ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ನಾಗೂರ ಗ್ರಾಮದ ಯಮನೂರೇಶ್ವರ ಜಾತ್ರಾಮಹೋತ್ಸವ ಮಾ. ೧೮ ರಿಂದ ೨೨ ರವರೆಗೆ ಐದು ದಿನಗಳ ಕಾಲ ಧಾರ್ಮಿಕ ಪೂಜೆ, ವಿವಿಧ ಮನರಂಜನಾ ಕಾರ್ಯಕ್ರಮಗಳೊಂದಿಗೆ ಅತಿ ವೈಭವದಿಂದ ನಡೆಯಲಿದೆ ಎಂದು ಮಣ್ಣೂರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ ಮುಳವಾಡ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತ್ರಾಯಂಗವಾಗಿ ಐದು ದಿನಗಳ ಯಮನೂರೇಶ್ವರ, ಯೋಗಿ ಚಕ್ರವರ್ತಿ, ಚಾಂಗದೇವ(ರಾಜಾ ಬಾಘ ಸವಾರರ) ದೇವರುಗಳಿಗೆ ಅಭಿಷೇಕ, ಮಹಾಪೂಜೆ ನೆರವೇರಲಿದೆ. ಮಾ. ೧೮ ರಂದು ಸಂಜೆ ೫ ಗಂಟೆಗೆ ಚಾಂಗದೇವರ ಭಾವಚಿತ್ರ ಮೆರವಣಿಗೆ ಆರಂಭವಾಗಲಿದೆ. ಸಂಜೆ ೧೧೧೧ ದೀಪೋತ್ಸವ ಜರುಗಲಿದೆ. ರಾತ್ರಿ ೯.೩೦ ಗಂಟೆಗೆ ಗಂಧಾಭಿಷೇಕ(ಸಂದಲ್) ಸಕಲ ವಾದ್ಯ-ವೈಭವದೊಂದಿಗೆ ನಡೆಯಲಿದೆ. ರಾತ್ರಿ ೧೦.೩೦ ಗಂಟೆಗೆ ಹರನಾಳದ ಅಮೋಘಸಿದ್ದೇಶ್ವರ ಡೊಳ್ಳಿನ ಗಾಯನ ಸಂಘ ಹಾಗೂ ದೇವರನಿಂಬರಗಿಯ ಮಾಳಂಗರಾಯ ಡೊಳ್ಳಿನ ಗಾಯನ ಸಂಘದಿಂದ ವಾದಿ ಪ್ರತಿವಾದಿ ಡೊಳ್ಳಿನ ಪದಗಳು ಜರುಗಲಿವೆ ಎಂದರು.
ಮಾ.೧೯ ರಂದು ಯೋಗಿಚಕ್ರವರ್ತಿ ಚಾಂಗದೇವರ ಪುಣ್ಯದಿನ ಹಾಗೂ ಜಾತ್ರಾಮಹೋತ್ಸವ(ಉರಸ್) ನಡೆಯಲಿದೆ. ಬೆಳಗ್ಗೆ ೧೦ ಗಂಟೆಗೆ ನಾಗೂರಿನ ಯಮನೂರೇಶ್ವರ ಭಜನಾ ಮಂಡಳಿಯಿಂದ ಭಜನಾ ಪದಗಳು ಜರುಗಲಿವೆ. ಬೆಳಗ್ಗೆ ೧೧ ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಟಗರಿನ ಕಾಳಗ ಸ್ಪರ್ಧೆ ನಡೆಯಲಿದೆ. ರಾತ್ರಿ ೧೦.೩೦ ಗಂಟೆಗೆ ನಾಗೂರಿನ ಯಮನೂರೇಶ್ವರ ನಾಟ್ಯ ಸಂಘದಿಂದ ಕಲಿಯುಗದಲ್ಲಿ ಘರ್ಜಿಸಿದ ಕರ್ಣಾಜುನ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಮಾ.೨೦ ರಂದು ಜಾತ್ರಾಯಂಗವಾಗಿ ಬೆಳಗ್ಗೆ ೯ ಗಂಟೆಗೆ ಭಾರ ಎತ್ತುವದು, ಕಸರತ್ತಿನ ಕೆಲಸಗಳು, ಸಂಜೆ ೪.೩೦ ಗಂಟೆಗೆ ಜಂಗೀ ಕುಸ್ತಿಗಳು ನಡೆಯಲಿವೆ. ಬೆಳಗ್ಗೆ ೯ ಗಂಟೆಗೆ ಹೊಲದಲ್ಲಿ ಪುಟ್ಟಿ ಗಾಡಿ ರೇಸ್ (೩೦೦ ಮೀಟರ್) ನಡೆಯಲಿದೆ. ರಾತ್ರಿ ೯ ಗಂಟೆಗೆ ರೊಳ್ಳಿಯ ಜಂಗಲಿಸಾಬ ಟಗರಣ್ಣವರ, ಬೊಳಚಿಕ್ಕಲಕಿಯ ಪೂಜಾರಿ ಹೆಜ್ಜೆ ಮೇಳ,ತಿಕೋಟಾದ ಇಮಾಮಹುಸೇನ ರಿವಾಯಿತ ಮೇಳ, ಗುಡದಿನ್ನಿಯ ಲಾಲಸಾಬ ರಿವಾಯಿತ ಮೇಳ, ತಿಗಣಿಬಿದರಿಯ ಬಸವೇಶ್ವರ ರಿವಾಯಿತ ಮೇಳದಿಂದ ರಿವಾಯಿತ ಪದಗಳು ಜರುಗಲಿವೆ ಎಂದರು.
ಮಾ.೨೧ ರಂದು ಬೆಳಗ್ಗೆ ೯ ಗಂಟೆಗೆ ೫೫ ಎಚ್‌ಪಿ ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ ನಡೆಯಲಿದೆ. ರಾತ್ರಿ ೧೦.೩೦ ಗಂಟೆಗೆ ನಾಗೂರಿನ ಯಮನೂರೇಶ್ವರ ನಾಟ್ಯ ಸಂಘದಿಂದ ಕಲಿಯುಗದಲ್ಲಿ ಘರ್ಜಿಸಿದ ಕರ್ಣಾಜುನ ಸಾಮಾಜಿಕ ನಾಟಕ ಎರಡನೇ ಪ್ರಯೋಗ ಪ್ರದರ್ಶನಗೊಳ್ಳಲಿದೆ ಎಂದ ಅವರು, ಮಾ.೨೨ ರಂದು ನಾಗೂರ ಗ್ರಾಮದ ಗೆಳೆಯರ ಬಳಗದಿಂದ ಸಂಜೆ ೪ ಗಂಟೆಗೆ ಹೊನಲು ಬೆಳಕಿನ ಕಬಡ್ಡಿ ಟೂರ್ನಾಮೆಂಟ್ ನಡೆಯಲಿದೆ. ರಾತ್ರಿ ೯ ಗಂಟೆಗೆ ನಾಗರಿನ ಯಮನೂರೇಶ್ವರ ಆರ್ಕೆಸ್ಟ್ರಾ ಮೊಲೋಡಿಸ್‌ದಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಜಾತ್ರೆ ನಡೆಯುವ ಐದು ದಿನಗಳ ಕಾಲ ಪ್ರತಿದಿನ ಅನ್ನಸಂತರ್ಪಣೆ ಇರುತ್ತದೆ. ಸರ್ವ ಸದ್ಭಕ್ತರು ಜಾತ್ರೆಗೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು. ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಸದಸ್ಯರಾದ ಹೈದರ ಚಪ್ಪರಬಂದ, ಧರ್ಮಣ್ಣ ಪೂಜಾರಿ, ಮುಖಂಡರಾದ ಚಂದ್ರಶೇಖರ ಮರೋಳ, ಚಂದ್ರಶೇಖರ ಮುಳವಾಡ, ಶರಣು ಮರೋಳ, ವೈ.ಎಚ್.ಅಂಗಡಗೇರಿ, ಶಂಕ್ರೆಪ್ಪ ಪೂಜಾರಿ, ಅಮರಯ್ಯ ಹಿರೇಮಠ ಇದ್ದರು.

