ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಕೂಡಲೇ ಬೂದಿಹಾಳ ಪೀರಾಪೂರ ನೀರಾವರಿ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ವಿಜಯಪುರ ಜಿಲ್ಲೆಯ ಸಮಗ್ರ ನೀರಾವರಿಗೊಳಿಸಲು ಮುಂದಾಗಿ, ಇಲ್ಲವಾದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಅಖಂಡ ಕರ್ನಾಟಕ ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.
ಗ್ರಾಮದ ಪ್ರವಾಸಿ ಮಂದಿರದಲ್ಲಿ ಬೂದಿಹಾಳ-ಪೀರಾಪೂರ ನೀರಾವರಿ ಯೋಜನೆಯ ಕ್ರಿಯಾಶೀಲ ಸಮಿತಿ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮುಖಂಡರಾದ ಪ್ರಭುಗೌಡ ಲಿಂಗದಳ್ಳಿ ಮತ್ತು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮಾತನಾಡಿ ಈ ಯೋಜನೆಯು ಶೇಕಡಾ ೯೦ ಪ್ರತಿಶತ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದ್ದು, ಇನ್ನೂ ಕೇವಲ ೧೦ ಪ್ರತಿಶತ ಬಾಕಿ ಇರುವ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಹೇಳಿದ ಅವರು ಇನ್ನೂ ಈ ಕಾಮಗಾರಿಗೆ ಬಿಡುಗಾವಲಿಗಳ ನಿರ್ಮಾಣಕ್ಕಾಗಿ ಅಂದಾಜು ೧೭೦ ಕೋಟಿ ರೂಪಾಯಿ ಹಣಕಾಸಿನ ಮಂಜೂರಾತಿ ಅವಶ್ಯಕತೆಯಿದ್ದು, ಜಿಲ್ಲಾಧಿಕಾರಿಗಳಿಗೆ ಈ ಕುರಿತು ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ಈ ಯೋಜನೆ ಪೂರ್ಣವಾದರೆ ಸುಮಾರು ೫೫ ಸಾವಿರ ಹೆಕ್ಟೇರ್ ರೈತರ ಕೃಷಿ ಭೂಮಿ ಸಂಪೂರ್ಣ ನೀರಾವರಿಯಾಗಿ ಈ ಭಾಗದ ಎಲ್ಲ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಮುಖಂಡರಾದ ಪ್ರಭುಗೌಡ ಬಿರಾದಾರ, ಸೋಮನಗೌಡ ಯಾಳವಾರ, ಸಿದ್ದು ಬುಳ್ಳಾ, ಹಣಮಂತ ವಡ್ಡರ ಸೇರಿದಂತೆ ಕಲಕೇರಿ ಸುತ್ತಮುತ್ತಲಿನ ಸುಮಾರು ೨೦ ಹಳ್ಳಿಗಳ ರೈತ ಮುಖಂಡರು ಮತ್ತು ಪ್ರಗತಿಪರ ಚಿಂತಕರು ಮಾತನಾಡಿ, ಈ ಯೋಜನೆ ಅಡಿ ಸುಮಾರು ೩೮ ಹಳ್ಳಿಗಳು ಬರುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಈ ಹೋರಾಟದಲ್ಲಿ ಪಾಲ್ಗೊಳ್ಳಲು ಕರೆ ನೀಡಲಾಯಿತು.
ಮಂಗಳವಾರ ದಿ.೧೮ ರಂದು ಬೆಂಗಳೂರಿಗೆ ಎಲ್ಲ ರೈತ ನಿಯೋಗದೊಂದಿಗೆ ತೆರಳಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ರಾಜ್ಯದ ಮುಖ್ಯಮಂತ್ರಿಗಳಿಗೆ ಮತ್ತು ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ ಶಿವಕುಮಾರ ಅವರಿಗೆ ಈ ಭಾಗದ ಎಲ್ಲ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಜನಪ್ರತಿನಿಧಿಗಳ ನೇತೃತ್ವದಲ್ಲಿ ಈ ಯೋಜನೆಗೆ ಅವಶ್ಯವಿರುವ ೧೭೦ ಕೋಟಿ ರೂ.ಗಳನ್ನು ಮಂಜೂರು ಮಾಡುವಂತೆ ಆಗ್ರಹಿಸಬೇಕೆಂದು ನಿರ್ಣಯಿಸಲಾಯಿತು.
ಒಂದು ವೇಳೆ ಈ ಯೋಜನೆಯ ಹಣಕಾಸಿನ ವ್ಯವಸ್ಥೆ ಆಗದಿದ್ದರೆ ಮುಂದೆ ಎಲ್ಲ ರೈತರು ಕೂಡಿಕೊಂಡು ವಿಜಯಪುರದ ವರೆಗೆ ಪಾದಯಾತ್ರೆ ಮಾಡುವ ಮೂಲಕ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡುವ ವಿಚಾರವನ್ನು ಪ್ರಸ್ತಾಪಿಸಲಾಯಿತು.
ಈಗಾಗಲೇ ಜಿಲ್ಲೆಯಲ್ಲಿ ೨೦ಕ್ಕೂ ಹೆಚ್ಚು ಏತ ನೀರಾವರಿ ಕಾಮಗಾರಿಗಳು ನಡೆಯುತ್ತಿದ್ದು, ಅದರಲ್ಲಿ ಯಾವ ಕಾಮಗಾರಿಯೂ ಇನ್ನೂವರೆಗೆ ಪೂರ್ಣಗೊಂಡಿಲ್ಲ ಅದರಲ್ಲಿ ಇದೂ ಕೂಡಾ ಒಂದಾಗಿದ್ದು, ಇದರಿಂದ ಕೊನೆ ಭಾಗದ ಹಳ್ಳಿಯ ರೈತರಿಗೆ ನೀರು ತಲುಪಿಲ್ಲ ಇದಕ್ಕೆ ನೇರವಾಗಿ ನಮ್ಮ ಜನಪ್ರತಿನಿಧಿಗಳೇ ಕಾರಣ, ಅವರ ನಿರ್ಲಕ್ಷö್ಯ ಧೋರಣೆಯೇ ಕಾರಣ ಎಂದು ಎಲ್ಲರೂ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಆಲಮಟ್ಟಿ ಜಲಾಶಯದ ಅಣೆಕಟ್ಟುನ್ನು ಎತ್ತರಿಸಿದಾಗ ಮಾತ್ರ ಜಿಲ್ಲೆಯಲ್ಲಿ ಸಂಪೂರ್ಣ ನೀರಾವರಿ ಆಗಲು ಸಾಧ್ಯವಾಗುತ್ತದೆ ಇದಕ್ಕೆ ಸುಮಾರು ಒಂದು ಲಕ್ಷ ಕೋಟಿ ಹಣಕಾಸಿನ ವ್ಯವಸ್ಥೆ ಬೇಕಾಗುತ್ತದೆ, ಇದಕ್ಕೆ ಎಲ್ಲ ಜನಪ್ರತಿನಿಧಿಗಳು, ಮಠಾಧೀಶರು, ರೈತರು ಮತ್ತು ರೈತ ಮುಖಂಡರು ನಿರಂತರವಾಗಿ ಪ್ರಯತ್ನ ಮಾಡಿದಾಗ ಮಾತ್ರ ಈ ಯೋಜನೆ ಸಾಕಾರಗೊಳ್ಳಲು ಸಾಧ್ಯವಾಗುತ್ತದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಈ ವೇಳೆ ಮಲ್ಲಿಕಾರ್ಜುನ ಹಿರೇಮಠ, ಶಿವಪುತ್ರ ಸಾತಿಹಾಳ, ಕಿರಣಕುಮಾರ ದೇಸಾಯಿ, ಶಿವು ಮಾಡಗಿ, ಗುರು ಪಡಶೆಟ್ಟಿ, ಬಾಲಪ್ಪ ತಳವಾರ, ಗುತ್ತಪ್ಪಗೌಡ ಕೋಟಿಖಾನಿ, ಕಂಠೀರವ ದೇಸಾಯಿ, ವಿಶ್ವನಾಥ ರಾಠೋಡ, ಅಶೋಕ ಮಗದಾಳ, ಶಿವಾನಂದ ವಾಲೀಕಾರ, ಪ್ರಕಾಶ ಪಡಶೆಟ್ಟಿ, ರಮೇಶ ಮೋಪಗಾರ, ಶರಣು ಕೌದಿ, ಕಾಶಿನಾಥ ತಳವಾರ, ಭೀಮು ಬುಳ್ಳಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

