ವಿಜಯಪುರದಲ್ಲಿ ವಿಶ್ವ ಗ್ರಾಹಕರ ದಿನ ಆಚರಣೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಕರೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಯಾವುದೇ ವಸ್ತು ಖರೀದಿಸುವಾಗ ಗ್ರಾಹಕರು ಮೋಸಗಳಿಗೆ ಒಳಗಾಗದೇ, ಜಾಹೀರಾತುಗಳಿಗೆ ಮರುಳಾಗದೇ ಗುಣಮಟ್ಟದ ಹಾಗೂ ನಿಗದಿತ ಬೆಲೆಯಲ್ಲಿ ವಸ್ತುವನ್ನು ಖರೀದಿಸುವ ಮೂಲಕ ಪ್ರತಿಯೊಬ್ಬರು ಜಾಗೃತರಾಗಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಹೇಳಿದರು.
ಶನಿವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುಸ್ಥಿರ ಜೀವನಶೈಲಿಗೆ ಒಂದು ಸರಳ ಪರಿವರ್ತನೆ ಎನ್ನುವ ಘೋಷವಾಕ್ಯದೊಂದಿಗೆ ಹಮ್ಮಿಕೊಂಡ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಹಕರ ಹಕ್ಕುಗಳ ಕಾಯ್ದೆ ಜ್ಯಾರಿಯಾದ ಕಾರಣ ಸಹಿತ ವಿವರಿಸಿ ಪ್ರತಿಯೊಂದು ಗ್ರಾಹಕರು ಮೋಸಕ್ಕೊಳಗಾಗದಂತೆ ಎಚ್ಚರಿಕೆಯನ್ನು ವಹಿಸಿ ವ್ಯವಹರಿಸಬೇಕು. ಅಲ್ಲದೇ ಯಾವುದೇ ವಸ್ತುಗಳನ್ನು ಖರೀದಿಸಿದರೆ ಗರಿಷ್ಟ ಚಿಲ್ಲರೆ ದರಕ್ಕಿಂತ ಹೆಚ್ಚಿಗೆ ಪಾವತಿ ಮಾಡಬಾರದು. ಗ್ರಾಹಕ ಎಚ್ಚೆತ್ತುಕೊಂಡು ಮೋಸ ಹೋಗದಂತೆ ಎಚ್ಚರಿಕೆಯನ್ನು ವಹಿಸಿ ವ್ಯವಹರಿಸಿದಲ್ಲಿ ಸುಸ್ಥಿರ ಜೀವನಶೈಲಿಗೆ ಸರಳ ಪರಿವರ್ತನೆಯಾದಂತೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯಪುರದ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಎಸ್ ಹಾಗರಗಿ ಅವರು ಮಾತನಾಡಿ, ಗ್ರಾಹಕರಿಗೆ ಇರುವ ಹಕ್ಕುಗಳು ಮತ್ತು ಪ್ರಸ್ತುತ ಗ್ರಾಹಕರ ಕಾಯ್ದೆಯಡಿ ಇರುವ ಸೇವಾ ಇಲಾಖೆಗಳು, ಹಕ್ಕುಗಳು, ಕರ್ತವ್ಯಗಳ ಕುರಿತು ಪ್ರತಿಯೊಂದು ಗ್ರಾಹಕರು ಅರಿತುಕೊಳ್ಳಬೇಕು. ಮೋಸಕ್ಕೊಳಗಾದ ಸಂದರ್ಭದಲ್ಲಿ ಮೊಸಕ್ಕೊಳಗಾದ ಗ್ರಾಹಕರು ಅಗತ್ಯ ದಾಖಲಾತಿಗಳನ್ನು ನೀಡಿ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಿ ಪರಿಹಾರ ಪಡೆದುಕೊಳ್ಳಲು ಅವಕಾಶವಿದೆ ಎಂದು ಅವರು ಹೇಳಿದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಹಿರಿಯ ನ್ಯಾಯವಾದಿ ಎಂ. ಜಿ ಮಠಪತಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸಕರಾಗಿ ಗದಗದಿಂದ ಆಗಮಿಸಿದ ನಿವೃತ್ತ ವಿಜ್ಞಾನ ಶಿಕ್ಷಕರಾದ ರಾಮಚಂದ್ರ ಮೋನೆ ಆಹಾರ ಸುರಕ್ಷತೆಯ ಕುರಿತು ಪಿಪಿಟಿ ಚಿತ್ರಣ ಮೂಲಕ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಪುರ ಜಿಲ್ಲಾ ಗ್ರಾಹಕರ ದೂರು ಪರಿಹಾರ ಆಯೋಗದ ಪ್ರಭಾರ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಗಲಗಲಿ (ಮುತಾಲಿಕ ದೇಸಾಯಿ) ವಹಿಸಿದ್ದರು. ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಾಮದೇವ ಚವ್ಹಾಣ ವಂದಿಸಿದರು. ಎಸ್ ಎಂ ಕರೇಕಲ್ಲ, ಡಿ.ಆರ್ ನಾಯ್ಕೋಡಿ, ಡಿ.ಆರ್ ಚೌಗಲಾ ಸೇರಿದಂತೆ ಆಹಾರ ಇಲಾಖೆ ಮತ್ತು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿ-ಸಿಬ್ಬಂದಿಗಳು ಉಪಸ್ಥಿತರಿದ್ದರು.

