ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೃಷ್ಣಾ ಭಾಗ್ಯ ಜಲ ನಿಗಮದ ಆಣೆಕಟ್ಟು ವೃತ್ತದಡಿ ಬರುವ ಆಲಮಟ್ಟಿ ಎಡದಂಡೆ ಕಾಲುವೆ, ಚಿಮ್ಮಲಗಿ ಏತ ನೀರಾವರಿ ಪಶ್ಚಿಮ ಕಾಲುವೆ, ಆಲಮಟ್ಟಿ ಬಲದಂಡೆ ಕಾಲುವೆ, ತಿಮ್ಮಾಪೂರ ಏತ ನೀರಾವರಿ ಯೋಜನೆಯ ಡಿಸಿ-೧ ಮತ್ತು ಡಿಸಿ-೨ರ ಕಾಲುವೆ, ಮರೋಳ ಏತ ನೀರಾವರಿ ಹಂತ-೧ರ ಪೂರ್ವ ಮತ್ತು ಪಶ್ಚಿಮ ಕಾಲುವೆ ಜಾಲಕ್ಕೆ ಹಿಂಗಾರು ಹಂಗಾಮಿಗೆ ಚಾಲು-ಬಂದ ಅನುಸಾರ ನೀರನ್ನು ಹರಿಸುವ ಅವಧಿಯನ್ನು ವಿಸ್ತರಿಸಲಾಗಿದೆ.
ದಿನಾಂಕ : ೧೪-೦೩-೨೦೨೫ರಂದು ಜರುಗಿದ ೨೦೨೪-೨೫ನೇ ಸಾಲಿನ ಹಿಂಗಾರು ಹಂಗಾಮಿನ ಮುಂದುವರೆದ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ, ದಿನಾಂಕ : ೧೫-೦೩-೨೦೨೫ ರಿಂದ ೨೨-೦೩-೨೦೨೫ರವರೆಗೆ ೮ ದಿನ ಹಾಗೂ ದಿನಾಂಕ : ೦೧-೦೪-೨೦೨೫ ರಿಂದ ೦೬-೦೪-೨೦೨೫ ರವರೆಗೆ ೦೬ ದಿನಗಳ ಕಾಲ ಚಾಲೂ ಹಾಗೂ ದಿನಾಂಕ : ೨೩-೦೩-೨೦೨೫ ರಿಂದ ೩೧-೦೩-೨೦೨೫ರವರೆಗೆ ೦೯ ದಿನಗಳ ಕಾಲ ಬಂದ ಪದ್ಧತಿಯನುಸಾರವಾಗಿ ಕಾಲುವೆ ಜಾಲಗಳಿಗೆ ನೀರು ಹರಿಸಲಾಗುವುದು.
ಜೀವ ಜಲ ಅತಿ ಅಮೂಲ್ಯವಾಗಿದ್ದು, ಪೋಲು ಮಾಡದೇ, ಹಿತವಾಗಿ, ಮಿತವಾಗಿ ಬಳಸುವುದರೊಂದಿಗೆ ಯೋಜನಾ ವ್ಯಾಪ್ತಿಯ ಕಾಲುವೆಗಳಲ್ಲಿ ಬೆಳೆದು ನಿಂತಿರುವ ಲಘು ನೀರಾವರಿ ಬೆಳೆಗಳನ್ನು ಸಂರಕ್ಷಿಸಲು ಮಾತ್ರ ನೀರನ್ನು ಬಳಸಿಕೊಳ್ಳುವ ಮೂಲಕ ರೈತರು ಸಹಕರಿಸುವಂತೆ ಕೃಷ್ಣಾ ಭಾಗ್ಯ ಜಲಗನಿಗಮದ ಆಣೆಕಟ್ಟು ವೃತ್ತದ ಅಧೀಕ್ಷಕ ಅಭಿಯಂತರರು ಮನವಿ ಮಾಡಿಕೊಂಡಿದ್ದಾರೆ.
