ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಈ ಬೇಸಿಗೆಯಲ್ಲಿ ಬಿಸಿಲು ಹೆಚ್ಚಾಗಿದ್ದು, ಪಕ್ಷಿಗಳು ನೀರಿಗಾಗಿ ಪರದಾಡುತ್ತಿವೆ. ಅವುಗಳಿಗೆ ನೀರು ಒದಗಿಸುವ ಮೂಲಕ ಅವುಗಳ ದಾಹ ತೀರಿಸುವುದು ನಮ್ಮೆಲ್ಲರ ಕರ್ತವ್ಯ. ಪಕ್ಷಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಕಲ್ಪಿಸುವ ಮೂಲಕ ಪ್ರಶಿಕ್ಷಣಾರ್ಥಿಗಳು ಮಾನವೀಯತೆ ಮೆರೆದಿದ್ದಾರೆ. ವಿದ್ಯಾರ್ಥಿಗಳ ಈ ಕಾರ್ಯ ಶ್ಲಾಘನೀಯ ಎಂದು ಪ್ರಾಚಾರ್ಯೆ ಜೆ.ಸಿ.ನಂದಿಕೋಲ ಹೇಳಿದರು.
ಸಿಂದಗಿ ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಪ್ರಶಿಕ್ಷಣಾರ್ಥಿಗಳು ಸುತ್ತಮುತ್ತಿನ ಪ್ರದೇಶಗಳಲ್ಲಿ ಪಕ್ಷಿಗಳಿಗೆ ನೀರಿನ ತೊಟ್ಟಿಗಳನ್ನು ಅಳವಡಿಸಿ ಬಳಿಕ ಮಾತನಾಡಿದ ಅವರು, ಪ್ರಶಿಕ್ಷಣಾರ್ಥಿಗಳು ಮತ್ತು ಉಪನ್ಯಾಸಕರು ಸೇರಿಕೊಂಡು ಕಾಲೇಜಿನ ಆವರಣದಲ್ಲಿ ವಿವಿಧ ಸ್ಥಳಗಳಲ್ಲಿ ನೀರಿನ ತೊಟ್ಟಿಗಳನ್ನು ಇರಿಸಲಾಗಿದ್ದು, ಪಕ್ಷಿಗಳು ಬಾಯಾರಿದಾಗ ಅನುಕೂಲವಾಗುವಂತೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ದಾನ್ಯ ಹಾಕುವ ಕಾರ್ಯದ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಪ್ರತಿದಿನ ಈ ತೊಟ್ಟಿಗಳಿಗೆ ನೀರು ತುಂಬಿಸಿ ಪಕ್ಷಿಗಳ ದಾಹ ತೀರಿಸುತ್ತಿದ್ದಾರೆ ಎಂದರು.
ಈ ವೇಳೆ ಉಪನ್ಯಾಸಕರಾದ ಡಿ.ಎಸ್.ಮಠಪತಿ, ಪಿ.ಸಿ.ಕುಲಕರ್ಣಿ, ಸುಧಾಕರ ಚವ್ಹಾಣ, ಆರ್.ಎ.ಹಾಲಕೇರಿ, ಚನ್ನು ಕತ್ತಿ, ಶಿವುಕುಮಾರ ಕತ್ತಿ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ಪ್ರಶಿಕ್ಷಣಾರ್ಥಿಗಳು ಇದ್ದರು.

