ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸಂಪಾದಿಸಿದ ಆಸ್ತಿ, ಅಂತಸ್ತು, ಸಂಪತ್ತನ್ನು ಯಾರಾದರೂ ಕದಿಯಬಹುದು ಆದರೆ ಮನುಷ್ಯನಲ್ಲಿರುವ ವಿದ್ಯೆಯನ್ನು ಯಾರೂ ಕದಿಯಲು ಸಾಧ್ಯವಿಲ್ಲ ಎಂದು ಹಿರಿಯ ಸಾಹಿತಿ, ೫ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಅಶೋಕ ಮಣಿ ಹೇಳಿದರು.
ಪಟ್ಟಣದ ಬಸವನಗರದಲ್ಲಿರುವ ಬಸವ ಗಾರ್ಡನ್ ನಲ್ಲಿ ಪ್ರೇರಣಾ ಕಿಂಟರ್ ಗಾರ್ಟನ್ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯುಕೆಜಿ ಮಕ್ಕಳ ಘಟಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ದೇಶದ ಆಸ್ತಿ. ಪಾಲಕರು ಮಕ್ಕಳ ಎದುರು ಯಾವುದೇ ದುಷ್ಚಟಗಳನ್ನು ಮಾಡಬಾರದು. ಮಕ್ಕಳಲ್ಲಿ ಅನುಕರಣೆಯ ಸ್ವಭಾವ ಇರುತ್ತೆ. ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು ಎಂಬುದನ್ನು ಯಾರೊಬ್ಬ ಪಾಲಕರು ಮರೆಯಬಾರದು ಎಂದರು.
ಮುಖ್ಯ ಅತಿಥಿಯಾಗಿದ್ದ ನ್ಯಾಯವಾದಿ ಹಾಗೂ ಪತ್ರಕರ್ತ ಚೇತನ ಶಿವಶಿಂಪಿ ಮಾತನಾಡಿ, ದಿನ ಬೆಳಗಾದರೆ ಸಾಕು ಪತ್ರಿಕೆಗಳಲ್ಲಿ ವಿದ್ಯಾರ್ಥಿಗಳು ದಾರಿ ತಪ್ಪಿದ ಬಗ್ಗೆ ಮತ್ತು ವಿದ್ಯಾರ್ಥಿಗಳು ರಾಜ್ಯವೇ ತಮ್ಮತ್ತ ತಿರುಗಿ ನೋಡುವತ್ತ ಸಾಧನೆ ಮಾಡಿದ ಬಗ್ಗೆ ವರದಿಯಾಗಿರುತ್ತವೆ. ವಿದ್ಯಾರ್ಥಿಗಳ ಸಾಧನೆಯ ಹಿಂದೆ ಮತ್ತು ದಾರಿ ತಪ್ಪುವ ಈ ಎರಡೂ ಘಟನೆಗಳ ಹಿಂದೆ ಪಾಲಕರ ಪಾತ್ರ ಇರುತ್ತೆ. ನಿಮ್ಮ ಮಗು ಸಮಾಜದಲ್ಲಿ ತಲೆ ಎತ್ತಿ ಗೌರವದಿಂದ ಬದುಕಬೇಕಾದರೆ ಶಾಲೆಗಳ ಮತ್ತು ಶಿಕ್ಷಕರಿಗಿಂತ ಪಾಲಕರ ಪಾತ್ರ ದೊಡ್ಡದು ಎನ್ನುವದನ್ನು ಪಾಲಕರು ಅರಿಯಬೇಕು. ಮನೆಯಿಂದ ಬರುವ ವಿದ್ಯೆ ಯಾವ ಶಾಲೆಯಲ್ಲೂ, ಮಠದಲ್ಲೂ ದೇವಸ್ಥಾನದಲ್ಲೂ ಸಿಗಲು ಸಾಧ್ಯವಿಲ್ಲ. ನಿಮ್ಮ ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ನೀಡಲು ಎಲ್ಲ ಪಾಲಕರು ಮುಂದಾಗಬೇಕು ಎಂದರು.
ಪ್ರೇರಣಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋತಿಲಾಲ ಕಲಾಲ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯಕಮಕ್ಕಳ, ಸದಸ್ಯ ರಪೀಕ ದ್ರಾಕ್ಷಿ, ನಾಮ ನಿರ್ದೇಶಿತ ಸದಸ್ಯ ಹರೀಶ ಬೆವೂರ, ಪ್ರಮುಖರಾದ ಯಶವಂತ ಕಲಾಲ, ರಫೀಕ ಢವಳಗಿ, ಶ್ರೀಕಾಂತ ಹಿರೇಮಠ, ಗೋಪಾಲ ಕಲಾಲ, ಸುರೇಶ ಕಲಾಲ, ಮಲ್ಲು ಕಡಿ, ಶಾಲೆಯ ಮುಖ್ಯ ಗುರುಮಾತೆ ವಿಜಯಲಕ್ಷ್ಮಿ ಬಡಿಗೇರ ಶಿಕ್ಷಕರಾದ ಸಭಾಪರವೀನ ತುರಕನಗೇರಿ, ಮಧು ಹಾದಿಮನಿ, ತಹರೀನ ಬಾಗಲಕೋಟ, ಶಿಲ್ಪಾ ಪತ್ತಾರ, ಗಂಗಾ ಜಿ, ಪಾರ್ವತಿ ಹುರಕಡ್ಲಿ ಸೇರಿದಂತೆ ಇತರರು ಇದ್ದರು. ಸಂಸ್ಥೆಯ ಆಡಳಿತಾಧಿಕಾರಿ ಚಂದ್ರಶೇಖರ ಕಲಾಲ ಸ್ವಾಗತಿಸಿದರು. ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಮಧುಮತಿ ಕಲಾಲ ವಂದಿಸಿದರು. ಹಾಸ್ಯ ಕಲಾವಿದ ಗೋಪಾಲ ಹೂಗಾರ ಕಾರ್ಯಕ್ರಮ ನಿರ್ವಹಿಸಿದರು. ಘಟಿಕೋತ್ಸವ ಉಡುಗೆಯಲ್ಲಿದ್ದ ಪುಠಾಣಿ ಮಕ್ಕಳು ಮತ್ತು ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆದವು.