ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಕರೆ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸಂವಿಧಾನದಲ್ಲಿ ಮಹಿಳೆಯರಿಗೆ ನೀಡಲಾದ ವಿಶೇಷ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಕರೆ ನೀಡಿದರು.
ತಾಲೂಕಿನ ಢವಳಗಿ ಗ್ರಾಮದ ಕಸ್ತೂರಿಬಾ ವಸತಿ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಇಲಾಖೆ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಮಹಿಳೆಯರಿಗೆ ಮತದಾನದ ಹಕ್ಕು ಸೇರಿದಂತೆ ವಿವಿಧ ಹಕ್ಕುಗಳು ಇರಲಿಲ್ಲ. ಅಡುಗೆ ಮನೆಗೆ ಮಾತ್ರ ಸೀಮಿತ ಎಂಬಂತೆ ನಡೆಸಿಕೊಳ್ಳಲಾಗುತ್ತಿತ್ತು. ಈ ಕಳಂಕವನ್ನು ಹೋಗಲಾಡಿಸಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಸಮಾನತೆಯನ್ನು ಸಾರಿದರು. ಮಹಿಳೆಯರಿಗೆ ವಿಶೇಶ ಸವಲತ್ತುಗಳನ್ನು ಕಲ್ಪಿಸುವ ಮೂಲಕ ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆಯನ್ನು ತಂದಿದ್ದಾರೆ. ಸರ್ಕಾರ ಮಹಿಳೆಯರಿಗಾಗಿ ಹಲವಾರು ವಿಶೇಶ ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳ ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಗಳಾಗಬೇಕು. ಮಹಿಳೆಯರು ಸ್ವಾವಲಂಬಿಗಳಾದಾಗ ಸಮಾಜಕ್ಕೆ ಆರ್ಥಿಕ ಶಕ್ತಿ ಹೆಚ್ಚುತ್ತದೆ. ಆರ್ಥಿಕ ಶಕ್ತಿ ಹೆಚ್ಚಿದಾಗ ದೇಶದ ಪ್ರಗತಿ ಕಾಣಲು ಸಾಧ್ಯ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಮೂರ್ತಿ ಕುಂಬಾರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತಮಾಲಗತ್ತಿ ಮಾತನಾಡಿ, ಸ್ತ್ರೀ ಸಮಾನತೆ, ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ವಿವರಿಸಿದರು. ಹಿರಿಯ ನ್ಯಾಯವಾದಿ ಎನ್.ಆರ್.ಮೊಕಾಶಿ ವಿಶೇಶ ಉಪನ್ಯಾಸ ನೀಡಿದರು. ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಕಿರಿಯ ಸಿವಿಲ್ ನ್ಯಾಯಾಧೀಶರಾದ ಸಂಪತ್ತಕುಮಾರ ಬಳೂಳಗಿಡದ, ವಸತಿ ನಿಲಯದ ಭೂದಾನಿ ಬಸವಂತ್ರಾಯ ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕಿ ಸಜ್ಜನ, ಸಿಆರ್‌ಪಿ ಎಂ.ಎಸ್.ಮಾಕೊAಡ, ಬಿಆರ್‌ಪಿ ಸಿದ್ಧನಗೌಡ ಬಿರಾದಾರ, ಇಸಿಓ ಡಿ.ಬಿ.ಗುರಿಕಾರ, ನ್ಯಾಯವಾದಿಗಳ ಸಂಘದ ಪ್ರ.ಕಾರ್ಯದರ್ಶಿ ಪಿ.ಬಿ.ಗೌಡರ, ತಾಲೂಕು ಕಾನೂನು ಸೇವಾ ಸಮಿತಿಯ ಆಡಳಿತಾಧಿಕಾರಿ ಅರವಿಂದ ಕುಂಬಾರ, ದಲಾಯತ ಮಹಾಂತೇಶ ಹಚರೆಡ್ಡಿ ಸೇರಿದಂತೆ ಇತರರು ಇದ್ದರು. ಅನುದಾನಿತ ಶಾಲೆಯ ಮುಖ್ಯ ಶಿಕ್ಷಕ ರಮೇಶ ಮೂಲಿಮನಿ ಕಾರ್ಯಕ್ರಮವನ್ನು ನಿರ್ವಹಿಸಿದರು.

