ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುರಿಗಾಹಿ ಶರಣಪ್ಪ ಜಮ್ಮನಕಟ್ಟಿ ಹತ್ಯೆ ಖಂಡಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಮತ್ತು ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆಯ ಪದಾಧಿಕಾರಿಗಳು ಇಲ್ಲಿನ ತಹಸೀಲ್ದಾರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಸಂಘಟನೆಯ ಅಧ್ಯಕ್ಷರಾದ ಮುತ್ತು ಟಕ್ಕಳಕಿ ಮಾತನಾಡಿ, ರಾಜ್ಯಾದ್ಯಂತ ರೈತ ಸಮುದಾಯ, ಶೋಷಿತ ಸಮುದಾಯ ಹಾಗೂ ಹಿಂದುಳಿದ ವರ್ಗದವರು ಕುರಿಗಾರಿಕೆ ಮತ್ತು ಪಶುಸಂಗೋಪನೆ ಮೂಲಕ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವುದು ಸಾಂಪ್ರದಾಯಿಕ ಕಸುಬಾಗಿದೆ. ಬೆಟ್ಟ ಗುಡ್ಡಗಳನ್ನು ಒಳಗೊಂಡಂತೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ಥಳೀಯವಾಗಿ ಹಾಗೂ ಸಂಚರಿಸುವ ಮೂಲಕ ಪಾಲನೆ ಮಾಡುತ್ತಿದ್ದು, ಬಡವರ ಪಾಲಿಗೆ ಕುರಿಗಾರಿಕೆ ಹಾಗೂ ಪಶುಪಾಲನೆ ವರದಾನವಾಗಿದೆ. ರಾಜ್ಯದಲ್ಲಿ ಕುರಿಗಾರರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಮಾರ್ಚ ೯. ೨೦೨೫ ರಂದು ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದ ಕುರಿಗಾಹಿ ಶರಣಪ್ಪ ಜಮ್ಮನಕಟ್ಟಿ ಮೇಲೆ ಕುರಿ ಕಳ್ಳತನ ಮಾಡುವ ಗುಂಪು ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಈ ಹತ್ಯೆ ಮಾಡಿದ ದುಷ್ಕರ್ಮಿಗಳಿಗೆ ಕಠಿಣವಾದ ಶಿಕ್ಷೆಯನ್ನು ವಿಧಿಸುವುದರ ಜೊತೆಗೆ ಮೃತನ ಕುಟುಂಬಕ್ಕೆ ೨೦ ಲಕ್ಷ ಆರ್ಥಿಕ ನೆರವು ನೀಡಬೇಕೆಂದು ಆಗ್ರಹಿಸಿದರು.
ಮುತ್ತು ಹಾಲ್ಯಾಳ ಮಾತನಾಡಿ ಈ ಹಿಂದೆ ೨೦೨೨ ರಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಶ್ರೀಮತಿ ಲಕ್ಷ್ಮೀ ಕಳ್ಳಿಮನಿ ಎಂಬ ಕುರಿಗಾಹಿ ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದು, ಕುರಿ ಕಳ್ಳತನ ಮಾಡುವ ಉದ್ದೇಶದಿಂದ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಪ್ರಭು ಮೇತ್ರೆ ಅವರನ್ನು ಕೊಲೆ ಮಾಡಿರುವಂತ ನಿದರ್ಶನಗಳು ಮಾನವೀಯತೆಯನ್ನು ಪ್ರಶ್ನಿಸುತ್ತವೆ. ಗುಡ್ಡಗಾಡಿನಲ್ಲಿ ಕುರಿ ಮೇಯಿಸಲು ಹೋದಾಗ ಅರಣ್ಯ ಇಲಾಖೆ ಅಧಿಕಾರಿಗಳಿಂದ ನಿರಂತರ ಕಿರುಕುಳ, ದೌರ್ಜನ್ಯಕ್ಕೆ ಒಳಗಾಗುತ್ತಿದ್ದು ಇಂತಹ, ಅಸಂಖ್ಯಾತ ಪ್ರಕರಣಗಳು ಬೆಳಕಿಗೆ ಬಂದಿರುವುದಿಲ್ಲ. ಪ್ರಾಚೀನ ಹಾಗೂ ಸ್ವತಂತ್ರಪೂರ್ವ ಕಾಲದಿಂದಲೂ ಅರಣ್ಯ ಪ್ರದೇಶದಲ್ಲಿ, ಬೆಟ್ಟ ಗುಡ್ಡಗಳಲ್ಲಿ ಕುರಿಗಾರಿಕೆಯನ್ನು ಮಾಡಿಕೊಂಡು ಬಂದಿರುವ ಜನರಿಗೆ ಇಂದು ಆಯಾ ಪ್ರದೇಶದಲ್ಲಿ ಬದುಕುವ ಹಕ್ಕಿನ ಜೊತೆಗೆ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಪರ ಮುಖ್ಯಮಂತ್ರಿ ಎಂದು ಹೇಳುವ ಸಿದ್ದರಾಮಯ್ಯನವರ ಸರಕಾರ ಕೋಮಾಸ್ಥಿಯಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನಿಲ ವಾಲಿಕಾರ, ಜುಮಣ್ಣ ಹೊಕ್ರಾಣಿ, ಮಾಳಿಂಗರಾಯ ಯರಝರಿ, ಶಿವು ವನಕ್ಯಾಳ, ಮುತ್ತು ನಾಡಗೌಡ, ದೇವು ವಾಲಿಕಾರ, ಸಿದ್ರಾಯ ಬಿರಾದಾರ, ರವಿ ಮೇಟಿ, ಶಿವು ಕವಡಿಮಟ್ಟಿ, ಮಲ್ಲು ಹಿರೇಕುರುಬರ, ಹಣಮಂತ ಪೂಜಾರಿ, ನಿಂಗಪ್ಪ ಬಂಡೆಪ್ಪನಹಳ್ಳಿ, ದ್ಯಾಮಣ್ಣ ಹಿರೇಕುರುಬರ, ಮುತ್ತು ಹಾಲ್ಯಾಳ, ದ್ಯಾಮಣ್ಣ ಶಿವಪುರ ಸೇರಿದಂತೆ ಇತರರು ಇದ್ದರು.