆ ಸ್ವಾಗತ. ಸಂಜೆ ೬ಗಂಟೆಗೆ ಶ್ರೀ ಸಂಗಮೇಶ್ವರ ದೇವಸ್ಥಾನದಿಂದ ಶ್ರೀಮಠದವರೆಗೆ ಶೋಭಾಯಾತ್ರೆ, ೬.೩೦ಗಂಟೆಗೆ ಶ್ರೀಮಠದಲ್ಲಿ ಶ್ರೀ ಜಗದ್ಗರುಗಳಿಗೆ ಪೂರ್ಣಕುಂಭ ಸ್ವಾಗತ, ೭ಗಂಟೆಗೆ ಶ್ರೀಗಳಿಗೆ ಧೂಳಿ ಪಾದಪೂಜೆ ಹಾಗೂ ಭಿನ್ನವತ್ತಳಿಕೆ ಸಮರ್ಪಣೆ ಮತ್ತು ಅನುಗ್ರಹ ಭಾಷಣ. ರಾತ್ರಿ ೮.೩೦ಗಂಟೆಗೆ ಶ್ರೀಗಳಿಂದ ಶ್ರೀ ಶಾರದಾ ಚಂದ್ರಮೌಳೇಶ್ವರ ಪೂಜೆ ನಂತರ ಪ್ರಸಾದ ವಿತರಣೆ ಇರುತ್ತದೆ. ಮಾ.೨೧ರಂದು ಬೆಳಗ್ಗೆ ೭ಗಂಟೆಗೆ ಸುಂದರ ಕಾಂಡ ಪಾರಾಯಣ ಪ್ರಾರಂಭ, ಬೆಳಗ್ಗೆ ೧೦ಗಂಟೆಗೆ ಶ್ರೀಮಠದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸುವರ್ಣ ಭಾರತೀ ಭವನದ ಶಿಲಾನ್ಯಾಸ ಮತ್ತು ಭವನದ ನೀಲನಕ್ಷೆ ಅನಾವರಣ ಬೆಳಗ್ಗೆ ೧೧ಗಂಟೆಗೆ ಶ್ರೀಗಳ ಉಪಸ್ಥಿತಿಯಲ್ಲಿ ಆಂಜನೇಯ ಮೂಲ ಮಂತ್ರ ಹೋಮ ಮತ್ತು ಪೂರ್ಣಹುತಿ, ಬೆಳಗ್ಗೆ ೧೨ಗಂಟೆಗೆ ಶ್ರೀಮಠದಿಂದ ಜಗದ್ಗುರುಗಳ ಪಾದುಕಾ ಪೂಜೆ ಮತ್ತು ಗೌರವಾರ್ಪಣೆ ನಡೆಯಿತ್ತದೆ. ನಂತರ ಮಧ್ಯಾನ್ಹ ೧.೩೦ಗಂಟೆಗೆ ಪಟ್ಟಣದ ಅನಂತ ಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ಮಹಾಪ್ರಸಾದ ನೆರವೆರಲಿದೆ. ಕಾರಣ ಶ್ರೀಮಠದ ಭಕ್ತ ವರ್ಗ ಮತ್ತು ಸಿಂದಗಿಯ ಮಹಾಜನತೆ ಎರಡು ದಿನಗಳ ಕಾರ್ಯಕ್ರಮದಲ್ಲಿ ಭಾಗಹಿಸಿಬೇಕು ಎಂದು ತಿಳಿಸಿದ್ದಾರೆ.
ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸ ಜೋಷಿ, ಶ್ರೀಧರ ಕುಲಕರ್ಣಿ, ಶಿವು ಬಡಿಗೇರ, ದಯಾನಂದ ಪತ್ತಾರ ಸೇರಿದಂತೆ ಅನೇಕರು ಇದ್ದರು.