ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದಲ್ಲಿ ೧೯೯೩ ರಲ್ಲಿ ಹೋಳಿ ಹಬ್ಬದಂದು ನಡೆದ ಗಲಾಟೆಯ ನಂತರ ಪಟ್ಟಣದಲ್ಲಿ ಹೋಳಿ ಹಬ್ಬ ಕಳೆಗುಂದಿರುವದರಿಂದಾಗಿ ಹೋಳಿ ಹಬ್ಬದ ಬಣ್ಣದಾಟಕ್ಕೆ ಮೆರಗು ತರುವ ಉದ್ದೇಶದಿಂದ ಮಾ.೧೯ ರಂದು ನಡೆಯಲಿರುವ ರಂಗಪಂಚಮಿಯನ್ನು ಎಲ್ಲರ ಸಹಕಾರದೊಂದಿಗೆ ಅಭೂತಪೂರ್ವವಾಗಿ ಆಚರಣೆ ಮುಂದಾಗಿದ್ದು. ರಂಗಪಂಚಮಿಗೆ ಎಲ್ಲರೂ ಕೈಜೋಡಿಸಿ ಯಶಸ್ವಿಗೊಳಿಸಬೇಕೆಂದು ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ರಂಗಪಂಚಮಿಯಂಗವಾಗಿ ಶನಿವಾರ ಸಂಜೆ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೋಳಿ ಹುಣ್ಣಿಮೆಯ ಮರುದಿನ ಹಾಗೂ ರಂಗಪಂಚಮಿಯಂದು ನಡೆಯುವ ಬಣ್ಣದಾಟ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆಯುತ್ತಿತ್ತು. ಈಚೆಗೆ ಹೋಳಿ ಹಬ್ಬ ಬಂತೆಂದರೆ ಸಾಕು ಪಟ್ಟಣದ ಬಹುತೇಕ ಎಲ್ಲ ಹಿರಿಯರು ಪಟ್ಟಣದಿಂದ ಹೊರಗೆ ಹೋಗುತ್ತಿದ್ದರು. ಇದರಿಂದಾಗಿ ಬಣ್ಣದಾಟ ತನ್ನ ಮೆರಗು ಕಳೆದುಕೊಂಡಿತ್ತು. ಈ ವರ್ಷ ಬಸವೇಶ್ವರ ಸೇವಾ ಸಮಿತಿಯು ಎಲ್ಲ ಸಂಘಟನೆಗಳ ಮುಖಂಡರ, ಹಿರಿಯರ, ಯುವಕರ ಸಹಕಾರದೊಂದಿಗೆ ಹೋಳಿ ಹಬ್ಬದಂಗವಾಗಿ ಇದೇ ಪ್ರಥಮ ಬಾರಿಗೆ ಹಲಗೆ ಬಾರಿಸುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಈ ಸ್ಪರ್ಧೆ ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಯಿತು. ರಂಗಪಂಚಮಿಯನ್ನು ಅದ್ದೂರಿಯಾಗಿ ಆಚರಣೆ ಮಾಡುವ ಉದ್ದೇಶದಿಂದ ಈ ಸಭೆ ಕರೆಲಾಗಿತ್ತು. ಸಭೆಯಲ್ಲಿ ಚರ್ಚಿಸಿದಂತೆ ಹಲಗೆ ಮೇಳ, ಟ್ರ್ಯಾಕ್ಟರ್ ಇಲ್ಲವೇ ಎತ್ತಿನ ಬಂಡಿಯಲ್ಲಿ ಬಣ್ಣದ ಬ್ಯಾರಲ್, ಡಿಜೆದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಣ್ಣದೋಕುಳಿ ಜರುಗಿಸಲಾಗುವುದು. ಬಸವೇಶ್ವರ ವೃತ್ತದಲ್ಲಿ ಬೆಳಗ್ಗೆ ೧೦ ಗಂಟೆಗೆ ಬಣ್ಣದೋಕುಳಿ ಆರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿ ಮರಳಿ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಮುಕ್ತಾಯಗೊಳಿಸಲಾಗುವದು. ಎಲ್ಲರೂ ಜವಾಬ್ದಾರಿ ತೆಗೆದುಕೊಂಡು ಶಾಂತಿಯುತವಾಗಿ ರಂಗಪಂಚಮಿಯನ್ನು ಯಶಸ್ವಿಗೊಳಿಸಬೇಕೆಂದರು.
ಸಾನಿಧ್ಯ ವಹಿಸಿದ್ದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಎಲ್ಲ ಹಬ್ಬಗಳು ವೈಶಿಷ್ಠಪೂರ್ಣವಾಗಿವೆ. ಇದರಲ್ಲಿ ಹೋಳಿ ಹಬ್ಬವು ವೈಶಿಷ್ಠವಾಗಿದೆ. ಎಲ್ಲ ಹಬ್ಬಗಳನ್ನು ಮನಸಾಪೂರ್ವಕವಾಗಿ ಆಚರಿಸಿದರೆ ಮಾತ್ರ ಹಬ್ಬಗಳಿಗೆ ಅರ್ಥ ಬರಲು ಸಾಧ್ಯ. ಹಬ್ಬಗಳು ಎಲ್ಲರನ್ನು ಒಂದುಗೂಡಿಸುತ್ತವೆ. ಪ್ರತಿಯೊಂದು ಬಣ್ಣವು ತನ್ನದೇ ಆದ ಸಂಕೇತ ಹೊಂದಿದೆ. ನಮ್ಮ ಜೀವನ ಕಲರ್‌ಪುಲ್ ಆಗಿರಬೇಕೆಂಬ ಉದ್ದೇಶದಿಂದ ಬಣ್ಣದಾಟ ನಡೆದುಕೊಂಡು ಬಂದಿದೆ. ಎಲ್ಲರೂ ದ್ವೇಷ ಮರೆತು ಹಬ್ಬದಲ್ಲಿ ಭಾಗವಹಿಸುವಂತಾಗಬೇಕು. ಮಾ.೧೯ ರಂದು ನಡೆಯಲಿರುವ ರಂಗಪಂಚಮಿಯ ಆಚರಣೆ ಜಿಲ್ಲೆಯಲ್ಲಿ ಮಾದರಿಯಾಗುವಂತೆ ಇರಬೇಕು. ಪ್ರತಿಯೊಂದು ಹಬ್ಬಗಳನ್ನು ಪಟ್ಟಣದಲ್ಲಿ ಎಲ್ಲರೂ ಸೇರಿಕೊಂಡು ಮಾಡುವಂತಾಗಬೇಕು. ಮುಂಬರುವ ಬಸವ ಜಯಂತಿಯನ್ನು ಬಸವ ಜನಿಸಿದ ಈ ನೆಲದಲ್ಲಿ ಅದ್ದೂರಿಯಾಗಿ ಆಚರಣೆ ಮಾಡುವಂತಾಗಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಸಭೆಯಲ್ಲಿ ಮುಖಂಡರಾದ ಸಂಗಮೇಶ ಓಲೇಕಾರ, ಸಂಗನಗೌಡ ಚಿಕ್ಕೊಂಡ, ಅಶೋಕ ಹಾರಿವಾಳ, ಸಿದ್ದನಗೌಡ ಚಿಕ್ಕೊಂಡ, ಕಾಶೀನಾಥ ರಾಠೋಡ, ಎಂ.ಜಿ.ಆದಿಗೊಂಡ, ಶಂಕರಗೌಡ ಬಿರಾದಾರ, ಬಸವರಾಜ ಗೊಳಸಂಗಿ, ವಿನುತ ಕಲ್ಲೂರ, ಸೇರಿದಂತೆ ಇತರರು ಮಾತನಾಡಿದರು.
ಸಭೆಯಲ್ಲಿ ಮುಖಂಡರಾದ ಬಸವರಾಜ ಹಾರಿವಾಳ, ಸಂಗಯ್ಯ ಕಾಳಹಸ್ತೇಶ್ವರಮಠ, ಬಸಣ್ಣ ದೇಸಾಯಿ, ಅನಿಲ ದುಂಬಾಳಿ, ಪಂಚಾಕ್ಷರಿ ಕಾಳಹಸ್ತೇಶ್ವರಮಠ, ರವಿ ರಾಠೋಡ, ಸುರೇಶಗೌಡ ಪಾಟೀಲ, ಜಗದೀಶ ಕೊಟ್ರಶೆಟ್ಟಿ, ರವಿ ಪಟ್ಟಣಶೆಟ್ಟಿ, ಶೇಖರ ಗೊಳಸಂಗಿ, ಜಟ್ಟಿಂಗರಾಯ ಮಾಲಗಾರ, ವಿವೇಕಾನಂದ ಕಲ್ಯಾಣಶೆಟ್ಟಿ,ಡಾ.ಕರುಣಕರ ಚೌಧರಿ, ರಮೇಶ ಯಳಮೇಲಿ, ಮುದುಕು ಹೊರ್ತಿ, ಪ್ರಭಾಕರ ಖೇಡದ, ಪಾವಡೆಪ್ಪ ಜೈನಾಪುರ, ಮೀರಾಸಾಬ ಕೊರಬು, ಮುತ್ತು ಕಿಣಗಿ, ಗೋಪಾಲ ಅಗರವಾಲ, ರಾಯಣ್ಣ ಮಸಬಿನಾಳ, ಚಂದ್ರಶೇಖರಗೌಡ ಪಾಟೀಲ, ಬಸವಂತ ಅಡಗಿಮನಿ, ಅನಿಲ ಮುಳವಾಡ, ಶ್ರೀಶೈಲ ಶಿರಗುಪ್ಪಿ, ಮುದುಕು ಬಸರಕೋಡ ಸೇರಿದಂತೆ ಇತರರು ಭಾಗವಹಿಸಿದ್ದರು.
ರವಿ ರಾಠೋಡ ನಿರೂಪಿಸಿ, ವಂದಿಸಿದರು.

