ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಾರಾ ಕಮಾನ್ ಆವರಣದಲ್ಲಿ ದಿ:-16-03-2025ರಂದು (ಅ)ಪರಿಚಿತ ಓದುಗರ ನಾಲ್ಕನೆಯ ಭೇಟಿಯು ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ವಿಜಯಪುರದ ಸಾಹಿತಿ ವಿಶ್ವನಾಥ ಅರಬಿ ಮಾತನಾಡಿ ಕಾವ್ಯದ ಹುಟ್ಟು,ವಿವಿಧ ಕಾವ್ಯ ಪ್ರಕಾರಗಳ ಬಗ್ಗೆ ಮಾತನಾಡುತ್ತಾ ತಾವು ರಚಿಸಿದ ಎಂಟು ಕೃತಿಗಳನ್ನು ಓದುಗರಿಗೆ ಪರಿಚಯಿಸಿದರು.ಮುಂದುವರೆದು ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿದ್ದು ಇಂತಹ ಸಂದರ್ಭದಲ್ಲಿ ಸಾಹಿತ್ಯಾಸಕ್ತರನ್ನು ಒಂದೆಡೆ ಸೇರಿಸಿ ವಿವಿಧ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಈ ಮೂಲಕ ಕನ್ನಡದ ಅಳಿಲು ಸೇವೆ ಸಲ್ಲಿಸುತ್ತಿರುವ ಸಂಚಾಲಕ ಡಿ ಕುಮಾರ್ ಅವರ ಕಾರ್ಯ ಶ್ಲಾಘನೀಯವಾದುದು ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಹಿತಿ ಸಂಗೀತಾ ಮಠಪತಿ ಮಾತನಾಡಿ ಯುವಕ/ಯುವತಿಯರಲ್ಲಿ ಓದಿನ ಆಸಕ್ತಿ ಹೆಚ್ಚಿಸುವಲ್ಲಿ (ಅ) ಪರಿಚಿತ ಓದುಗರ ಬಳಗದ ಕಾರ್ಯ ಅಭಿನಂದನಾರ್ಹ, ವಾರಾಂತ್ಯದಲ್ಲಿ ತಮ್ಮದೇ ಲೋಕದಲ್ಲಿ ಮುಳುಗುವವರ ಮಧ್ಯೆ ಆಸಕ್ತಿಯಿಂದ ಆಗಮಿಸಿ ಪುಸ್ತಕದ ಲೋಕದಲ್ಲಿ ಮುಳುಗಿದ ಕನ್ನಡ ಈ ಎಲ್ಲ ಕನ್ನಡ ಮನಸ್ಸುಗಳು ಮುಂದೆ ಉತ್ತಮ ಸಾಹಿತಿಗಳಾಗಲಿ ಎಂದು ಹಾರೈಸಿದರು.
ಬೆಳಗ್ಗೆ 10-30 ಗಂಟೆಯ ಸುಮಾರಿಗೆ ಸೇರಿದ ಎಲ್ಲ ಸಾಹಿತ್ಯ ಆಸಕ್ತರು ಅಲ್ಲಲ್ಲಿ ಕುಳಿತು ತಮಗೆ ಇಷ್ಟವಾದ ಕೃತಿಗಳನ್ನು ಓದಿದರು. ನಂತರ 12-00 ಗಂಟೆಗೆ ಬೇರೆ ಬೇರೆ ಭಾಗಗಳಿಂದ ಬಂದಿರುವ ಅಪರಿಚಿತ ಓದುಗರು ತಮ್ಮ ತಮ್ಮ ಪರಿಚಯಗಳನ್ನು ಮಾಡಿಕೊಂಡು ಪರಿಚಿತರಾದರು. ಆನಂತರ ವಿವಿಧ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಕೆಲವು ಆಸಕ್ತರು ತಾವು ಬರೆದ ಸ್ವರಚಿತ ಕವಿತೆಗಳನ್ನು ಓದಿದರು. ಮೂರನೇ ಭೇಟಿಯಲ್ಲಿ ಹಮ್ಮಿಕೊಂಡಿದ್ದ ಕವನ ರಚನಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಕ್ಕಾಗಿ ಗೀತಾ ಗೌಡರಗೆ ಪ್ರಮಾಣ ಪತ್ರ ಮತ್ತು ಪುಸ್ತಕ ನೀಡಿ ಅಭಿನಂದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಒಟ್ಟು 26 ಜನ ಸಾಹಿತ್ಯ ಆಸಕ್ತರು ಭಾಗವಹಿಸಿದ್ದರು. ಈ ಭೇಟಿಯ ವಿಶೇಷತೆ ಎಂದರೆ ಸಾಹಿತ್ಯ ದಂಪತಿಗಳೊಂದಿಗೆ ಅವರ ಮಗು ಐದು ತಿಂಗಳ ಕಂದ ಓಂ ಭಾಗವಹಿಸಿದ್ದು ಜೊತೆಗೆ ದೂರದ ಬೆಂಗಳೂರಿನಿಂದ ಆಗಮಿಸಿದ ಅನಿಲಕುಮಾರ್ ಭಾಗವಹಿಸಿದ್ದು ಪುಸ್ತಕ ಪ್ರೀತಿಗೆ ಮೆರುಗನ್ನು ಹೆಚ್ಚಿಸಿತು. ಕಾರ್ಯಕ್ರಮದ ಪೂರ್ವ ತಯಾರಿಯನ್ನು ಸಂಚಾಲಕರಾದ ಯುವಕ ಡಿ.ಕುಮಾರ್ ಗಂಗಣ್ಣವರ ನೆರವೇರಿಸಿ ಕಾರ್ಯಕ್ರಮದ ನಿರೂಪಣೆಯನ್ನು ನಿರ್ವಹಿಸಿದರು.

