ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಏ.೬ ರವರೆಗೆ ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕಾಲುವೆಗಳ ಜಾಲಕ್ಕೆ ನೀರು ಹರಿಸಲು ಬೆಂಗಳೂರಿನಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಜರುಗಿದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಮಾ.೧೪ ರಂದು ಆಲಮಟ್ಟಿ, ನಾರಾಯಣಪುರ ಜಲಾಶಯಗಳಲ್ಲಿ ಒಟ್ಟು ಬಳಕೆಗೆ ೩೫.೮೯೩ ಟಿಎಂಸಿ ನೀರಿದೆ. ಕಳೆದ ಸಾಲಿಗೆ ಹೋಲಿಸಿದಾಗ ಲಭ್ಯವಿರುವ ನೀರಿನ ಪ್ರಮಾಣ ೫.೭೧೧ ಟಿಎಂಸಿ ಹೆಚ್ಚಿಗಿದೆ. ೧೪/೩/೨೦೨೫ ರಿಂದ ೩೦/೬/೨೦೨೫ ರವರೆಗೆ ಅವಶ್ಯ ಬಳಕೆಗೆ ಬೇಕಾಗಿರುವ ನೀರು ೨೫.೭೦ ಟಿಎಂಸಿ.
ರೈತರ ಒತ್ತಡದ ಹಿನ್ನಲೆಯಲ್ಲಿ ಮಾ.೧೪ ರಂದು ಐಸಿಸಿ ಮತ್ತೊಮ್ಮೆ ಸಭೆ ಸೇರಿ ರೈತರ ಬೇಡಿಕೆಗೆ ಸ್ಪಂದಿಸಿದೆ.
೩೦/೬/೨೦೨೫ ರವರೆಗೆ ಅಗತ್ಯವಿರುವ ಕುಡಿಯುವ ನೀರು, ಕೆರೆ ತುಂಬುವುದು ಹಾಗೂ ಇತ್ಯಾದಿ ಬಳಕೆಗೆ ೨೫.೮೦ ಟಿಎಂಸಿ ಕಾಯ್ದಿರಿಸಿಕೊಂಡು ೧೫/೩/೨೦೨೫ ರಿಂದ ೨೨/೩/೨೦೨೫ ರವರೆಗೆ ೮ ದಿನಗಳಿಗೆ ಹಾಗೂ ಏ.೧ ರಿಂದ ಏ.೬ ರವರೆಗೆ ನಿತ್ಯ ಕಾಲುವೆಗೆ ೦.೮ ಟಿಎಂಸಿ ನೀರು ಹರಿಸಲು ಸಭೆ ತೀರ್ಮಾನಿಸಿದೆ. ೨೩/೩/೨೦೨೫ ರಿಂದ ೩೧/೩/೨೦೨೫ ರವರೆಗೆ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಲು ನಿರ್ಧರಿಸಲಾಗಿದೆ.
ಸಭೆಯಲ್ಲಿ ಸಚಿವರಾದ ಶಿವಾನಂದ ಪಾಟೀಲ, ಎಂ.ಬಿ. ಪಾಟೀಲ, ಸಂಸದ ರಾಧಾಕೃಷ್ಣ ದೊಡಮನಿ, ಶಾಸಕರಾದ ಸಿ.ಎಸ್. ನಾಡಗೌಡರ, ಅಜಯ ಧರ್ಮಸಿಂಗ್, ರಾಜಾವೇಣುಗೋಪಾಲ ನಾಯಕ, ಕೆಬಿಜೆಎನ್ ಎಲ್ ಎಂಡಿ ಕೆ.ಪಿ.ಮೋಹನರಾಜ್ ಸೇರಿದಂತೆ ಕೃಷ್ಣಾ ಭಾಗ್ಯ ಜಲ ನಿಗಮ, ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.
