ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ರಸ್ತೆಯ (ಅಥಣಿ ರಸ್ತೆ) ನಮೋ ನಗರದಲ್ಲಿ ಪ್ರಧಾನಮಂತ್ರಿ ಅವಾಸ ಯೋಜನೆಯ ಎ.ಎಚ್.ಪಿ ಉಪಘಟಕದಡಿ ನಿರ್ಮಾಣಗೊಂಡಿರುವ ಆಶ್ರಯ ಮನೆಗಳ ಫಲಾನುಭವಿಗಳಿಗೆ ಅಂತಿಮ ಹಕ್ಕು ಪತ್ರ ಹಾಗೂ ತಾತ್ಕಾಲಿಕ ಹಂಚಿಕೆ ಪತ್ರಗಳ
ವಿತರಣಾ ಸಮಾರಂಭ ಮಾ.15 ರಂದು ಸಂಜೆ 4 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ನಗರ ಶಾಸಕರು ಹಾಗೂ ನಗರ ಮತಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಹಂಚಿಕೆ ಪತ್ರಗಳನ್ನು ವಿತರಿಸಲಿದ್ದಾರೆ.
ನಗರ ಮತಕ್ಷೇತ್ರ ವ್ಯಾಪ್ತಿಯ ಬಡವರಿಗೆ ಸ್ವಂತ ಸೂರು ಕಲ್ಪಿಸಲು ನಮೋ ನಗರದಲ್ಲಿ ಜಿ+1 ಮಾದರಿಯಲ್ಲಿ ಒಟ್ಟು 1,493 ಮನೆಗಳು ನಿರ್ಮಾಣಗೊಳ್ಳುತ್ತಿದ್ದು, ಈಗಾಗಲೇ ಕಾಮಗಾರಿ ಪೂರ್ಣಗೊಂಡ 300 ಮನೆಗಳ ಫಲಾನುಭವಿಗಳಿಗೆ ತಾತ್ಕಾಲಿಕ ಹಂಚಿಕೆ ಪತ್ರಗಳನ್ನು ನೀಡಲಾಗಿದ್ದು, ಅವರಿಗೆ ಈಗ ಅಂತಿಮ ಹಕ್ಕು ಪತ್ರ ನೀಡಲಾಗುತ್ತಿದೆ. ಮತ್ತೆ 411 ಮನೆಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಪೂರ್ಣ ಪ್ರಮಾಣದಲ್ಲಿ ಹಾಗೂ ಭಾಗಶಃ ವಂತಿಗೆ ತುಂಬಿರುವ 411 ಫಲಾನುಭವಿಗಳಿಗೆ ತಾತ್ಕಾಲಿಕ ಹಂಚಿಕೆ ಪತ್ರಗಳನ್ನು ವಿತರಿಸಲಾಗುತ್ತದೆ. ಉಳಿದ ಮನೆಗಳ ನಿರ್ಮಾಣ ಕಾರ್ಯ ಕೂಡ ಪ್ರಗತಿಯಲ್ಲಿದ್ದು, ಹಂತ ಹಂತವಾಗಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು.
ಇದೇ ಸಮಾರಂಭದಲ್ಲಿ ನಗರದ ಇಬ್ರಾಹಿಂಪುರ, ಭಜಂತ್ರಿ ಓಣಿ ಕೊಳಗೇರಿ ಪ್ರದೇಶದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು ಭಾಗವಹಿಸಲಿದ್ದಾರೆ
ಎಂದು ನಗರ ಶಾಸಕರ ಸಾರ್ವಜನಿಕರ ಸಂಪರ್ಕ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.