ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ
ಬೆಂಗಳೂರು: ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ನೀಡಲಾಗಿದ್ದು, ಮುಂಬರುವ ಚುನಾವಣೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸೋಮವಾರ ಕರೆ ನೀಡಿದ್ದಾರೆ. ಆದರೆ ಕರ್ನಾಟಕ ಕಾಂಗ್ರೆಸ್ ಪಕ್ಷದ ಮಹಿಳೆಯರು ಉತ್ತಮ ಕೆಲಸ ಮಾಡದಿರುವ ಬಗ್ಗೆ ಅವರು ನಿರಾಶೆ ವ್ಯಕ್ತಪಡಿಸಿದರು.
ಸೋಮವಾರ ನಡೆದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಮಾಜಿ ಶಾಸಕಿ ಸೌಮ್ಯ ರೆಡ್ಡಿ ನೇತೃತ್ವದ ರಾಜ್ಯ ಮಹಿಳಾ ಕಾಂಗ್ರೆಸ್ ವಿಭಾಗದ ಕಾರ್ಯಕ್ಷಮತೆಯ ಬಗ್ಗೆ ತೀವ್ರ ನಿರಾಶೆ ವ್ಯಕ್ತಪಡಿಸಿದರು.
“ಮಹಿಳಾ ವಿಭಾಗದ ಬಗ್ಗೆ ನನಗೆ ಸಂತೋಷವಿಲ್ಲ; ಅದು ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ. ನೀವು ಏನನ್ನಾದರೂ ಸಾಧಿಸಲು ದೃಢನಿಶ್ಚಯ ಮಾಡಿದರೆ ಮುಂದೆ ಹಲವಾರು ಅವಕಾಶಗಳಿವೆ” ಎಂದು ಹೇಳಿದರು.
ಮಹಿಳಾ ಸಬಲೀಕರಣಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ ಡಿಸಿಎಂ, “ಮಹಿಳಾ ಮೀಸಲಾತಿ ಮಸೂದೆ ಜಾರಿಯಾದರೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 74 ಕ್ಷೇತ್ರಗಳನ್ನು ಮಹಿಳೆಯರಿಗೆ ಮೀಸಲಿಡಲಾಗುವುದು. ನೀವು ಗೃಹಲಕ್ಷ್ಮಿ ಯೋಜನೆಯ ಕನಿಷ್ಠ 50 ಫಲಾನುಭವಿಗಳನ್ನು ಪಕ್ಷದ ಸದಸ್ಯರಾಗಿ ನೋಂದಾಯಿಸಿದರೆ ನಿಮಗೆ ತಾಲ್ಲೂಕು ಮಟ್ಟದ ನಿರ್ದೇಶಕರ ಹುದ್ದೆ ನೀಡಲಾಗುವುದು” ಎಂದರು.

ಮುಸ್ಲಿಮರಿಗೆ ಶೇ. 4 ರಷ್ಟು ಮೀಸಲಾತಿ: ಕಾಂಗ್ರೆಸ್-ಬಿಜೆಪಿ ನಡುವೆ ಜಟಾಪಟಿ
ಬೆಂಗಳೂರು: ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇಕಡಾ ನಾಲ್ಕು ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮತ್ತೊಮ್ಮೆ ತೀವ್ರ ವಾಗ್ವಾದ ನಡೆಯಿತು.
ಧರ್ಮಾಧಾರಿತ ಮೀಸಲಾತಿ “ಸಾಂವಿಧಾನಕ್ಕೆ ವಿರುದ್ಧವಾಗಿದೆ” ಎಂಬ ಬಿಜೆಪಿಯ ಆರೋಪವನ್ನು ತಳ್ಳಿಹಾಕಿ, ಮೀಸಲಾತಿಯನ್ನು ಸಮರ್ಥಿಸಿಕೊಂಡ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು ಮತ್ತು ಬೌದ್ಧರು ಈ ದೇಶದ ನಾಗರಿಕರು ಎಂದು ಹೇಳಿದರು.
“ನಮಗೆ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಸಮುದಾಯಗಳ ಬಗ್ಗೆ ಕಾಳಜಿ ಇದೆ. ಬಿಜೆಪಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಲು ಬಯಸುತ್ತದೆ ಎಂದು ಹೇಳುತ್ತಿದೆ. ಹಾಗಿದ್ದರೆ ಕ್ರಿಶ್ಚಿಯನ್ ಮತ್ತು ಮುಸ್ಲಿಂಮರನ್ನು ಮಂತ್ರಿಗಳನ್ನಾಗಿ ಮಾಡಲಿ. ಆಗ ಮಾತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಸಮಾನತೆಯ ಬಗ್ಗೆ ಮಾತನಾಡುವ ನೈತಿಕ ಹಕ್ಕಿದೆ. ಕುವೆಂಪು ಬರೆದ ನಾಡಗೀತೆಯನ್ನು ಅವರು ಓದಲಿ, ಆಗ ಕರ್ನಾಟಕವನ್ನು ಶಾಂತಿಯ ತೋಟ ಮಾಡುವುದು ಅಂದರೆ ಏನೆಂದು ಅವರಿಗೆ ಅರ್ಥವಾಗುತ್ತದೆ” ಎಂದು ಶಿವಕುಮಾರ್ ತಿರುಗೇಟು ನೀಡಿದರು.
ಡಾ. ಎಪಿಜೆ ಅಬ್ದುಲ್ ಕಲಾಂ ಅವರನ್ನು ಭಾರತದ ರಾಷ್ಟ್ರಪತಿಯನ್ನಾಗಿ ನೇಮಿಸಿದ್ದು ಕಾಂಗ್ರೆಸ್ ಅಲ್ಲ, ಬಿಜೆಪಿ ಸರ್ಕಾರ ಎಂದು ವಿಜಯೇಂದ್ರ ಅವರು ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.
“ನಾವು ನಜ್ಮಾ ಹೆಪ್ತುಲ್ಲಾ, ನ್ಯಾಯಮೂರ್ತಿ ಅಬ್ದುಲ್ ನಜೀರ್ ಮತ್ತು ಆರಿಫ್ ಮೊಹಮ್ಮದ್ ಖಾನ್ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಿದ್ದೇವೆ. ಸಂಗೀತಗಾರ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರಿಗೆ ಬಿಜೆಪಿ ಸರ್ಕಾರ ಭಾರತ ರತ್ನ ನೀಡಿದೆ” ಎಂದು ವಿಜಯೇಂದ್ರ ಸುದ್ದಿಗಾರರಿಗೆ ತಿಳಿಸಿದರು.
ಕಾಂಗ್ರೆಸ್‌ನ ತುಷ್ಟೀಕರಣ ರಾಜಕೀಯ ಹೊಸದಲ್ಲ. ದಲಿತರ ಬಗ್ಗೆ ಕಾಂಗ್ರೆಸ್ ಗೆ ಕಾಳಜಿ ಇಲ್ಲ. ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಯನ್ನು “ಮುಸ್ಲಿಂ ಗೂಂಡಾಗಳು ಸುಟ್ಟುಹಾಕಿದಾಗ” ಅವರು ಎಲ್ಲಿದ್ದರು ಎಂದು ವಿಜಯೇಂದ್ರ ಪ್ರಶ್ನಿಸಿದರು.