ವಿಧಾನ ಪರಿಷತ್ ವಿರೋಧ ಪಕ್ಷದ ಮಾಜಿ ನಾಯಕ ಎಸ್ ಆರ್ ಪಾಟೀಲ ಒಡೆತನದ ಕಾರ್ಖಾನೆ
ಉದಯರಶ್ಮಿ ದಿನಪತ್ರಿಕೆ
ವರದಿ: ಈರಯ್ಯ ಗಣಕುಮಾರ
ಕೊಲ್ಹಾರ: ರಾಜ್ಯದ ಪ್ರತಿಷ್ಠಿತ ವಿಧಾನ ಪರಿಷತ್ತಿನ ಮಾಜಿ ವಿರೋಧ ಪಕ್ಷದ ನಾಯಕರು ಹಾಗೂ ಬಾಪೂಜಿ ಶಿಕ್ಷಣ ಸಂಸ್ಥೆ, ಬಾಪೂಜಿ ಸೌಹಾರ್ದ ಸಹಕಾರಿ ಬ್ಯಾಂಕ್ ಹಾಗೂ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷರು ಹಾಗೂ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ ಎಸ್ ಆರ್ ಪಾಟೀಲ್ ಒಡೆತನದ ಬೀಳಗಿ ಶುಗರ್ ಮಿಲ್ ಲಿಮಿಟೆಡ್ ಬಾಡಗಂಡಿ ಸಕ್ಕರೆ ಕಾರ್ಖಾನೆಯ ವಿಷಯುಕ್ತ ನೀರು ಪಕ್ಕದ ನದಿ ಕೃಷ್ಣೆಯ ಒಡಲನ್ನು ಸೇರಿ ಲಕ್ಷಾಂತರ ಜಲಜೀವ ರಾಶಿ ಮತ್ತು ಜಾನುವಾರುಗಳು ಸೇರಿದಂತೆ ಲಕ್ಷಾಂತರ ಜನರ ಆರೋಗ್ಯದ ಮೇಲೆ ಮತ್ತು ಅಕ್ಕಪಕ್ಕದ ರೈತರ ಜಮೀನುಗಳಲ್ಲಿ ಬೆಳೆಯುವ ಬೆಳೆಗಳ ಮೇಲೆ ಪರಿಣಾಮ ಬೀರುತ್ತಿದೆ. ಈಗಾಗಲೇ ಸಾರ್ವಜನಿಕರು ತಹಶೀಲ್ದಾರರಿಗೆ ದೂರು ಸಲ್ಲಿಸಿರುತ್ತಾರೆ.
ಪಕ್ಕದ ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿ ಮತ್ತು ರೋಳ್ಳಿ ಗ್ರಾಮಗಳ ಮಧ್ಯೆ ಬರುವ ಎಸ್ ಆರ್ ಪಾಟೀಲರ ಒಡೆತನದ ಬೀಳಗಿ ಶುಗರ್ ಮಿಲ್ ಸಕ್ಕರೆ ಕಾರ್ಖಾನೆ ಪ್ರಾರಂಭಗೊಂಡು ಸುಮಾರು 15 ವರ್ಷ ಕಳೆದಿದೆ. ಈ ಸಕ್ಕರೆ ಕಾರ್ಖಾನೆಯ ಕಲುಷಿತ ವಿಷಯುಕ್ತ ನೀರು ಸಕ್ಕರೆ ಕಾರ್ಖಾನೆಯ ಪಕ್ಕದಲ್ಲಿರುವ ಹಳ್ಳದ ಮೂಲಕ ಕೃಷ್ಣೆಮಾತೆಯ ಒಡಲನ್ನು ಸೇರುತ್ತಿದೆ ಹಾಗೂ ಹಳ್ಳದ ಮಧ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ ವಿಜಯಪುರ 218 ಮೇಲೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇದರಲ್ಲಿ ಪ್ರಯಾಣಿಸುವ ಜನರು ಈ ಹಳ್ಳದ ಸೇತುವೆ ಬಂದ ತಕ್ಷಣ ಮೂಗು ಮುಚ್ಚಿಕೊಂಡು ಈ ಸಕ್ಕರೆ ಕಾರ್ಖಾನೆ ಅವರಿಗೆ ಹಿಡಿ ಶಾಪವನ್ನು ಹಾಕುತ್ತಾ ಸಾಗುತ್ತಾರೆ. ಇನ್ನು ಕೃಷ್ಣಾ ನದಿಯಲ್ಲಿ ಈ ನೀರು ವಿಲೀನಗೊಂಡು ಆ ನದಿಯ ದಡದಲ್ಲಿ ಪೂರ್ಣ ಕೊಳೆತು ಗಬ್ಬು ವಾಸನೆಯಿಂದ ಯಾರಿಗೂ ಒಂದು ಕ್ಷಣವು ಕೂಡ ಅಲ್ಲಿನಿಲ್ಲದ ಪರಿಸ್ಥಿತಿ ಇದೆ, ಹೆಚ್ಚಾಗಿ ಇದು ಪರಿಣಾಮ ಬೀರುವುದು ಕೃಷ್ನಾನದಿಗೆ ನಿರ್ಮಿಸಿದ ಈ ಕೊರ್ತಿ ಕೊಲ್ಹಾರ ಸೇತುವೆ ಕೆಳಭಾಗದಲ್ಲಿ ಬರುವ ಹಾಗೂ ಆಲಮಟ್ಟಿ ಅಣೆಕಟ್ಟೆಯ ಸುತ್ತಮುತ್ತಲು ಬರುವ ಗ್ರಾಮಗಳ ಜನರಿಗೆ. ಅವರು ಈ ನೀರನ್ನೇ ಕುಡಿಯಲು ಬಳಸುತ್ತಾರೆ. ಮುಖ್ಯವಾಗಿ ವರ್ಷದಲ್ಲಿ ಕೇವಲ ಮೂರು ತಿಂಗಳು ಮಾತ್ರ ಕೃಷ್ಣಾ ನದಿ ನೀರು ಹರಿಯುತ್ತದೆ. ಉಳಿದ 9 ತಿಂಗಳು ಆಲಮಟ್ಟಿ ಅಣೆಕಟ್ಟೆಯಿಂದ ಸಂಗ್ರಹಿಸಿದ ನೀರನ್ನೇ ಕುಡಿಯಲು ಬಳಸುವ ಪರಿಸ್ಥಿತಿ ಇದೆ. ಹೀಗೆ ಒಂಬತ್ತು ತಿಂಗಳು ವಿಷಯುಕ್ತ ನೀರನ್ನು ಕುಡಿಯುವುದರಿಂದ ಆಗುವ ಅಪಾಯಗಳಿಗೆ ಯಾರು ಹೊಣೆ? ಎಂಬ ಪ್ರಶ್ನೆಗೆ ಜನಪ್ರತಿನಿಧಿಗಳು ಉತ್ತರಿಸಬೇಕಿದೆ.
ಅಪಾಯಕಾರಿ ನೀರನ್ನು ಹಾಗೂ ಸಕ್ಕರೆ ಕಾರ್ಖಾನೆಯಿಂದ ಬರುವ ಕಬ್ಬು ವಾಸನೆಯಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ರಾಜ್ಯದ ಜನರ ಹಿತ ಕಾಪಾಡಬೇಕಾದ ಜನಪ್ರತಿನಿಧಿಗಳೇ ಈ ರೀತಿ ಮಾಡುವಾಗ ಬಡವರ ಗೋಳು ಕೇಳೋರು ಯಾರು ಎಂದು ಹಲವು ಮಹಿಳೆಯರು, ಹಿರಿಯರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೈಲರ್ ಮಲೋಸಸ್ ಹಾನಿ
ಕಳೆದ ವರ್ಷ ಕಬ್ಬಿನ ಮಳ್ಳಿ ಸಂಗ್ರಹಿಸುವ ಬೈಲರ್ ಮಲೋಸಸ್ ಓವರ್ ಫುಲ್ ಆಗಿ ಸೋರುತ್ತಿದ್ದು ಅಪಾಯಕಾರಿ ವಿಷಕಾರಿ ನೀರು ಇದೆ ಹಳ್ಳದಿಂದ ಕೃಷ್ಣಾ ನದಿಗೆ ಸೇರೆ ಇದೇ ನೀರನ್ನು ಕುಡಿದು ಹಾಡು ಮತ್ತು ಎಮ್ಮೆಗಳು ಸತ್ತಿರುತ್ತವೆ ನಮ್ಮ ಮಾಹಿತಿ ಇದ್ದು ದನಕರುಗಳು, ಜಲಜೀವ ರಾಶಿಗಳು ಮತ್ತು ಮನುಷ್ಯರು ಇದನ್ನು ಕುಡಿದರೆ ಇವರ ಜೀವಕ್ಕೆ ಅಪಾಯ. ಇಂತಹ ನೀರು ಕೂಡ ಈ ಹಳ್ಳದಿಂದ ಕೃಷ್ಣಾ ನದಿಗೆ ಸೇರುತ್ತಿದೆ.

ಬಂಗಾರಕ್ಕೂ ಹಾನಿ?
ಈ ವಾಸನೆ ಹಾಗೂ ನೀರಿಂದ ಈ ಭಾಗದಲ್ಲಿರುವ ತೋಟದ ಮನೆಯಲ್ಲಿ ವಾಸವಿರುವ ಹಲವು ಮನೆಗಳಲ್ಲಿ ಮನೆಯಲ್ಲಿಟ್ಟಿರುವ ಬಂಗಾರದ ವಸ್ತುಗಳು ಕೂಡ ಕಪ್ಪುವರ್ಣವಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

